Police Officer Suspended- ಕರ್ನಾಟಕ ನಾಗರಿಕ ಸೇವಾ ನಿಯಮ ಉಲ್ಲಂಘನೆ: ಮಂಗಳೂರು ಪೊಲೀಸ್ ಅಧಿಕಾರಿ ಅಮಾನತು
ಕರ್ನಾಟಕ ನಾಗರಿಕ ಸೇವಾ ನಿಯಮ ಉಲ್ಲಂಘನೆ: ಮಂಗಳೂರು ಪೊಲೀಸ್ ಅಧಿಕಾರಿ ಅಮಾನತು
ಮಂಗಳೂರಿನ ಪೊಲೀಸ್ ಇನ್ಸ್ಪೆಕ್ಟರ್ ಒಬ್ಬರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತು ಮಾಡಲಾಗಿದೆ. ಮಂಗಳೂರು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಅವರು ನೀಡಿದ ವರದಿಯ ಆಧಾರದಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಈ ಅಮಾನತು ಆದೇಶವನ್ನು ಹೊರಡಿಸಿದ್ದಾರೆ
ಖಾಸಗಿಯಾಗಿ, ಇಲಾಖೆಯ ಅನುಮತಿ ಇಲ್ಲದೆ, ದುಬೈ ರಾಷ್ಟ್ರಕ್ಕೆ ವಿದೇಶ ಪ್ರವಾಸ ಕೈಗೊಂಡಿರುವುದು ಉಲ್ಲೇಖಿತ ವರದಿಯಲ್ಲಿ ಕಂಡುಬಂದ ಹಿನ್ನೆಲೆಯಲ್ಲಿ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಮಂಗಳೂರಿನ ಸಂಚಾರ ಉತ್ತರ ವಿಭಾಗದ ಪೊಲೀಸ್ ನಿರೀಕ್ಷಕರಾಗಿದ್ದ ಮಹಮ್ಮದ್ ಶರೀಫ್, ತಮ್ಮ ಊರಿನ ಅತೀ ಅಗತ್ಯದ ಧಾರ್ಮಿಕ ಕಾರ್ಯಕ್ರಮ ಇದೆ ಎಂದು ಮಾರ್ಚ್ 16 ರಿಂದ 19 ರವರೆಗೆ ರಜೆ ಪಡೆದುಕೊಂಡಿದ್ದರು.
ಆದರೆ ಈ ರಜೆಯಲ್ಲಿ ಅವರು ಇಲಾಖೆಯ ಅನುಮತಿ ಪಡೆಯದೆ ವಿದೇಶ ಪ್ರವಾಸ ಕೈಗೊಂಡಿರುವುದು ದೃಡಪಟ್ಟಿದೆ.
ಒಬ್ಬ ಜವಾಬ್ದಾರಿಯುತ ಪೊಲೀಸ್ ಅಧಿಕಾರಿಯಾಗಿ ಮೇಲಾಧಿಕಾರಿಗಳ ಅನುಮತಿ ಪಡೆಯದೆ ವಿದೇಶ ಪ್ರಯಾಣ ಮಾಡಿದ್ದರು.
ಕರ್ನಾಟಕ ನಾಗರೀಕ ಸೇವಾ ನಿಯಮಗಳ ಪ್ರಕಾರ ಇಲಾಖೆಯ ಮೇಲಧಿಕಾರಿಗಳ ಪೂರ್ವಾನುಮತಿ ಪಡೆಯಬೇಕು ಎಂಬ ನಿಯಮ ಇದೆ. ಆದರೆ ಷರೀಫ್ ಈ ನಿಯಮವನ್ನು ಉಲ್ಲಂಘಿಸಿ ವಿದೇಶ ಪ್ರಯಾಣ ಕೈಗೊಂಡಿದ್ದಾರೆ.
ಆರೋಪಿ ಷರೀಫ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪೊಲೀಸ್ ಇಲಾಖೆಯಿಂದ ಅಮಾನತು ಮಾಡಲಾಗಿದೆ. ಪೊಲೀಸ್ ಇಲಾಖೆಯ ಅನುಮತಿ ಇಲ್ಲದೆ ಕೇಂದ್ರಸ್ಥಾನ ಬಿಟ್ಟು ಹೋಗಬಾರದು. ಒಂದು ವೇಳೆ ಕೇಂದ್ರಸ್ಥಾನ ಬಿಟ್ಟು ತೆರಳಿದ ಬಗ್ಗೆ ಪ್ರತ್ಯೇಕವಾದ ದೋಷಾರೋಪಣ ಸಲ್ಲಿಸಲಾಗುವುದು ಎಂದು ಆದೇಶದಲ್ಲಿ ಹೇಳಲಾಗಿದೆ.
ಅಮಾನತಿನ ಅವಧಿಯಲ್ಲಿ ಯಾವುದೇ ಖಾಸಗಿ ಉದ್ಯೋಗ, ವ್ಯಾಪಾರದಲ್ಲಿ ತೊಡಗಬಾರದು ಎಂಬ ದೃಢೀಕರಣ ಪತ್ರ ನೀಡಿ ನಿಯಮದಂತೆ ದೊರೆಯುವ ಜೀವನಾಧಾರ ಭತ್ಯೆ ಪಡೆದುಕೊಳ್ಳಲು ಅವರು ಅರ್ಹರಿರುತ್ತಾರೆ.