Advocate case - ಇಂಟರ್ನ್ ಮೇಲೆ ಹಲ್ಲೆ: ವಕೀಲನ ವಿರುದ್ಧ ಕೇಸು ರದ್ದು ಮಾಡಲು ಕರ್ನಾಟಕ ಹೈಕೋರ್ಟ್ ನಕಾರ
ಇಂಟರ್ನ್ ಮೇಲೆ ವಕೀಲನ ಹಲ್ಲೆ: ಪ್ರಕರಣ ವಜಾ ಮಾಡಲು ನಿರಾಕರಿಸಿದ ಕರ್ನಾಟಕ ಹೈಕೋರ್ಟ್
ಇಂಟರ್ನ್/ಸಹಾಯಕಿ ಮೇಲೆ ಹಲ್ಲೆ ನಡೆಸಿ, ಆಕೆಗೆ ಕಿರುಕುಳ ನೀಡಿದ್ದ ಆರೋಪಿ ವಕೀಲರ ವಿರುದ್ಧದದ ಕ್ರಿಮಿನಲ್ ಪ್ರಕ್ರಿಯೆಯನ್ನು ರದ್ದುಪಡಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.
ಪ್ರಕರಣ: ವಸಂತ್ ಆದಿತ್ಯ ಜೆ Vs ಕರ್ನಾಟಕ ರಾಜ್ಯ
ಕರ್ನಾಟಕ ಹೈಕೋರ್ಟ್, Dated 4-04-2022
ಬೆಂಗಳೂರಿನ ವಕೀಲರ ನೇತೃತ್ವದ ಖಾಸಗಿ ಕಾನೂನು ಸಂಸ್ಥೆಯಲ್ಲಿ ಇಂಟರ್ನ್ ಅವಧಿಯಲ್ಲಿದ್ದ ಸಹಾಯಕಿ ಮೇಲೆ ಹಲ್ಲೆ ನಡೆಸಿರುವುದು ಮತ್ತು ಆಕೆಗೆ ಕಿರುಕುಳ ನೀಡಿರುವುದಕ್ಕೆ ಸಂಬಂಧಿಸಿದಂತೆ ವಕೀಲರೊಬ್ಬರ ವಿರುದ್ಧದ ಕ್ರಿಮಿನಲ್ ಪ್ರಕ್ರಿಯೆ ವಜಾ ಮಾಡಲು ಹೈಕೋರ್ಟ್ ನಿರಾಕರಿಸಿದೆ.
ವಕೀಲ ವಸಂತ್ ಆದಿತ್ಯ ಜೆ ವಿರುದ್ಧದ ಸಂಜ್ಞೇಯ ಅಪರಾಧದ ತನಿಖೆ ಬಾಕಿ ಇದೆ. ಹಾಗಾಗಿ, ಈ ಹಂತದಲ್ಲಿ ಅದನ್ನು ರದ್ದುಪಡಿಸಲಾಗದು ಎಂದು ನ್ಯಾಯಪೀಠ ತೀರ್ಪಿನಲ್ಲಿ ಹೇಳಿದೆ.
"ಪೊಲೀಸರ ತನಿಖೆ ಪ್ರಗತಿಯಲ್ಲಿದೆ. ಅವರು ಅಂತಿಮ ವರದಿ ಸಲ್ಲಿಸಲಿದ್ದಾರೆ. ಕೇಸಿನ ಮೆರಿಟ್ ಬಗ್ಗೆ ಈಗ ಅಭಿಪ್ರಾಯಪಡುವುದು ಪಕ್ಷಕಾರರ ಹಕ್ಕುಗಳಿಗೆ ಚ್ಯುತಿಯಾಗುತ್ತದೆ. ಅಂತಿಮವಾಗಿ, ದೂರು ಕ್ಷುಲ್ಲಕವಾಗಿದ್ದು, ಕಾನೂನಿನ ದುರ್ಬಳಕೆಯಾಗಿದೆ ಎಂದು ಸಾಬೀತುಪಡಿಸುವವರೆಗೆ ಸಂಜ್ಞೇಯ ಅಪರಾಧದಲ್ಲಿ ನ್ಯಾಯಾಲಯವು ತನಿಖೆಗೆ ನಿರ್ಬಂಧ ವಿಧಿಸಲಾಗದು” ಎಂದು ಪೀಠ ಹೇಳಿದೆ.
