Jail to advocate- ಕೋರ್ಟ್ ಕಲಾಪದ ವೇಳೆ ಅಶ್ಲೀಲ ಭಂಗಿಯ ಅವತಾರ- ವಕೀಲನಿಗೆ ಜೈಲು ಶಿಕ್ಷೆ, ಮಹಿಳೆಗೆ 4 ಲಕ್ಷ ಪರಿಹಾರ
ಕೋರ್ಟ್ ಕಲಾಪದ ವೇಳೆ ಅಶ್ಲೀಲ ಭಂಗಿಯ ಅವತಾರ- ವಕೀಲನಿಗೆ ಜೈಲು ಶಿಕ್ಷೆ, ಮಹಿಳೆಗೆ 4 ಲಕ್ಷ ಪರಿಹಾರ
ಕಳೆದ ಲಾಕ್‌ಡೌನ್ ಸಂದರ್ಭದಲ್ಲಿ ನಡೆದಿದ್ದ ವರ್ಚುಯಲ್ ಕೋರ್ಟ್ ಕಲಾಪದ ವೇಳೆ ಮಹಿಳಾ ಸಹೋದ್ಯೋಗಿ ಜೊತೆ ಅಶ್ಲೀಲ ಭಂಗಿಯಲ್ಲಿ ಕಾಣಿಸಿಕೊಂಡಿದ್ದ ವಕೀಲರಿಗೆ ಜೈಲು ಶಿಕ್ಷೆ ವಿಧಿಸಿ ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದೆ.
2021ರ ಡಿಸೆಂಬರ್‌ನಲ್ಲಿ ಹೈಕೋರ್ಟ್ ಕಲಾಪದಲ್ಲಿ ವಕೀಲ ಸಂತಾನ ಕೃಷ್ಣನ್ ತನ್ನ ಸಹೋದ್ಯೋಗಿ ಜೊತೆ ಅಶ್ಲೀಲ ಭಂಗಿಯಲ್ಲಿ ಕಾಣಿಸಿಕೊಂಡಿದ್ದ. ಈ ಬಗ್ಗೆ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ ಆರೋಪಿ ವಕೀಲನಿಗೆ 2 ವಾರ ಜೈಲು ಶಿಕ್ಷೆ ಹಾಗೂ 6 ಸಾವಿರ ದಂಡ ವಿಧಿಸಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ, ಆನ್‌ಲೈನ್ ಕಲಾಪದಲ್ಲಿ ವಕೀಲ ಆರ್.ಡಿ ಸಂತಾನ ಕೃಷ್ಣನ್ ಜತೆ ಕಾಣಿಸಿಕೊಂಡಿದ್ದ ಮಹಿಳಾ ಸಹೋದ್ಯೋಗಿಗೆ 4 ಲಕ್ಷ ಪರಿಹಾರ ನೀಡುವಂತೆ ನ್ಯಾಯಮೂರ್ತಿ ಪಿ.ಎನ್ ಪ್ರಕಾಶ್ ಹಾಗೂ ನ್ಯಾಯಮೂರ್ತಿ ಎ.ಎ ನಕ್ಕೀರನ್ ಅವರಿದ್ದ ವಿಭಾಗೀಯ ಪೀಠ ಆದೇಶಿಸಿದೆ.
ಈ ಘಟನೆ ನಡೆದದ್ದು 2021ರ ಡಿಸೆಂಬರ್ ನಲ್ಲಿ. ಹೈಕೋರ್ಟ್ ಹಾಗೂ ನ್ಯಾಯಾಲಯದ ಘನತೆಗೆ ಚ್ಯುತಿ ತಂದ ಕೃತ್ಯದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಹೈಕೋರ್ಟ್, ಈ ಕುರಿತು ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಂಡು, ತನಿಖೆಗೆ ಆದೇಶಿಸಿತ್ತು.
