Attack on Judge- ಕಾರಣ ಕ್ಷುಲ್ಲಕಕ್ಕೆ ಕಚೇರಿ ಸಹಾಯಕನೇ ನ್ಯಾಯಾಧೀಶರಿಗೆ ಚೂರಿಯಿಂದ ಇರಿದ!
ಕಾರಣ ಕ್ಷುಲ್ಲಕಕ್ಕೆ ಕಚೇರಿ ಸಹಾಯಕನೇ ನ್ಯಾಯಾಧೀಶರಿಗೆ ಚೂರಿಯಿಂದ ಇರಿದ!
ಕಚೇರಿ ಸಹಾಯಕನೇ ನ್ಯಾಯಾಧೀಶರಿಗೆ ಚೂರಿಂದ ಇರಿದ ಪ್ರಕರಣ ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ನಾಲ್ಕನೇ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಎಂ ಪೊನ್‌ಪಾಂಡಿ ಅವರಿಗೆ ಕಚೇರಿ ಸಹಾಯಕ ಎ ಪ್ರಕಾಶ್ ಎಂಬಾತ ಚೂರಿ ಇರಿದಿದ್ದಾನೆ.
ನ್ಯಾಯಾಧೀಶರ ಕಚೇರಿಯಲ್ಲೇ ಈ ಘಟನೆ ನಡೆದಿದ್ದು, ನ್ಯಾಯಾಧೀಶರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಅವರನ್ನು ಸ್ಥಳೀಯ ಮೋಹನ್ ಕುಮಾರಮಂಗಲಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ನಾಲ್ಕನೇ ಜೆಎಂಎಫ್‌ಸಿ ನ್ಯಾಯಾಧೀಶರಾದ ಎಂ ಪೊನ್‌ಪಾಂಡಿ ಮೇಲೆ ಕಚೇರಿ ಸಹಾಯಕ ಎ ಪ್ರಕಾಶ್ ಹಲ್ಲೆ ನಡೆಸಿದ್ದಾನೆ. ನ್ಯಾಯಾಧೀಶರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿ ಪ್ರಕಾಶ್ ವಿರುದ್ಧ ಹಸ್ತಂಪಟ್ಟಿ ಪೊಲೀಸರು ಐಪಿಸಿ ಸೆಕ್ಷನ್ 307ರ ಅಡಿ (ಕೊಲೆ ಯತ್ನ) ಪ್ರಕರಣ ದಾಖಲಿಸಿದ್ದಾರೆ.
ಪ್ರಕಾಶ್ ತನ್ನ ವರ್ಗಾವಣೆಯಿಂದ ಅಸಮಾಧಾನಗೊಂಡಿದ್ದ. ಈ ವರ್ಗಾವಣೆಗೆ ಕಾರಣವೇನು ಎಂದು ಆತ ಕೇಳಿದಾಗ ʼಪ್ರಧಾನ ಜಿಲ್ಲಾ ನ್ಯಾಯಾಧೀಶರು ವರ್ಗಾವಣೆ ಆದೇಶ ಹೊರಡಿಸಿದ್ದಾರೆʼ ಎಂದು ನ್ಯಾ. ಪೊನ್‌ಪಾಂಡಿ ತಿಳಿಸಿದ್ದರು. ಇದರಿಂದ ಕೆರಳಿದ ಆತ ನ್ಯಾಯಾಧೀಶರ ಮೇಲೆ ಚಾಕುವಿನಿಂದ ಪ್ರಹಾರ ಮಾಡಿದ.
ಘಟನೆಯ ಹಿನ್ನೆಲೆಯಲ್ಲಿ ನ್ಯಾಯಾಂಗ ಅಧಿಕಾರಿಗಳ ಸುರಕ್ಷತೆಯ ವಿಷಯ ಹೆಚ್ಚಾಗಿ ಗಮನ ಸೆಳೆದಿದೆ. ಕಳೆದ ವರ್ಷದ ಜುಲೈನಲ್ಲಿ ಜಿಲ್ಲಾ ನ್ಯಾಯಾಧೀಶರೊಬ್ಬರನ್ನು ಧನ್‌ಬಾದ್‌ನಲ್ಲಿ ರಸ್ತೆ ಅಪಘಾತ ನಡೆಸಿ ಹತ್ಯೆ ಮಾಡಲಾಗಿತ್ತು. ಈ ಬಗ್ಗೆ ಸುಪ್ರೀಂ ಕೋರ್ಟ್ ಮಧ್ಯಪ್ರವೇಶದಿಂದಾಗಿ ಪೊಲೀಸರು ಇದನ್ನು ಮರ್ಡರ್ ಎಂದು ಪರಿಗಣಿಸಿ ತನಿಖೆ ನಡೆಸಿದ್ದರು.
ಇದಾದ ಕೆಲ ಸಮಯದ ಬಳಿಕ ದೆಹಲಿ ನ್ಯಾಯಾಲಯದೊಳಗೆ ಶೂಟೌಟ್ ನಡೆದಿತ್ತು. ಮೂರು ತಿಂಗಳ ಹಿಂದಷ್ಟೇ ಅದೇ ನ್ಯಾಯಾಲಯದಲ್ಲಿ ಸ್ಫೋಟ ಸಂಭವಿಸಿತ್ತು. ನ್ಯಾಯಾಲಯದಲ್ಲಿ ಅಪರಾಧ ಕೃತ್ಯಗಳು, ಹಲ್ಲೆ, ಕೊಲೆ ಯತ್ನಗಳು ನಡೆಯುತ್ತಿರುವುದು ಶೋಚನೀಯ ಸಂಗತಿಯಾಗಿದೆ.