40% Commission Suicide Case- ಗುತ್ತಿಗೆದಾರನ ಸಾವು: ಸಚಿವ ಕೆ.ಎಸ್. ಈಶ್ವರಪ್ಪ ಪ್ರಮುಖ ಅರೋಪಿ- FIRನಲ್ಲಿ ಇರುವುದೇನು?
ಗುತ್ತಿಗೆದಾರನ ಸಾವು: ಸಚಿವ ಕೆ.ಎಸ್. ಈಶ್ವರಪ್ಪ ಪ್ರಮುಖ ಅರೋಪಿ- FIRನಲ್ಲಿ ಇರುವುದೇನು?
ದೇಶಾದ್ಯಂತ ಸುದ್ದಿ ಮಾಡುತ್ತಿರುವ ಶಿವಮೊಗ್ಗದ ಗುತ್ತಿಗೆದಾರ ಸಂತೋಷ್ ಪಾಟೀಲ್ ಸಾವು ಪ್ರಕರಣದಲ್ಲಿ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಖಾತೆ ಸಚಿವ ಕೆ ಎಸ್ ಈಶ್ವರಪ್ಪ ಅವರನ್ನು ಮೊದಲ ಆರೋಪಿಯನ್ನಾಗಿ ಹೆಸರಿಸಲಾಗಿದೆ.
ಸಂತೋಷ್ ಸಹೋದರ ಪ್ರಶಾಂತ್ ಗೌಡಪ್ಪ ಪಾಟೀಲ ನೀಡಿದ ದೂರನ್ನು ದಾಖಲಿಸಿದ ಉಡುಪಿ ನಗರ ಪೊಲೀಸರು ಈಶ್ವರಪ್ಪ ವಿರುದ್ಧ FIRನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಸಚಿವ ಈಶ್ವರಪ್ಪ ವಿರುದ್ಧ ಗುತ್ತಿಗೆ ಕಾಮಗಾರಿ ಹಣ ಬಿಡುಗಡೆಗೆ 40 ಪರ್ಸೆಂಟ್ ಕಮಿಷನ್ ಬೇಡಿಕೆ ಸಲ್ಲಿಸಿದ್ದರು ಎಂಬ ಆರೋಪ ಇದೆ. ಈ ಆರೋಪ ಮಾಡಿದ್ದ ಬೆಳಗಾವಿಯ ಸಂತೋಷ್ ಪಾಟೀಲ ಉಡುಪಿಯ ಲಾಡ್ಜ್‌ನಲ್ಲಿ ಶಂಕಾಸ್ಪದವಾಗಿ ಮೃತರಾಗಿದ್ದರು. ಘಟನೆ ಸಂಬಂಧಿಸಿ ಸಚಿವ ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿ ದೇಶದೆಲ್ಲೆಡೆ ಪ್ರತಿಭಟನೆಗಳು ನಡೆಯುತ್ತಿವೆ.
IPC ಸೆಕ್ಷನ್ 306 R/w 34ರ ಅಡಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣವನ್ನು ಈಶ್ವರಪ್ಪ ವಿರುದ್ಧ ದಾಖಲಿಸಲಾಗಿದೆ. ಈಶ್ವರಪ್ಪ ಒಂದನೇ ಆರೋಪಿ.
ಆರೋಪಿ ಈಶ್ವರಪ್ಪ ವಿರುದ್ಧ ದಾಖಲಾಗಿರುವ FIRನ ಪ್ರಮುಖ ಅಂಶಗಳು:
'ಬೆಳಗಾವಿ'ಯ ಹಿಂಡಲಗಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಶ್ರೀ ಲಕ್ಷ್ಮೀದೇವಿ ಜಾತ್ರೆ ಹಿನ್ನೆಲೆಯಲ್ಲಿ ಊರಿನ ಗಣ್ಯರು, ಪ್ರಮುಖರು ಮತ್ತು ಸ್ವಾಮೀಜಿಗಳು ಗ್ರಾಮೀಣಾಭಿವೃದ್ಧಿ ಸಚಿವರಾದ ಕೆ ಎಸ್ ಈಶ್ವರಪ್ಪನವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿದ್ದರು.
ಈ ಸಂದರ್ಭದಲ್ಲಿ ಅವರು, ಪಂಚಾಯತ್ ವ್ಯಾಪ್ತಿಗೆ ಸಂಬಂಧಿಸಿದ ರಸ್ತೆ ಕಾಮಗಾರಿ, ಚರಂಡಿ ಕಾಮಗಾರಿ, ಪೇವರ್ಸ್ ಜೋಡಣೆ ಇತ್ಯಾದಿ ಕಾಮಗಾರಿಗಳನ್ನು ಮಾಡಿಕೊಡಬೇಕೆಂದು ಸಚಿವರಲ್ಲಿ ವಿನಂತಿಸಿದ್ದರು. ಆಗ ಸ್ಥಳದಲ್ಲಿ ಉಪಸ್ಥಿತರಿದ್ದ ಸಂತೋಷ್ ಅವರನ್ನು ಉದ್ದೇಶಿಸಿ "ನೀವು ನಮ್ಮ ಕಾರ್ಯಕರ್ತರು ಇದ್ದಿರಿ, ನೀವು ಕೆಲಸ ಶುರು ಮಾಡಿ, ಕಾಮಗಾರಿಗಳಿಗೆ ಎಷ್ಟೇ ಹಣ ಆದರೂ ಪರವಾಗಿಲ್ಲಾ, ಕೆಲಸ ಶುರು ಮಾಡಿ" ಎಂದಿದ್ದರು.
ಇದಾದ ಬಳಿಕ, ಊರಿನ ಪ್ರಮುಖರು, ಹಿಂಡಲಗಾ ಗ್ರಾಮ ಪಂಚಾಯತ್ ಅಧ್ಯಕ್ಷರು, ಸಂತೋಷ್ ಪಾಟೀಲ್‌ಗೆ ಕೆಲಸ ಮಾಡಲು ತಿಳಿಸಿದ್ದರು. ಆ ಪ್ರಕಾರ, ಪಾಟೀಲ್ ಮತ್ತಿತರ ಗುತ್ತಿಗೆದಾರರು ಸೇರಿಕೊಂಡು ಹಿಂಡಲಗಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 4 ಕೋಟಿಗೂ ಅಧಿಕ ಮೊತ್ತದ ಕಾಮಗಾರಿಯನ್ನು ಸ್ವಂತ ಹಣದಿಂದ ಹಾಗೂ ಇತರರ ಸಹಾಯದಿಂದ ಸರ್ಕಾರದ ಹಣವಿಲ್ಲದೇ ಪೂರ್ಣಗೊಳಿಸಿದ್ದರು.
ಸದ್ರಿ ಕಾಮಗಾರಿ ಪೂರ್ಣಗೊಳಿಸಿ ಬಿಲ್‌ನ್ನು ಪಾವತಿಸುವಂತೆ ಕೋರಿಕೊಂಡಾಗ, ಸಚಿವರ ಈಶ್ವರಪ್ಪ ಅವರು, "ಅದು ಆಗುವುದಿಲ್ಲ, 40 ಪರ್ಸೆಂಟ್ ಕಮೀಷನ್ ನೀಡಿದರೆ ಬಿಲ್ ಪಾಸ್ ಮಾಡಿಸುತ್ತೇನೆ" ಎಂದು ಹೇಳಿದ್ದರು. ಈ ಕಮಿಷನ್ ವಿಷಯ ಕುರಿತು ಬೆಳಗಾವಿ ಗುತ್ತಿಗೆದಾರರ ಸಂಘ ಸರಕಾರಕ್ಕೆ ದೂರು ಸಲ್ಲಿಸಿತ್ತು.
