Hindu Adoption- ಪತಿ ಸಾವಿನ ಬಳಿಕ ಮಗು ದತ್ತು: ತೀರಿಹೋದ ತಂದೆಗೆ ಆ ಮಗು ವಾರೀಸು ಅಲ್ಲ: ಬಾಂಬೆ ಹೈಕೋರ್ಟ್
ಪತಿ ಸಾವಿನ ಬಳಿಕ ಮಗು ದತ್ತು: ತೀರಿಹೋದ ತಂದೆಗೆ ಆ ಮಗು ವಾರೀಸು ಅಲ್ಲ: ಬಾಂಬೆ ಹೈಕೋರ್ಟ್
ಗಂಡನ ಮರಣಾನಂತರ ಪತ್ನಿ ಮಗುವನ್ನು ದತ್ತು ಪಡೆದುಕೊಂಡರೆ, ಆ ಮಗುವು ಸಾವನ್ನಪ್ಪಿದ ತಂದೆಗೆ ವಾರೀಸುದಾರರಲ್ಲ. ಮಗು ಮೃತ ತಂದೆಯ ಆಸ್ತಿಯಲ್ಲಿ ಪಾಲು ಕೋರಲಾಗದು. ಏಕೆಂದರೆ ದತ್ತು ಮಗುವನ್ನು ಸಾವನ್ನಪ್ಪಿದ ತಂದೆಯ ಮಗು ಎಂದು ಪರಿಗಣಿಸಲಾಗದು ಎಂದು ಬಾಂಬೆ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಪ್ರಕರಣ: ರಾಜೇಶ್ ಪವಾರ್ Vs ಪಾರ್ವತಿಬಾಯಿ ಬೆಂಡೆ (ಬಾಂಬೆ ಹೈಕೋರ್ಟ್)
ರಾಜೇಶ್ ಪವಾರ್ ಮತ್ತು ಶಿವಾಜಿ ತೋಂಗ್ ಮಧ್ಯೆ ನಡೆದ ಆಸ್ತಿ ಕ್ರಯಪತ್ರವು ಕಾನೂನು ಮಾನ್ಯತೆ ಹೊಂದಿಲ್ಲ ಎಂದು ಆದೇಶಿಸಿದ್ದ ವಿಚಾರಣಾಧೀನ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ರಾಜೇಶ್ ಪವಾರ್ ಮತ್ತು ಅವರ ಕುಟುಂಬ ಸಲ್ಲಿಸಿದ್ದ ಬಾಂಬೆ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು.
ಇದರ ವಿಚಾರಣೆ ನಡೆಸಿದ ಹೈಕೋರ್ಟ್ ಈ ತೀರ್ಪು ನೀಡಿದೆ. ಮತ್ತು ಸದ್ರಿ ಆದೇಶದ ಹಿನ್ನೆಲೆಯಲ್ಲಿ ದತ್ತು ಪಡೆದಿರುವ ಪುತ್ರ ಮತ್ತು ಸ್ವಂತ ಪುತ್ರಿಯ ಪಾಲಿನಲ್ಲಿ ನ್ಯಾಯಾಲಯವು ಬದಲಾವಣೆ ಮಾಡಿದೆ.
'ಹಿಂದೂ ದತ್ತುಗಳು ಮತ್ತು ನಿರ್ವಹಣಾ ಕಾಯಿದೆ 1956' ಜಾರಿಯಾದ ಬಳಿಕ ಪತಿ ಸಾವಿನ ಬಳಿಕ ಪತ್ನಿಯು ಮಗುವನ್ನು ದತ್ತು ಪಡೆದರೆ ಆ ಮಗುವು ಮೃತ ತಂದೆಯ ಪುತ್ರನ ಸ್ಥಾನಮಾನ ಪಡೆಯುವುದಿಲ್ಲ. ಹೀಗಾಗಿ, ದತ್ತು ಪಡೆದ ಪುತ್ರ ತಂದೆ ಸಾವನ್ನಪ್ಪುವುದಕ್ಕೂ ಮುನ್ನ ದತ್ತು ಪಡೆಯದಿರುವುದರಿಂದ ತಂದೆಯ ಪರವಾಗಿ ದಾವೆಯ ಭಾಗವಾಗಿರುವ ಆಸ್ತಿಯಲ್ಲಿ ಪಾಲು ಕೋರಲಾಗದು” ಎಂದು ಪೀಠ ಆದೇಶ ಮಾಡಿದೆ.