“ಆರೋಪಿಗಳು ಯಾರು, ಏನೆಲ್ಲಾ ನಡೆದಿದೆ ಎಂಬುದು ತನಿಖೆಯ ಭಾಗವಾಗಿದೆ. ಸೂಕ್ತ ತನಿಖೆ ಬಳಿಕ ಪೊಲೀಸರು CrPC ಸೆಕ್ಷನ್ 173ರ ಪ್ರಕಾರ ಸೂಕ್ತ ವರದಿ ಸಲ್ಲಿಸಲಿದ್ದಾರೆ. ಆಗ, ಲಭ್ಯ ದಾಖಲೆಗಳನ್ನು ಪರಿಗಣಿಸಿ ನ್ಯಾಯಾಲಯವು ಯಾವುದೇ ಅಭಿಪ್ರಾಯ ವ್ಯಕ್ತಪಡಿಸಲಾಗದು” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
ಘಟನೆ ವಿವರ
'ಕ್ರೀತಮ್ ಲಾ ಅಸೋಸಿಯೇಟ್ಸ್'ನಲ್ಲಿ ಸಂತ್ರಸ್ತೆ ಇಂಟರ್ನ್ ಆಗಿ ಕೆಲಸ ಮಾಡುತ್ತಿದ್ದರು. ಇಂಟರ್ನ್‌ಶಿಪ್ ಸರ್ಟಿಫಿಕೇಟ್‌ಗಾಗಿ ಅವರು ಅರ್ಜಿದಾರರನ್ನು ಕೋರಿದ್ದರು. ಆಗ ವಕೀಲ ವಸಂತ್ ವಾಗ್ವಾದ ನಡೆಸಿ ಕುಡಿಯುವ ನೀರಿನ ಬಾಟಲನ್ನು ವಸಂತ್ ಅವರು ಸಂತ್ರಸ್ತೆಯತ್ತ ಎಸೆದರು. ಪರಿಣಾಮ, ಎದೆಯ ಭಾಗದಲ್ಲಿ ಗಾಯವಾಗಿದ್ದು, ಮೊಬೈಲ್‌ಗೆ ಹಾನಿಯಾಗಿತ್ತು. ಇದೇ ವೇಳೆ, ಆರೋಪಿಯು ಸಂತ್ರಸ್ತರ ಮೊಬೈಲ್‌ಗೆ ಅಸಹ್ಯಕರ ಮತ್ತು ಆಕ್ಷೇಪಾರ್ಹ ಸಂದೇಶಗಳನ್ನು ಕಳುಹಿಸಿದ್ದ ಎನ್ನಲಾಗಿದೆ.
ಸಂತ್ರಸ್ತೆಯು ಐಟಿ ಆಕ್ಟ್ ಸೆಕ್ಷನ್ 67 (ವಿದ್ಯುನ್ಮಾನ ರೂಪದಲ್ಲಿ ಅಶ್ಲೀಲ ಸಂದೇಶ ರವಾನೆ) ಮತ್ತು IPC ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ), 509 (ಮಹಿಳೆಯ ಘನತೆಗೆ ಚ್ಯುತಿ), 341 (ಆಕ್ಷೇಪಾರ್ಹ ನಿಯಂತ್ರಣ), 324 (ಉದ್ದೇಶಪೂರ್ವಕವಾಗಿ ಹಾನಿ ಉಂಟು ಮಾಡುವುದು) ಮತ್ತು 354ರ (ಘನತೆಗೆ ಚ್ಯುತಿ ತರುವ ಉದ್ದೇಶ) ಅಡಿ ವಕೀಲ ವಸಂತ್ ವಿರುದ್ದ ಪ್ರಕರಣ ದಾಖಲಿಸಿದ್ದರು.
ತೀರ್ಪಿನ ಆದೇಶ ಪ್ರತಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಕರಣ: ವಸಂತ್ ಆದಿತ್ಯ ಜೆ Vs ಕರ್ನಾಟಕ ರಾಜ್ಯ