Consumer Case- ಉಪಹಾರದಲ್ಲಿ ಹಲ್ಲಿ: ಗ್ರಾಹಕರಿಗೆ 90 ಸಾವಿರ ರೂ ಪರಿಹಾರ ನೀಡಲು ಮಾಲಕರಿಗೆ ಗ್ರಾಹಕ ನ್ಯಾಯಾಲಯ ಆದೇಶ
ಉಪಹಾರದಲ್ಲಿ ಹಲ್ಲಿ: ಗ್ರಾಹಕರಿಗೆ 90 ಸಾವಿರ ರೂ ಪರಿಹಾರ ನೀಡಲು ಮಾಲಕರಿಗೆ ಗ್ರಾಹಕ ನ್ಯಾಯಾಲಯ ಆದೇಶ
ಹೋಟೆಲೊಂದರಲ್ಲಿ ಹಲ್ಲಿ ಬಿದ್ದ ಆಹಾರ ಸೇವಿಸಿ ಆಸ್ಪತ್ರೆ ಪಾಲಾದ ಗ್ರಾಹಕರಿಗೆ ಹೋಟೆಲ್ ಮಾಲೀಕ 90 ಸಾವಿರ ರೂಪಾಯಿ ಪರಿಹಾರ ನೀಡುವಂತೆ ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸೂಚಿಸಿದೆ.
ಇದರೊಂದಿಗೆ ಪೂರಿ ಬಾಜಿಯಲ್ಲಿ ಹಲ್ಲಿ ಬಿದ್ದು ಅವಾಂತರ ಸೃಷ್ಟಿಸಿದ ಪ್ರಕರಣದಲ್ಲಿ ಕಕ್ಷಿದಾರರಿಗೆ ಕೊನೆಗೂ ನ್ಯಾಯ ಸಿಕ್ಕಿದೆ.
ಹುಬ್ಬಳ್ಳಿ ತಾಲೂಕಿನ ವರೂರಿನ ಹೋಟೆಲ್ ಒಂದರಲ್ಲಿ ಗ್ರಾಹಕರೊಬ್ಬರಿಗೆ ನೀಡಲಾಗಿದ್ದ ಪೂರಿ ಬಾಜಿಯಲ್ಲಿ ಬೆಂದ ಹಲ್ಲಿ ಬಿದ್ದಿತ್ತು. ಈ ಬಗ್ಗೆ ಬಾಧಿತ ಗ್ರಾಹಕರು ಗ್ರಾಹಕ ನ್ಯಾಯಾಲಯದ ಮೊರೆ ಹೋಗಿದ್ದರು.
ಈ ದೂರಿನ ವಿಚಾರಣೆ ನಡೆಸಿದ ಗ್ರಾಹಕ ನ್ಯಾಯಾಲಯ, ದೂರು ದಾಖಲಿಸಿದ ಇಬ್ಬರು ಗ್ರಾಹಕರಿಕೆ ತಲಾ 45 ಸಾವಿರ ರೂಪಾಯಿಯಂತೆ ಒಟ್ಟು 90 ಸಾವಿರ ರೂ. ಗಳ ಪರಿಹಾರ ನೀಡಲು ಹೋಟೆಲಿನ ಮಾಲೀಕರಿಗೆ ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.
2018 ರ ಸೆಪ್ಟೆಂಬರ್ 26 ರಂದು ಹುಬ್ಬಳ್ಳಿ ತಾಲೂಕಿನ ವರೂರು ಬಳಿಯ ಕಾಮತ್ ಉಪಚಾರ ಹೋಟೆಲ್ ಗೆ ಬೆಳಗಿನ ಉಪಹಾರಕ್ಕಾಗಿ ವಿನಾಯಕ ಮತ್ತು ಸಹನಾ ಹೋಗಿದ್ದರು. ಈ ವೇಳೆ ಇಬ್ಬರೂ ಗ್ರಾಹಕರು ಪೂರಿ ಬಾಜಿ ತಿಂಡಿ ಖರೀದಿಸಿದ್ದರು.
ಹೊಟೇಲ್‌ಗೆ ಆಗಮಿಸಿದ್ದ ಗ್ರಾಹಕರು ನೀಡಿದ ಬೇಡಿಕೆಯಂತೆ ಪೂರಿ ಬಾಜಿಯನ್ನು ನೀಡಲಾಗಿತ್ತು. ಹೋಟೆಲ್ ಸಿಬ್ಬಂದಿ ತನ್ನ ಗ್ರಾಹಕರಿಗೆ ಪೂರೈಸಿದ ಉಪಹಾರ ತಿಂಡಿಯಲ್ಲಿ ಬೆಂದ 'ಹಲ್ಲಿ' ಇತ್ತು. ಇದನ್ನು ಗಮನಿಸಿದ ಗ್ರಾಹಕರು ಹೋಟೆಲ್ ಸಿಬ್ಬಂದಿಯ ಗಮನಕ್ಕೆ ತಂದರು. ಆದರೂ ಅವರು ಮಾತ್ರ ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಈ ಹಲ್ಲಿ ಬಿದ್ದ ಉಪಹಾರ ತಿಂದ ಬಳಿಕ ಗ್ರಾಹಕರಾದ ವಿನಾಯಕ ಅವರಿಗೆ ಹೊಟ್ಟೆ ನೋವು, ವಾಂತಿ ಕಾಣಿಸಿಕೊಂಡಿತ್ತು. ಇದರಿಂದ ಗ್ರಾಹಕರು ಚಿಕಿತ್ಸೆಗಾಗಿ ಶಿಗ್ಗಾಂವ ಆಸ್ಪತ್ರೆ ಹಾಗೂ ಹುಬ್ಬಳ್ಳಿಯ ತತ್ವದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು.
ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ ಹಾಗೂ ಸದಸ್ಯ ಪಿ.ಸಿ.ಹಿರೇಮಠ ಮತ್ತು ವಿ.ಎ. ಬೋಳಶೆಟ್ಟಿ ಈ ತೀರ್ಪು ನೀಡಿದ್ದಾರೆ.