ಪ್ರಕರಣದ ವಿಚಾರಣೆ ವೇಳೆ ಆರೋಪಿ ವಕೀಲ ಸಂತಾನ ಕೃಷ್ಣನ್, ತನಗೆ ನ್ಯಾಯಾಲಯದ ಮೇಲೆ ಅಪಾರ ಗೌರವವಿದೆ. ಉದ್ದೇಶಪೂರ್ವಕವಾಗಿ ತಾನು ಹಾಗೆ ವರ್ತಿಸಲಿಲ್ಲ. ತನಗೆ ತಂತ್ರಜ್ಞಾನದ ಬಳಕೆಯ ಜ್ಞಾನ ಕಡಿಮೆ ಇದೆ. ಕ್ಯಾಮೆರಾ ಆನ್ ಇದೆ ಎಂಬುದು ಗಮನಕ್ಕೆ ಬಂದಿರಲಿಲ್ಲ. ಈ ಕೃತ್ಯ ಉದ್ದೇಶಪೂರ್ವಕವಾಗಿ ಅಲ್ಲ. ಹಾಗಾಗಿ ತನಗೆ ಕ್ಷಮೆ ನೀಡಬೇಕು ಎಂದು ವಾದಿಸಿದ್ದರು.
ಆದರೆ, ಈ ವಾದವನ್ನು ತಿರಸ್ಕರಿಸಿದ ನ್ಯಾಯಪೀಠ, ನಿಮ್ಮ ವಾದ ಹೇಗಿದೆ ಎಂದರೆ ರಸ್ತೆಯ ಮತ್ತೊಂದು ಬದಿಗಿರುವ ಪೊಲೀಸ್ ಸಿಬ್ಬಂದಿ ನೋಡುವುದಿಲ್ಲ ಎಂಬ ಕಾರಣಕ್ಕೆ ಸಿಗ್ನಲ್ ಜಂಪ್ ಮಾಡಿದ್ದೇನೆ. ಅವರು ನೋಡದಿದ್ದರೆ ನಾನು ಜಂಪ್ ಮಾಡಿಯೇ ಇಲ್ಲ ಎಂಬಂತಿದೆ ಎಂದು ಅಭಿಪ್ರಾಯಪಟ್ಟಿತು.
ಸ್ವತಃ ಆರೋಪಿ ವಕೀಲರೇ ವರ್ಚುಯಲ್ ಕೋರ್ಟ್ ಕಲಾಪಕ್ಕೆ ಹಾಜರಾಗಿದ್ದರು. ಕಲಾಪದಲ್ಲಿ ಹಾಜರಾದ ಮೇಲೆ ನ್ಯಾಯಾಲಯದ ಘನತೆಗೆ ತಕ್ಕಂತೆ ನಡೆದುಕೊಳ್ಳಬೇಕಿತ್ತು. ಇಲ್ಲಿ ಕ್ಯಾಮೆರಾ ಆನ್ ಇದೆಯೋ, ಇಲ್ಲವೋ ಅಥವಾ ಯಾರಾದರೂ ನೋಡುತ್ತಾರೋ ನೋಡುವುದಿಲ್ಲವೋ ಎಂಬದು ಮುಖ್ಯವಲ್ಲ ಎಂದು ಹೇಳಿ, ಆರೋಪಿ ವಕೀಲನ ಕೃತ್ಯಕ್ಕೆ ಅಸಮಾಧಾನ ವ್ಯಕ್ತಪಡಿಸಿತು.
ಬಡತನ ಮತ್ತು ಅನಿವಾರ್ಯತೆಯ ಹಿನ್ನೆಲೆಯಿಂದ ಬಂದ ಮಹಿಳಾ ಸಹೋದ್ಯೋಗಿಯನ್ನು ನಡೆಸಿಕೊಂಡಿರುವ ರೀತಿಗೂ ಆಕ್ರೋಶ ವ್ಯಕ್ತಪಡಿಸಿತು. ವಕೀಲನ ಈ ಹೀನ ಕೃತ್ಯದಿಂದಾಗಿ ಆಕೆ ಜೀವನಪರ್ಯಂತ ಮುಜುಗರ ಮತ್ತು ಅಪಮಾನ ಎದುರಿಸಬೇಕು ಎಂದು 'ಸಂತಾನ ಕೃಷ್ಣ'ನ ನಡವಳಿಕೆಯನ್ನು ಕಟುವಾಗಿ ಟೀಕಿಸಿತು.
Madras High Court
State Vs Santhan Krishna
Suo Motu Crl. Contempt Petition No.1699 of 2021)