SC on Regular hearing- ಏಪ್ರಿಲ್ 4ರಿಂದ ಪೂರ್ಣ ಪ್ರಮಾಣದಲ್ಲಿ ಭೌತಿಕ ವಿಚಾರಣೆ: ಸುಪ್ರೀಂ ಕೋರ್ಟ್
ಏಪ್ರಿಲ್ 4ರಿಂದ ಪೂರ್ಣ ಪ್ರಮಾಣದಲ್ಲಿ ಭೌತಿಕ ವಿಚಾರಣೆ: ಸುಪ್ರೀಂ ಕೋರ್ಟ್
ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣಕ್ಕೆ ವರ್ಚುವಲ್ ವಿಧಾನ ಅಳವಡಿಸಿಕೊಂಡಿದ್ದ ಸುಪ್ರೀಂಕೋರ್ಟ್ ಏಪ್ರಿಲ್ 4, 2022ರಿಂದ ಪೂರ್ಣ ಪ್ರಮಾಣದ ಭೌತಿಕ ಕಾರ್ಯಚಟುವಟಿಕೆ ನಡೆಸಲಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಬಹಿರಂಗ ನ್ಯಾಯಾಲಯದಲ್ಲಿ ಈ ವಿಷಯ ತಿಳಿಸಿದರು. ವಕೀಲರು ಇಚ್ಚಿಸಿದರೆ, ವಾರದ ಎರಡು ದಿನ ಅಂದರೆ, ಸೋಮವಾರ ಮತ್ತು ಶುಕ್ರವಾರ ಲಿಂಕ್‌ಗಳನ್ನು ಒದಗಿಸುತ್ತೇವೆ ಎಂದು ತಿಳಿಸಿದರು. ವಕೀಲ ಸಮುದಾಯದ ಪರವಾಗಿ ಸುಪ್ರೀಂ ಕೋರ್ಟ್ ವಕೀಲರ ಸಂಘದ ಅಧ್ಯಕ್ಷ ವಿಕಾಸ್ ಸಿಂಗ್ CJIಗೆ ಧನ್ಯವಾದ ಅರ್ಪಿಸಿದರು.
ಮಂಗಳವಾರ, ಬುಧವಾರ ಮತ್ತು ಗುರುವಾರದಂದು ನಾನ್ ಮಿಸಲೇನಿಯಸ್ ಪ್ರಕರಣಗಳ ವಿಚಾರಣಾ ದಿನಗಳಾಗಿದ್ದು, ಸುಪ್ರೀಂ ಕೋರ್ಟ್ ಎಂದಿನಂತೆ ಭೌತಿಕವಾಗಿ ವಿಚಾರಣೆ ನಡೆಸುತ್ತಿದೆ. ಸೋಮವಾರ ಮತ್ತು ಶುಕ್ರವಾರದಂದು VC ಮೂಲಕ ಪ್ರಕರಣಗಳ ವಿಚಾರಣೆ ನಡೆಯುತ್ತಿದೆ.
ಮಹಾಮಾರಿ ಕೊರೋನಾ ವ್ಯಾಪಿಸಿದ ಕಾರಣ, 2020ರ ಮಾರ್ಚ್ 23 ರಂದು ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಸುಪ್ರೀಂ ಕೋರ್ಟ್ ವರ್ಚುವಲ್ ವಿಚಾರಣೆ ನಡೆಸಿತ್ತು.
ಆ ಬಳಿಕ, ಮುಂದಿನ ವರ್ಷ ಕೊರೋನಾ 2ನೇ ಅಲೆಯಿಂದಾಗಿ ಭೌತಿಕ ವಿಚಾರಣೆ ನಡೆಸುವ ವಿಚಾರ ಕಾರ್ಯರೂಪಕ್ಕೆ ಬಂದಿರಲಿಲ್ಲ. 3ನೇ ಅಲೆಯಲ್ಲಿ ಮತ್ತೊಮ್ಮೆ ವರ್ಚುವಲ್ ವಿಧಾನಕ್ಕೆ ಮರಳುವ ಮೊದಲು ಅದು ಸೀಮಿತ ನೆಲೆಯಲ್ಲಿ ಭೌತಿಕ ವಿಚಾರಣೆಯನ್ನು ಶುರು ಮಾಡಿತ್ತು.
ಕೊರೋನಾ ಸೋಂಕು ಪ್ರಕರಣ ನಿಯಂತ್ರಣವಾಗಿದ್ದು, 2022ರ ಫೆಬ್ರವರಿಯಲ್ಲಿ ಆರಂಭವಾಗಿದ್ದ ಭೌತಿಕ ವಿಚಾರಣೆ ಈಗ ಮುಂದುವರಿದಿದೆ.