Labour Law: ಕಾರ್ಮಿಕ ಮೃತಪಟ್ಟರೆ, ಮಾಲೀಕರು ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನೀಡಬೇಕೆ..?
Labour Law: ಕಾರ್ಮಿಕ ಮೃತಪಟ್ಟರೆ, ಮಾಲೀಕರು ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನೀಡಬೇಕೆ..?
ನೌಕರ ಮೃತಪಟ್ಟ ದಿನದಿಂದಲೇ ಪರಿಹಾರ ನೀಡುವ ಮತ್ತು ಅದರ ಮೇಲೆ ಬಡ್ಡಿ ನೀಡುವ ಹೊಣೆಗಾರಿಕೆ ಇದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ನೌಕರರ ಪರಿಹಾರ ಕಾಯಿದೆ - 1923ರ ಅಡಿಯಲ್ಲಿ ಮೃತಪಟ್ಟ ದಿನದಿಂದ ಹೊಣೆಗಾರಿಕೆ ಆರಂಭವಾಗುತ್ತದೆ. ನ್ಯಾಯಾಲಯ ಆದೇಶ ನೀಡಿದ ದಿನದಿಂದ ಅಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.
ಪ್ರಕರಣ: ಶೋಭಾ Vs ವಿಠ್ಠಲ್ ರಾವ್ ಸಹಕಾರಿ ಸಕ್ಕರೆ ಕಾರ್ಖಾನೆ ಲಿಮಿಟೆಡ್
ನೌಕರರ ಪರಿಹಾರ ಕಾಯಿದೆಯ 4ಎ (1)ನೇ ಸೆಕ್ಷನ್ ಪ್ರಕಾರ, ಬಾಕಿ ಉಳಿಯುವ ದಿನದಿಂದಲೇ ಸೆಕ್ಷನ್ 4ರ ಅಡಿಯ ಪರಿಹಾರವನ್ನುಕೂಡಲೇ ಪಾವತಿಸಬೇಕು ಮತ್ತು ಕಾರ್ಮಿಕ ಮೃತಪಟ್ಟ ದಿನದಿಂದ ಪರಿಹಾರಕ್ಕೆ ಸಂಬಂಧಿಸಿದ ಬಡ್ಡಿಯನ್ನು ನೀಡಬೇಕು ಎಂದು ನ್ಯಾಯಪೀಠ ತಿಳಿಸಿತು.
ಪ್ರಕರಣದ ವಿವರ:
ಹಾವು ಕಡಿತದಿಂದ ಸಾವನ್ನಪ್ಪಿದ ಕಾರ್ಮಿಕರೊಬ್ಬರ ಪರಿಹಾರವನ್ನು ಮೃತರ ವಾರಸುದಾರರಿಗೆ ನೀಡಲು ಗುತ್ತಿಗೆದಾರರು ನಿರಾಕರಿಸಿದ್ದರು. ಮರಣ ಹೊಂದಿದವರು 'ಗುತ್ತಿಗೆ ಕಾರ್ಮಿಕ' ಎಂಬುದು ಗುತ್ತಿಗೆದಾರರ ವಾದವಾಗಿತ್ತು.
ಮೃತರ ವಾರಿಸುದಾರರು ಕಾರ್ಮಿಕ ಪರಿಹಾರ ಆಯುಕ್ತರನ್ನು ಸಂಪರ್ಕಿಸಿ ರೂ. 5 ಲಕ್ಷ ಪರಿಹಾರ ಕೋರಿದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ಆಯುಕ್ತರು ವಾರ್ಷಿಕ ಶೇ 12ರ ಬಡ್ಡಿದರದೊಂದಿಗೆ ಪರಿಹಾರ ನೀಡಲು ಗುತ್ತಿಗೆದಾರರಿಗೆ ಆದೇಶ ನೀಡಿದರು. ಈ ಕಾಯಿದೆಯ ಸೆಕ್ಷನ್ 4ಎ (3) (ಬಿ) ಅಡಿ ಪರಿಹಾರ ಮೊತ್ತದ ಮೇಲೆ ಶೇ 50ರಷ್ಟು ದಂಡವನ್ನೂ ವಿಧಿಸಿದರು.
ಈ ಆದೇಶದ ವಿರುದ್ಧ ಗುತ್ತಿಗೆದಾರರು ಬಾಂಬೆ ಹೈಕೋರ್ಟ್‌ಗೆ ಮೊರೆ ಹೋದರು. ಹೈಕೋರ್ಟ್ ಈ ಮೇಲ್ಮನವಿಯನ್ನು ವಜಾಗೊಳಿಸಿತು. ಆದರೆ, ದಂಡವನ್ನು ರದ್ದುಗೊಳಿಸಿ ಅವಘಡ ಸಂಭವಿಸಿದ ದಿನದ ಬದಲಿಗೆ ಆಯುಕ್ತರು ಆದೇಶ ನೀಡಿದ ಒಂದು ತಿಂಗಳ ನಂತರದ ದಿನದಿಂದ ಬಡ್ಡಿ ಪಾವತಿಸಲು ಆದೇಶ ಮಾರ್ಪಡಿಸಿತು. ಹೈಕೋರ್ಟ್‌ನ ಈ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನು ವಿಚಾರಣೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್, ಮೃತರ ಮರಣದ ತಕ್ಷಣ ಪರಿಹಾರ ಪಾವತಿಸುವ ಹೊಣೆಗಾರಿಕೆ ಉಂಟಾಗುತ್ತದೆ. ಮೃತರ ಮರಣದ ದಿನದಿಂದ ಬಡ್ಡಿ ಪಾವತಿಸಬೇಕಾಗುತ್ತದೆ ಎಂದು ಹೇಳಿತು.
ಬಡ್ಡಿ ವಿಧಿಸುವ ನಿಯಮ ಸೆಕ್ಷನ್ 4ಎ (3) (ಎ) ಅಡಿಯಲ್ಲಿ ಇರುತ್ತದೆ. ದಂಡ ವಿಧಿಸುವ ನಿಯಮ ಸೆಕ್ಷನ್ 4ಎ (3) (ಬಿ) ಅಡಿಯಲ್ಲಿ ಬರುತ್ತದೆ ಎಂದು ನ್ಯಾಯಪೀಠ ತೀರ್ಪಿನಲ್ಲಿ ಹೇಳಿತು.
ತೀರ್ಪಿನ ಪ್ರತಿಗೆ ಇಲ್ಲಿ ಕ್ಲಿಕ್ ಮಾಡಬಹುದು:
ಪ್ರಕರಣ: ಶೋಭಾ Vs ವಿಠ್ಠಲ್ ರಾವ್ ಸಹಕಾರಿ ಸಕ್ಕರೆ ಕಾರ್ಖಾನೆ ಲಿಮಿಟೆಡ್