ಸಚಿವ ಈಶ್ವರಪ್ಪ 40 ಪರ್ಸೆಂಟ್ ಕಮೀಷನ್‌ಗೆ ಬೇಡಿಕೆ ಇಟ್ಟಿದ್ದಾರೆಂದು ಸಂತೋಷ ಪಾಟೀಲ್ ಕಳೆದ ಮಾರ್ಚ್‌ನಲ್ಲಿ ಬಹಿರಂಗವಾಗಿ ಆರೋಪಿಸಿದ್ದರು. ಇದಕ್ಕೆ ಮುಂಚಿತವಾಗಿ ಮೃತ ಸಂತೋಷ್ ತನ್ನ ಹೆಂಡತಿ ಜಯಾ ಹಾಗೂ ಫಿರ್ಯಾದುದಾರರ ಬಳಿ ಈ ವಿಷಯ ತಿಳಿಸಿದ್ದರು.
ಸಂತೋಷ್ ಪದೇ ಪದೇ ಬೆಂಗಳೂರಿಗೆ ಹೋಗುತ್ತಿದ್ದರು. ಏಕೆ ಎಂದು ಕುಟುಂಬಸ್ಥರು ಪ್ರಶ್ನಿಸಿದಾಗ, ಈಶ್ವರಪ್ಪ ಅವರನ್ನು ಭೇಟಿಯಾಗಿ ಬಿಲ್ ಪಾಸ್ ಮಾಡಿಸಲು ಹೋಗುತ್ತಿದ್ದೇನೆಂದು ಅವರು ತಿಳಿಸುತ್ತಿದ್ದರು. ಆದರೂ ಬಿಲ್ ಪಾಸ್ ಆಗಿರಲಿಲ್ಲ.
ಈಶ್ವರಪ್ಪ ಮತ್ತವರ ಆಪ್ತರಾದ ರಮೇಶ್ ಮತ್ತು ಬಸವರಾಜ್ ವಿರುದ್ಧ ವಿಡಿಯೋ ಫೂಟೇಜ್ ಮುಖಾಂತರ “ಬಿಲ್ ಪಾಸಾಗದ ಕಾರಣ ಮುಂದಾಗುವ ಅನಾಹುತಕ್ಕೆ ನೀವೇ ಕಾರಣ" ಎಂದು ಮೃತ ಸಂತೋಷ್ ಪ್ರಸ್ತಾಪಿಸಿದ್ದರು.
40 ಪರ್ಸೆಂಟ್ ಕಮೀಷನ್ ವಿಷಯದ ಕುರಿತು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹಾಗೂ ದೆಹಲಿಯ ಬಿಜೆಪಿ ವರಿಷ್ಟರಿಗೆ ಮಾಹಿತಿ ನೀಡಿದ್ದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೂ, PMO ಕಚೇರಿಗೆ ಭೇಟಿ ನೀಡಿ ಈಶ್ವರಪ್ಪ ಕಮೀಷನ್ ಕುರಿತು ಲಿಖಿತ ದೂರು ಸಲ್ಲಿಸಿದ್ದರು.
ಏನೇ ಮಾಡಿದರೂ ಬಿಲ್ ಪಾಸ್ ಆಗಿರಲಿಲ್ಲ. ಇದರಿಂದ ತೀವ್ರ ಆಘಾತಗೊಂಡಿದ್ದ ಸಂತೋಷ ಪಾಟೀಲ್ ಮನನೊಂದು ತನ್ನ ಮೊಬೈಲಿನಿಂದ ವಾಟ್ಸಾಪ್ ಮೂಲಕ ಡೆತ್ ನೋಟ್ ಸಂದೇಶವನ್ನು ಮಾಧ್ಯಮಗಳಿಗೆ ಮತ್ತು ಆಪ್ತರಿಗೆ ಕಳುಹಿಸಿ ಏ. 11ರ ರಾತ್ರಿ ಉಡುಪಿಯ ಶಾಂಭವಿ ಲಾಡ್ಜ್ ನ ರೂ ನಂಬರ್ 207ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಮೃತರ ಸಹೋದರ ನೀಡಿದ ದೂರಿನಲ್ಲಿ ಆರೋಪಿಗಳಾದ ಈಶ್ವರಪ್ಪ, ಅವರ ಆಪ್ತರಾದ ಬಸವರಾಜ್ ಮತ್ತು ರಮೇಶ್ ಮತ್ತಿತರರು ಈ ಸಾವಿಗೆ ಕಾರಣರಾಗಿದ್ದು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಲಾಗಿದೆ.