Hijab issue- legal notice to minister: ಹಿಜಬ್ ಕುರಿತ ಶಿಕ್ಷಣ ಸಚಿವರ ಹೇಳಿಕೆ: ವಕೀಲರ ಸಂಘದಿಂದ ಲೀಗಲ್ ನೋಟೀಸ್
ಹಿಜಬ್ ಕುರಿತ ಶಿಕ್ಷಣ ಸಚಿವರ ಹೇಳಿಕೆ: ವಕೀಲರ ಸಂಘದಿಂದ ಲೀಗಲ್ ನೋಟೀಸ್
ಹಿಜಬ್ ಕುರಿತು ಶಿಕ್ಷಣ ಸಚಿವರು ಗೊಂದಲಭರಿತ ಹಾಗೂ ಹೈಕೋರ್ಟ್ ತೀರ್ಪಿಗೆ ಭಿನ್ನವಾದ ಹೇಳಿಕೆ ನೀಡಿದ್ದು, ಸಚಿವರು ತಮ್ಮ ವಿವಾದಿತ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಅಗ್ರಹಿಸಿ ಎಐಎಲ್ಎಜೆ ಹೆಸರಿನ ವಕೀಲರ ಸಂಘ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರಿಗೆ ಲೀಗಲ್ ನೋಟಿಸ್ ಜಾರಿ ಮಾಡಿದೆ.
ಸಚಿವರ ಹೇಳಿಕೆಗೂ ಸರ್ಕಾರದ ಸಮವಸ್ತ್ರ ಕುರಿತ ಅಧಿಸೂಚನೆಗೂ ಭಿನ್ನತೆ ಇದೆ. ಅಷ್ಟೇ ಅಲ್ಲ, ಹಿಜಾಬ್ ಪ್ರಕರಣದಲ್ಲಿ ಹೈಕೋರ್ಟ್ ನೀಡಿರುವ ತೀರ್ಪಿನ ಬಗ್ಗೆಯೂ ಗೊಂದಲ ಹುಟ್ಟಿಸಿದ್ದೀರಿ. ನ್ಯಾಯಾಲಯ ತನ್ನ ತೀರ್ಪಿನಲ್ಲಿ ಸಂಪೂರ್ಣ ಹಿಜಾಬ್ ನಿಷೇಧಿಸಿರುವ ಕುರಿತು ಉಲ್ಲೇಖಿಸಿಲ್ಲ. ತರಗತಿ ಹೊರಗೆ ಅವರಿಷ್ಟದ ಉಡುಪು ಧರಿಸಲು ಸ್ವತಂತ್ರರು ಎಂದು ಹೇಳಿದೆ ಎಂಬುದನ್ನು ನೋಟೀಸಿನಲ್ಲಿ ಉದ್ದರಿಸಲಾಗಿದೆ.
ಹಾಗಾಗಿ, ಶಿಕ್ಷಣ ಸಂಸ್ಥೆಗಳಲ್ಲಿ ಸಮವಸ್ತ್ರ ಧರಿಸುವ ಕುರಿತ ಹೇಳಿಕೆಯನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಅವರ ವಿರುದ್ಧ ಅಗತ್ಯ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ನೋಟೀಸಿನಲ್ಲಿ ಹೇಳಲಾಗಿದೆ.
ಲೀಗಲ್ ನೋಟಿಸ್ ವಿವರ:
ಹಿಜಾಬ್ ಸೇರಿದಂತೆ ಧಾರ್ಮಿಕ ಸಂಕೇತದ ಉಡುಪುಗಳನ್ನು ಧರಿಸಿ ಪರೀಕ್ಷಾ ಕೊಠಡಿಗಳಿಗೆ ಬರುವಂತಿಲ್ಲ. ಬಂದರೂ ಕೊಠಡಿ ಒಳಗೆ ಪ್ರವೇಶವಿಲ್ಲ. ಅಹಂಕಾರ ಬಿಟ್ಟು ಪರೀಕ್ಷೆಗೆ ಬನ್ನಿ, ಬಹುತೇಕ ಎಲ್ಲ ವಿದ್ಯಾರ್ಥಿಗಳು ಹೈಕೋರ್ಟ್ ಆದೇಶ ಮತ್ತು ಸರ್ಕಾರದ ಅಧಿಸೂಚನೆ ಪಾಲಿಸುತ್ತಿದ್ದಾರೆ ಎಂದು ಸಚಿವರು ಹೇಳಿಕೆ ನೀಡಿದ್ದರು.
ಈ ಹೇಳಿಕೆಗೂ ಸಮವಸ್ತ್ರ ಕುರಿತ ಸರ್ಕಾರದ ಅಧಿಸೂಚನೆಗೂ ಭಿನ್ನತೆ ಇದೆ. ಹಿಜಾಬ್ ಪ್ರಕರಣದಲ್ಲಿ ಹೈಕೋರ್ಟ್ ನೀಡಿರುವ ತೀರ್ಪಿನ ಬಗ್ಗೆಯೂ ಹೇಳಿಕೆ ಗೊಂದಲ ಹುಟ್ಟಿಸಿದೆ. ಈ ತೀರ್ಪಿನಲ್ಲಿ ಸಂಪೂರ್ಣ ಹಿಜಾಬ್ ನಿಷೇಧ ಕುರಿತು ಉಲ್ಲೇಖ ಇಲ್ಲ. ತರಗತಿ ಹೊರಗೆ ಅವರಿಷ್ಟದ ಉಡುಪು ಧರಿಸಲು ಸ್ವತಂತ್ರರು ಎಂದು ಹೇಳಿದೆ.
ಸಂವಿಧಾನದ ಮೇಲೆ ಪ್ರಮಾಣ ಮಾಡಿ ಸಚಿವರಾಗಿರುವ ನಿಮ್ಮ ಬೇಜವಾಬ್ದಾರಿತನದ ಹೇಳಿಕೆಗಳು ಸಮಾಜದ ಸ್ವಾಸ್ತ್ಯ ಹಾಗೂ ಕೋಮು ಸೌಹಾರ್ದತೆಯನ್ನು ಹಾಳು ಮಾಡುತ್ತಿವೆ. ಇಂತಹ ಹೇಳಿಕೆಗಳಿಂದಲೇ, ಗದಗದಲ್ಲಿ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟ ಏಳು ಶಿಕ್ಷಕರು ಅಮಾನತುಗೊಂಡಿದ್ದಾರೆ ಎಂದು ನೋಟೀಸ್‌ನಲ್ಲಿ ಹೇಳಲಾಗಿದೆ.
ಜಿಲ್ಲಾ ಡಿಡಿಪಿಐ ಕೂಡ ಹೈಕೋರ್ಟ್ ಆದೇಶ ಉಲ್ಲಂಘನೆ ಮಾಡಿದ ಕಾರಣಕ್ಕೆ ಶಿಕ್ಷಕರನ್ನು ಅಮಾನತು ಮಾಡಿರುವುದಾಗಿ ಹೇಳಿಕೆ ನೀಡಿದ್ದಾರೆ. ನಿಮ್ಮ ಹೇಳಿಕೆಗಳು ಹೈಕೋರ್ಟ್ ಆದೇಶವನ್ನು ಮೀರಿದ್ದು, ಅಮಾಯಕ ಮುಸ್ಲಿಂ ಹೆಣ್ಣು ಮಕ್ಕಳ ಶಿಕ್ಷಣದ ಹಕ್ಕಿಗೆ ಧಕ್ಕೆ ತರುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದೆ.