SI Suspended- ಕಡತ ಕಾಣೆ ಪ್ರಕರಣ- ಕೋರ್ಟ್ ಸಿಬ್ಬಂದಿ ಮೇಲೆ ಹಲ್ಲೆ: SI ಸಸ್ಪೆಂಡ್, ಮೂವರು ಪೊಲೀಸರ ವರ್ಗಾವಣೆ
ಕಡತ ಕಾಣೆ ಪ್ರಕರಣ- ಕೋರ್ಟ್ ಸಿಬ್ಬಂದಿ ಮೇಲೆ ಹಲ್ಲೆ: SI ಸಸ್ಪೆಂಡ್, ಮೂವರು ಪೊಲೀಸರ ವರ್ಗಾವಣೆ
ಕೋರ್ಟ್ ಕಟ್ಟಡದಲ್ಲಿ ಇರುವ ಪೊಲೀಸ್ ಭದ್ರತಾ ಕಚೇರಿಯಲ್ಲಿ ಹೈಕೋರ್ಟ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಸಬ್ ಇನ್ಸ್‌ಪೆಕ್ಟರ್‌ರನ್ನು ಅಮಾನತು ಮಾಡಲಾಗಿದೆ. ಟಿಪ್ಪು ಸುಲ್ತಾನ್ ನಾಯಕವಾಡಿ ಅಮಾನತುಗೊಂಡ ಅಧಿಕಾರಿ.
ಪ್ರಕರಣದ ಕಡತವೊಂದು ಸಿಗಲಿಲ್ಲ ಎಂಬ ಕಾರಣಕ್ಕೆ "ನ್ಯಾಯಾಲಯದ ಅಧಿಕಾರಿ"ಯೊಬ್ಬರ ಸೂಚನೆಯಂತೆ ಹೈಕೋರ್ಟ್ ನ ರಿಟ್ ಮತ್ತು ಪ್ರಾಸಿಕ್ಯೂಷನ್ ವಿಭಾಗದ 8 ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಆರೋಪ ಇದ್ದು, ವಿಧಾನಸೌಧ ಭದ್ರತಾ ವಿಭಾಗದ ಡಿಸಿಪಿ ಈ ಅಮಾನತು ಆದೇಶ ಮಾಡಿದ್ದಾರೆ.
ಕರ್ತವ್ಯಲೋಪ ಎಸಗಿದ್ದು ಮತ್ತು ತಮ್ಮ ವ್ಯಾಪ್ತಿ ಮೀರಿ ಅನ್ಯ ವಿಷಯದಲ್ಲಿ ಹಸ್ತಕ್ಷೇಪ ಮಾಡಿದ ಆರೋಪದಡಿ ಸಬ್ ಇನ್ಸಪೆಕ್ಟರ್ ಟಿಪ್ಪು ಸುಲ್ತಾನ್ ಅವರನ್ನು ಅಮಾನತು ಮಾಡಲಾಗಿದೆ. ನ್ಯಾಯಾಲಯದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಲು ಸಹಕರಿಸಿದ ಆರೋಪದಲ್ಲಿ ಮೂವರು ಪೊಲೀಸ್ ಕಾನ್‌ಸ್ಟೆಬಲ್‌ಗಳನ್ನು ವರ್ಗಾಯಿಸಲಾಗಿದೆ.
ಘಟನೆ ವಿವರ
ಸಾಮಾನ್ಯದಂತೆ, ಮಾರ್ಚ್ 8ರಂದು ರಾಜ್ಯ ಅಭಿಯೋಜನೆ ವಿಭಾಗದ ಕ್ರಿಮಿನಲ್ ಪ್ರಕರಣವೊಂದು ವಿಚಾರಣೆಗೆ ಬಂದಿತ್ತು. ಅದರ ಫೈಲ್ ಕೊಡುವಂತೆ SPP–2 ವಿ.ಎಸ್ ಹೆಗಡೆ ಪ್ರಾಸಿಕ್ಯೂಷನ್ ಕಚೇರಿ ಸಿಬ್ಬಂದಿಗೆ ತಿಳಿಸಿದ್ದರು. ಅದಕ್ಕೆ, ಸಿಬ್ಬಂದಿ ಫೈಲ್ ಇಲ್ಲ ಎಂದಿದ್ದರು. ವಿಚಾರಣೆ ಬಳಿಕ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಹೆಗಡೆ, ಕಚೇರಿಯ ಎಲ್ಲ ಕಡೆ ಹುಡುಕಿಸಿದಾಗ, ಕಪಾಟಿನ ಹಿಂಭಾಗದ ರಿಟ್ ಪಿಟಿಷನ್‌ಗಳ ಕಡತದಲ್ಲಿ ಆ ಫೈಲ್ ಸಿಕ್ಕಿತ್ತು.
ಅದು ಅಲ್ಲಿಗೆ ಹೇಗೆ ಹೋಯಿತು ಎಂದು ವಿಚಾರಿಸಿರೆ ಸಿಬ್ಬಂದಿ "ತಮಗೆ ಗೊತ್ತಿಲ್ಲ" ಎಂದಿದ್ದರು. ಈ ವೇಳೆ ಎಸ್‌ಪಿಪಿ–2 ಹಾಗೂ ಪ್ರಾಸಿಕ್ಯೂಷನ್ ವಿಭಾಗದ ಶಾಖಾಧಿಕಾರಿ ಹೈಕೋರ್ಟ್ ಭದ್ರತಾ ಪೊಲೀಸರನ್ನು ಕರೆಯಿಸಿ ಫೈಲ್ ಕಾಣೆಯಾದ ಬಗ್ಗೆ ಸಿಬ್ಬಂದಿಯನ್ನು 'ವಿಚಾರಿಸಿ' ಎಂದು ಮೌಖಿಕವಾಗಿ ತಿಳಿಸಿದ್ದರು.
ಇದರ ಪ್ರಕಾರ, ಸಬ್ ಇನ್ಸಪೆಕ್ಟರ್ ಟಿಪ್ಪು ಸುಲ್ತಾನ್ ಸಿಬ್ಬಂದಿಯನ್ನು ಮುಖ್ಯ ನ್ಯಾಯಮೂರ್ತಿಗಳ ಕೋರ್ಟ್ ಹಾಲ್–1ರ ಕೆಳಗೇ ಇರುವ ಭದ್ರತಾ ಕಚೇರಿಗೆ ಕರೆದೊಯ್ದಿದ್ದರು. 8ರಲ್ಲಿ 3 ಮಂದಿ ರಾಜ್ಯ ಸರ್ಕಾರಿ ನೌಕರರು ಎಂಬ ಕಾರಣಕ್ಕೆ ಅವರನ್ನು ವಾಪಸ್ ಕಳುಹಿಸಿ, ಹೊರಗುತ್ತಿಗೆ ನೌಕರರರ ಮೇಲೆ ಹಲ್ಲೆ ನಡೆಸಿದ್ದರು ಎಂಬ ಆರೋಪ ಕೇಳಿಬಂದಿತ್ತು