Bank freezed surety's SB account- ಸುಸ್ತಿದಾರನ ಖಾತೆ ಸ್ತಂಭನ: ಬ್ಯಾಂಕ್ ಕ್ರಮ ಸಮರ್ಥನೀಯ ಎಂದ ಗ್ರಾಹಕರ ನ್ಯಾಯಾಲಯ
ಸುಸ್ತಿದಾರನ ಖಾತೆ ಸ್ತಂಭನ: ಬ್ಯಾಂಕ್ ಕ್ರಮ ಸಮರ್ಥನೀಯ ಎಂದ ಗ್ರಾಹಕರ ನ್ಯಾಯಾಲಯ
ಸುಸ್ತಿಯಾದ ಸಾಲ ವಸೂಲಾತಿಗೆ ಜಾಮೀನುದಾರನ ಉಳಿತಾಯ ಖಾತೆಯನ್ನು ಸ್ತಂಭನಗೊಳಿಸಿರುವುದು ಬ್ಯಾಂಕಿಂಗ್ ಸೇವೆಯಲ್ಲಿ ನ್ಯೂನತೆಯಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕ ಆಯೋಗದ ತೀರ್ಪು ನೀಡಿದೆ.
ಕೆ. ಮುಹಮ್ಮದ್ ಎಂಬವರು ಮುಲ್ಕಿಯ ಕಾರ್ಪೋರೇಷನ್ ಬ್ಯಾಂಕಿನ (ಈಗಿನ ಹೆಸರು ಯೂನಿಯನ್ ಬ್ಯಾಂಕ್) ಗ್ರಾಹಕರಾಗಿದ್ದು ಬ್ಯಾಂಕ್ ತನ್ನ ಖಾತೆಯನ್ನು ನಿಯಮಬಾಹಿರವಾಗಿ ಸ್ತಂಭನಗೊಳಿಸಿ ರುವುದರಿಂದ ತನಗೆ ಆರ್ಥಿಕವಾಗಿ ನಷ್ಟ ಉಂಟಾಗಿದೆ ಎಂದು ದ. ಕ. ಜಿಲ್ಲಾ ಗ್ರಾಹಕ ಆಯೋಗದಲ್ಲಿ ದೂರು ದಾಖಲಿಸಿದ್ದರು. ಬ್ಯಾಂಕ್‌ನ ಕ್ರಮದಿಂದಾಗಿ ತನ್ನ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾದ ನೆಲೆಯಲ್ಲಿ ರೂ. 13 ಲಕ್ಷ ಪರಿಹಾರ ಕೋರಿ ನ್ಯಾಯಾಲಯಕ್ಕೆ ದೂರು ಅರ್ಜಿ ಸಲ್ಲಿಸಿದ್ದರು.
ಕಾರ್ಪೊರೇಶನ್ ಬ್ಯಾಂಕ್ ಈ ಪ್ರಕರಣದ ಪ್ರತಿವಾದಿ. ದೂರುದಾರ ಕೆ. ಮುಹಮ್ಮದ್ ಎಂಬವರು ಬ್ಯಾಂಕಿನ ಗ್ರಾಹಕರಾಗಿದ್ದು, ತನ್ನ ಸಹೋದರ ಜಮಾಲುದ್ದೀನ್ ಎಂಬವರು ಬ್ಯಾಂಕಿನಿಂದ ಪಡೆದ ಸಾಲಕ್ಕೆ ಜಾಮೀನುದಾರರಾಗಿದ್ದರು. ಸದರಿ ಸಾಲವು ಸುಸ್ತಿಯಾಗಿತ್ತು.
ಮರುಪಾವತಿಗಾಗಿ ಹಲವಾರು ಬಾರಿ ಮೌಖಿಕ ಹಾಗೂ ಲಿಖಿತ ಕೋರಿಕೆ ಸಲ್ಲಿಸಿದ್ದರೂ ಕೂಡಾ ಸಾಲವನ್ನು ಮರುಪಾವತಿಸಿರಲಿಲ್ಲ. ಸದರಿ ದೂರುದಾರರು ಪಾವತಿಗಾಗಿ ನೀಡಿದ ರೂ. 5 ಸಾವಿರ ಮೌಲ್ಯದ ಚೆಕ್ ಅನ್ನು ಬ್ಯಾಂಕ್ ಖಾತೆ ಸ್ತಂಭನಗೊಂಡಿದೆ ಎಂಬ ಷರಾದೊಂದಿಗೆ ಮರಳಿಸಿತ್ತು.
ಈ ದೂರಿನ ವಿಚಾರಣೆ ನಡೆಸಿದ ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕ ಆಯೋಗ, ದೂರುದಾರ ಕೆ. ಮಹಮ್ಮದ್ ತನ್ನ ಸಹೋದರ ಪಡೆದ ಸಾಲಕ್ಕೆ ಜಾಮೀನುದಾರರಾಗಿದ್ದು, ಆ ಸಾಲ ಸುಸ್ತಿಯಾದ ಕಾರಣ ಅವರ ಉಳಿತಾಯ ಖಾತೆಯನ್ನು ಬ್ಯಾಂಕ್ ಸ್ತಂಭನಗೊಳಿಸಿದೆ. ಇದು ಬ್ಯಾಂಕಿಂಗ್ ಸೇವೆಯಲ್ಲಿ ಆಗಿರುವ ನ್ಯೂನತೆ ಎಂದು ಹೇಳಲು ಸಾಧ್ಯವಿಲ್ಲ. ಆದುದರಿಂದ ಕೆ. ಮಹಮ್ಮದ್ ಅವರು ಸಲ್ಲಿಸಿದ ದೂರು ನಿಯಮಾನುಸಾರ ಊರ್ಜಿತವಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿ ದೂರನ್ನು ವಜಾಗೊಳಿಸಿತು.
ಪ್ರತಿವಾದಿ ಬ್ಯಾಂಕ್ ಪರವಾಗಿ ವಕೀಲ ಡೇನಿಯಲ್ ದೇವರಾಜ್ ವಾದ ಮಂಡಿಸಿದ್ದರು.