SC Decision on daughter's claim in Divorcee Father's share- ತಾಯಿಯಿಂದ ವಿಚ್ಚೇದಿತ ತಂದೆ ಜೊತೆ ಸಂಬಂಧ ಬಯಸದ ಮಗಳಿಗೆ ಆತನ ಹಣ ಪಡೆಯುವ ಹಕ್ಕಿಲ್ಲ: ಸು. ಕೋರ್ಟ್
ತಾಯಿಯಿಂದ ವಿಚ್ಚೇದಿತ ತಂದೆಯ ಜೊತೆ ಸಂಬಂಧ ಬಯಸದ ಮಗಳಿಗೆ ಆತನ ಹಣ ಪಡೆಯುವ ಹಕ್ಕಿಲ್ಲ: ಸುಪ್ರೀಂ ಕೋರ್ಟ್
ಹೆತ್ತ ತಾಯಿಯಿಂದ ವಿಚ್ಚೇದನ ಪಡೆದಿರುವ ತಂದೆಯ ಜೊತೆ ಸಂಬಂಧ ಕಡಿದುಕೊಳ್ಳಲು ಇಚ್ಚಿಸುವ ಮಗಳು, ತನ್ನ ಶಿಕ್ಷಣ ಅಥವಾ ಮದುವೆಗೆ ತಂದೆಯಿಂದ ಹಣ ಪಡೆಯುವ ಹಕ್ಕು ಹೊಂದಿರುವುದಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ಮಹತ್ವದ ನೀಡಿದೆ.
ಪ್ರಕರಣ: ಅಜಯ್ ಕುಮಾರ್ ರಾಥಿ Vs ಸೀಮಾ ರಾಥೀ (ಸುಪ್ರೀಂ ಕೋರ್ಟ್ Dated 10-03-2022)
Civil Appeal No.5141/2011
ಈ ಪ್ರಕರಣದಲ್ಲಿ ಮಗಳು 20 ವರ್ಷ ಪ್ರಾಯದವಳಾಗಿದ್ದು, ಆಕೆ ತನ್ನ ಜೀವನದ ಹಾದಿ ನಿರ್ಧರಿಸುವ ಸಾಮರ್ಥ್ಯ ಹೊಂದಿದ್ದಾಳೆ. ಆಕೆ ತನ್ನ ತಂದೆ ಜೊತೆ ಸಂಬಮಧವನ್ನು ಮುಂದಿವರಿಸಲು ಬಯಸದ ಕಾರಣ, ತನ್ನ ಶಿಕ್ಷಣ ಮತ್ತು ಮದುವೆಗಾಗಿ ಅಪ್ಪನಿಂದ ಹಣ ಕೇಳುವಂತಿಲ್ಲ ಎಂದು ನ್ಯಾ. ಸಂಜಯ್ ಕಿಶನ್ ಕೌಲ್ ಹಾಗೂ ನ್ಯಾ. ಎಂ. ಎಂ. ಸುಂದರೇಶ್ ಅವರಿದ್ದ ನ್ಯಾಯಪೀಠ ವಿವರಿಸಿದೆ.
ಹಾಗಿದ್ದರೂ, ವಿಚ್ಚೇದಿತ ಮಹಿಳೆಗೆ ದೊರೆಯಬೇಕಾದ 'ಶಾಶ್ವತ ಜೀವನಾಂಶ'ದ ಮೊತ್ತ ನಿರ್ಧರಿಸುವಾಗ, ಒಂದು ವೇಳೆ, ತಾಯಿ ಮಗಳನ್ನು ಬೆಂಬಲಿಸಲು ಬಯಸಿದರೆ, ಆ ಸಂದರ್ಭದಲ್ಲಿ ಆಕೆಗೆ 'ಮೊತ್ತ' ದೊರೆಯುವಂತೆ ನೋಡಿಕೊಳ್ಳಲಾಗುವುದು ಎಂದು ನ್ಯಾಯಪೀಠ ಹೇಳಿದೆ.
ವಿಚ್ಚೇದಿತ ದಂಪತಿಯ ಪುತ್ರಿ ತಾನು ಹುಟ್ಟಿದಾಗಿನಿಂದಲೂ ತಾಯಿಯ ಜೊತೆಗೆ ವಾಸಿಸುತ್ತಿದ್ದಳು. ಅಲ್ಲದೆ ತನ್ನ 20ನೇ ವಯಸ್ಸಿನಲ್ಲಿ ಕೂಡ ತಂದೆಯ ಜೊತೆ ಸಂಬಂಧ ಮುಂದುವರಿಸಲು ಬಯಸಿರಲಿಲ್ಲ. ಮಧ್ಯಸ್ಥಿಕೆ ವರದಿಯಲ್ಲಿ ಅರ್ಜಿದಾರ ಪತಿಯ ಪರ ವಕೀಲರು ಈ ಅಂಶವನ್ನೂ ಉಲ್ಲೇಖಿಸಿದ್ದರು.
ಈ ಪ್ರಕರಣದಲ್ಲಿ, ವೈವಾಹಿಕ ವಿವಾಹ ಸಂಬಂಧ ಮತ್ತೆ ಕೂಡದಷ್ಟು ಬಿರುಕು ಬಿಟ್ಟಿದೆ. ಈ ಸಂಬಂಧದಲ್ಲಿ, ಪರಸ್ಪರ ಕ್ರೌರ್ಯ ಹೊರತುಪಡಿಸಿ ಬೇರೇನೂ ಉಳಿದಿಲ್ಲ. ಎರಡೂ ಕಡೆಯವರು ಒಟ್ಟಿಗೆ ಇರಲು, ದೂರವಾಣಿಯಲ್ಲಿ ಮಾತನಾಡಲೂ ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದ್ದು, ತಂದೆಯ ಬಾಂಧವ್ಯ ಬಯಸದ ಮಗಳು ತನ್ನ ಶೈಕ್ಷಣಿಕ ವೆಚ್ಚಕ್ಕಾಗಿ ತಂದೆಯಿಂದ ಹಣ ಕೇಳಲು ಅರ್ಹಳಲ್ಲ ಎಂದು ತಿಳಿಸಿತು.