Cow Slaughters Act implemented- ಜಾನುವಾರು ಹತ್ಯೆ ನಿಷೇಧ ಕಾಯಿದೆ: ನಿಯಮ ರೂಪಿಸಿದ ಸರ್ಕಾರ- ಸೆಕ್ಷನ್ 5ರ ಜಾರಿಗೆ ಹೈಕೋರ್ಟ್ ಅಸ್ತು
ಜಾನುವಾರು ಹತ್ಯೆ ನಿಷೇಧ ಕಾಯಿದೆ: ನಿಯಮ ರೂಪಿಸಿದ ಸರ್ಕಾರ- ಸೆಕ್ಷನ್ 5ರ ಜಾರಿಗೆ ಹೈಕೋರ್ಟ್ ಅಸ್ತು
ರಾಜ್ಯ ಸರ್ಕಾರವು ಕರ್ನಾಟಕ ಗೋವಧೆ ಪ್ರತಿಬಂಧಕ ಹಾಗೂ ಜಾನುವಾರು ಸಂರಕ್ಷಣಾ ಕಾಯಿದೆಯ ಸೆಕ್ಷನ್ 5ರ ಅಡಿ ಕರ್ನಾಟಕ ಗೋವಧೆ ಪ್ರತಿಬಂಧಕ ಹಾಗೂ ಜಾನುವಾರು ಸಂರಕ್ಷಣೆ (ಪ್ರಾಣಿಗಳ ಸಾಗಣೆ 2021ರ ನಿಯಮಗಳು) ರೂಪಿಸಿದೆ.
ಸೆಕ್ಷನ್ 5 ಮತ್ತು ಅದರ ಅಡಿ ರೂಪಿಸಿರುವ ನಿಯಮ ಜಾರಿಗೊಳಿಸುವ ಸಂಬಂಧ ಸರ್ಕಾರವು ಹೈಕೋರ್ಟಿನ ಅನುಮತಿ ಕೋರಿದ್ದು, ಈ ಸಂಬಂಧ 2021ರ ಜನವರಿ 20ರ ಆದೇಶದಲ್ಲಿ ಮಾರ್ಪಾಡು ಮಾಡುವಂತೆ ಕೋರಿರುವುದಕ್ಕೆ ಹೈಕೋರ್ಟ್ ಅನುಮತಿಸಿದ್ದು, ಅದು ಅಂತಿಮ ನಿರ್ಧಾರಕ್ಕೆ ಒಳಪಟ್ಟಿರುತ್ತದೆ ಎಂದು ಸ್ಪಷ್ಟಪಡಿಸಿದೆ.
ಈ ಹಿಂದೆ, ಕರ್ನಾಟಕ ಗೋವಧೆ ಪ್ರತಿಬಂಧಕ ಹಾಗೂ ಜಾನುವಾರು ಸಂರಕ್ಷಣಾ ಕಾಯ್ದೆ- 2020 ಅನ್ನು 2021ರ ಫೆಬ್ರವರಿ 15ರಂದು ಜಾರಿ ಮಾಡಲಾಗಿತ್ತು. ಈ ಬಗ್ಗೆ 2021ರ ಮೇ 24ರಂದು ಅಧಿಸೂಚನೆ ಹೊರಡಿಸಲಾಗಿತ್ತು ಮತ್ತು 2021ರ ಮೇ 25ರಂದು ಗೆಜೆಟ್‌ನಲ್ಲಿ ಪ್ರಕಟಿಸಲಾಗಿತ್ತು.
ಮೊಹಮ್ಮದ್ ಆರೀಫ್ ಜಮೀಲ್ ಮತ್ತು ಇತರರು ಕಾಯಿದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿರುವ ಪಿಐಎಲ್ ವಿಚಾರಣೆ ನಡೆಸಿದ ಹೈಕೋರ್ಟ್‌ನ ವಿಭಾಗೀಯ ಪೀಠ ಈ ಮಹತ್ವದ ತೀರ್ಪು ಪ್ರಕಟಿಸಿದೆ.
ಕರ್ನಾಟಕ ಗೋವಧೆ ಪ್ರತಿಬಂಧಕ ಹಾಗೂ ಜಾನುವಾರು ಸಂರಕ್ಷಣಾ ಕಾಯಿದೆ ಸೆಕ್ಷನ್ 5ರಡಿ ನಿಯಮ ರೂಪಿಸಿ ಅವುಗಳನ್ನು ಜಾರಿಗೆ ತರುವವರೆಗೆ ಯಾವುದೇ ವ್ಯಕ್ತಿಯ ವಿರುದ್ಧ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ನ್ಯಾಯಾಲಯವು ಸರ್ಕಾರವನ್ನು ನಿರ್ಬಂಧಿಸಿತ್ತು. ಅದರಂತೆ, ಸೆಕ್ಷನ್ 5ರ ಜಾನುವಾರು ಸಾಗಣೆ 2021ರ ನಿಯಮಗಳನ್ನು ರೂಪಿಸಲಾಗಿದ್ದು, ಸೆಕ್ಷನ್ 5ರ ಜಾರಿ ಕುರಿತು ಹೈಕೋರ್ಟ್ ಹಿಂದಿನ ಆದೇಶದಲ್ಲಿ ಮಾರ್ಪಾಡು ಮಾಡಬೇಕು” ಎಂದು ಸರ್ಕಾರದ ಪರ ವಕೀಲರು ಕೋರಿದರು.
ಇದಕ್ಕೆ ಆಕ್ಷೇಪ ಮಾಡಿದ ಅರ್ಜಿದಾರರ ಪರ ವಕೀಲರು “ಕಾಯಿದೆ ಮತ್ತು ನಿಯಮಗಳು ಜಾರಿ ಮಾಡುವುದರಿಂದ ನಿರ್ದಿಷ್ಟ ಸಮುದಾಯದ ಕುರಿತು ಪೂರ್ವಾಗ್ರಹ ಉಂಟು ಮಾಡಲಿದೆ. ಹೀಗಾಗಿ, ಅದಕ್ಕೆ ಅನುಮತಿಸಬಾರದು” ಎಂದು ವಾದಿಸಿದರು.
ಅರ್ಜಿದಾರರ ಆಕ್ಷೇಪ ಮತ್ತು ಸರ್ಕಾರದ ವಾದವನ್ನು ಪರಿಗಣಿಸಿ ಹೈಕೋರ್ಟ್ ಈ ತೀರ್ಪು ಪ್ರಕಟಿಸಿದೆ.