NI Act 138: ಕಂಪೆನಿ ನಿರ್ದೇಶಕರುಗಳಿಗೆ ಯಾವಾಗ ಸಮನ್ಸ್ ನೀಡಬಹುದು?: ಸುಪ್ರೀಂ ಕೋರ್ಟ್ ವಿವರಣೆ
NI Act 138: ಕಂಪೆನಿ ನಿರ್ದೇಶಕರುಗಳಿಗೆ ಯಾವಾಗ ಸಮನ್ಸ್ ನೀಡಬಹುದು?: ಸುಪ್ರೀಂ ಕೋರ್ಟ್ ವಿವರಣೆ
ವರ್ಗಾವಣೀಯ ಲಿಖಿತಗಳ ಅಧಿನಿಯಮ ಕಾಯಿದೆ ಸೆಕ್ಷನ್ 138ರ ಜೊತೆ ಸೆಕ್ಷನ್ 141ರ ಅಡಿ ಸಲ್ಲಿಸಿದ ದೂರಿನಲ್ಲಿ ಯಾವ ಸಂದರ್ಭದಲ್ಲಿ ಅಪರಾಧ ಎಸಗಲಾಗಿದೆ ಎಂಬುದನ್ನು ಖಚಿತವಾಗಿ ಹೇಳುವುದು ಅಗತ್ಯ ಎಂದು ನ್ಯಾಯಾಲಯ ಹೇಳಿದೆ.
ಚೆಕ್ ಅಮಾನ್ಯ ಪ್ರಕರಣಗಳಲ್ಲಿ ಸೆಕ್ಷನ್ 138ರ ಅಡಿ ಕಂಪೆನಿಯ ನಿರ್ದೇಶಕರುಗಳಿಗೆ ಯಾವ ಸಂದರ್ಭದಲ್ಲಿ ಸಮನ್ಸ್ ನೀಡಬಹುದು ಅಥವಾ ನೇರವಾಗಿ ಅವರನ್ನು ಹೊಣೆಗಾರರನ್ನಾಗಿ ಮಾಡಬಹುದು ಎಂಬುದನ್ನು ಸುಪ್ರೀಂ ಕೋರ್ಟ್ ವಿವರಿಸಿದೆ.
ಅಮಾನ್ಯಗೊಂಡ ಚೆಕ್ ನೀಡಿದ ಕಂಪೆನಿಯ ನಿರ್ದೇಶಕರಾಗಿರುವ ಮಾತ್ರಕ್ಕೆ ವ್ಯಕ್ತಿಯೊಬ್ಬರನ್ನು ಹೊಣೆಗಾರರನ್ನಾಗಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಪುನರುಚ್ಚರಿಸಿದೆ. ಇದಕ್ಕೆ ನ್ಯಾಯಪೀಠವು SMS ಫಾರ್ಮಸ್ಯುಟಿಕಲ್ಸ್ Vs ನೇತಾ ಭಲ್ಲಾ ಮತ್ತು ಇತರರು ಪ್ರಕರಣವನ್ನು ಆಧರಿಸಿದೆ.
ಪ್ರಕರಣ: ಎಸ್‌ಎಂಸ್ ಫಾರ್ಮಸ್ಯುಟಿಕಲ್ಸ್ Vs ನೇತಾ ಭಲ್ಲಾ ಮತ್ತು ಇತರರು
ಯಾವುದೇ ಅಮಾನ್ಯಗೊಂಡ ಚೆಕ್ ಪ್ರಕರಣದಲ್ಲಿ, ಕಂಪೆನಿಯ ನಿರ್ದೇಶಕರನ್ನು ಹೊಣೆ ಮಾಡಬೇಕು ಎಂದಾದರೆ ಆ ವ್ಯಕ್ತಿ ಆ ನಿರ್ದಿಷ್ಟ ಸಮಯದಲ್ಲಿ ಕಂಪೆನಿಯ ವ್ಯವಹಾರಗಳ ನಿರ್ವಹಣೆಗೆ ಹೊಣೆಗಾರರಾಗಿರಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
"ಪಾಲುದಾರ ಸಂಸ್ಥೆಯ ಅಥವಾ ಕಂಪೆನಿಯ ನಿರ್ದೇಶಕರ ವಿರುದ್ಧ ಪ್ರಕ್ರಿಯೆ ಆರಂಭಿಸಬೇಕು ಎಂದಾದರೆ ನೆಗೋಷಿಯೆಬಲ್ ಆಕ್ಟ್‌ನ ಸೆಕ್ಷನ್ 138ರ ಜೊತೆ ಸೆಕ್ಷನ್ 141ರ ಅಡಿ ಸಲ್ಲಿಸಿದ ದೂರಿನಲ್ಲಿ ಯಾವ ಸಂದರ್ಭದಲ್ಲಿ ಅಪರಾಧ ಎಸಗಲಾಗಿದೆ ಎಂಬುದನ್ನು ಖಚಿತವಾಗಿ ದಾಖಲಿಸುವುದು ಮತ್ತು ಆ ಸಂದರ್ಭದಲ್ಲಿ ಕಂಪೆನಿಯು ಉಸ್ತುವಾರಿ ಹೊತ್ತಿದ್ದ ಹಾಗೂ ಕಂಪೆನಿಯ ವ್ಯವಹಾರ ನಿರ್ವಹಣೆಗೆ ಜವಾಬ್ದಾರಿಯಾಗಿದ್ದ ನಿರ್ದೇಶಕರನ್ನು ಸ್ಪಷ್ಟವಾಗಿ ಉಲ್ಲೇಖಿಸಬೇಕು" ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
"ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು ಆರೋಪಿ ನಿರ್ದೇಶಕರ ವಿರುದ್ಧ ಪ್ರಕ್ರಿಯೆ ಆರಂಭಿಸಬೇಕು ಎನ್ನುವುದನ್ನು ಮನವರಿಕೆ ಮಾಡಲು, ಪೀಠದ ಮುಂದಿರವ ದೂರಿನಲ್ಲಿ ಅಂಥ ಖಚಿತ ಉಲ್ಲೇಖ ಸಹಜವಾಗಿಯೇ ಮುಖ್ಯವಾಗುತ್ತದೆ ಮತ್ತು ಅಗತ್ಯವೂ ಆಗಿರುತ್ತದೆ" ಎಂದು ನ್ಯಾಯಪೀಠ ಹೇಳಿದೆ.
NI Act Sec 138 ದೂರಿನಲ್ಲಿ ಈ ಕುರಿತು ಸ್ಪಷ್ಟ ಉಲ್ಲೇಖ ಇಲ್ಲದಿದ್ದರೆ ಮ್ಯಾಜಿಸ್ಟ್ರೇಟ್ ಪ್ರಕ್ರಿಯೆ ಆರಂಭಿಸಲು ಕಾನೂನಾತ್ಮಕವಾಗಿ ಸಮರ್ಥನೆ ಸಿಗುವುದಿಲ್ಲ ಎಂದು ಸುಪ್ರೀಂ ಕೋರ್ಟಿನ ವಿಭಾಗೀಯ ಪೀಠ ವಿವರಿಸಿದೆ.
ಇಂತಹ ಪ್ರಕರಣಗಳಲ್ಲಿ ನಿರ್ದೇಶಕರಿಗೆ ಸಮನ್ಸ್ ಆದೇಶ ಹೊರಡಿಸಿದರೆ ಹೈಕೋರ್ಟ್ ಅದರಲ್ಲಿ ಮಧ್ಯಪ್ರವೇಶ ಮಾಡಬಾರದು. ಅನುಮಾನಕ್ಕೆ ಎಡೆಮಾಡಿಕೊಡಲಾರದ, ಸ್ವೀಕಾರಾರ್ಹವಾದ, ಸಂಪೂರ್ಣವಾಗಿ ಒಪ್ಪಿಕೊಳ್ಳಬಹುದಾದ, ದೋಷಾತೀತವಾದ, ನಿರ್ವಿವಾದವಾದ ಸಾಕ್ಷ್ಯ ದೊರೆಯದಿದ್ದರೆ, ಅದರಲ್ಲಿ ಅಮಾನ್ಯಗೊಂಡ ಚೆಕ್‌ಗೆ ಸಂಬಂಧಿಸಿದಂತೆ ನಿರ್ದೇಶಕರಿಗೆ ಯಾವುದೇ ಸಂಬಂಧ ಇರದಿದ್ದರೆ ಅವರನ್ನು ವಿಚಾರಣೆಯಲ್ಲಿ ಭಾಗವಹಿಸುವಂತೆ ಮಾಡುವುದು ನ್ಯಾಯಾಲಯದ ಪ್ರಕ್ರಿಯೆಯ ದುರ್ಬಳಕೆಯಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಒಂದು ವೇಳೆ, ದೂರಿನಲ್ಲಿ ಅಂತಹ ಮೂಲಭೂತ ಉಲ್ಲೇಖ ಇದ್ದರೂ, ಸಂಬಂಧಿತ ನ್ಯಾಯಾಲಯವು ನಂತರ ಹಲವಾರು ಕಾರಣಗಳಿಗಾಗಿ ಆರೋಪಿ ನಿರ್ದೇಶಕರ ವಿರುದ್ಧ ಯಾವುದೇ ಪ್ರಕರಣವನ್ನು ಮಾಡಲಾಗಿಲ್ಲ ಎಂಬುದಾಗಿ ತೀರ್ಮಾನಿಸಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಹೇಳಲಾಗಿದೆ.
NI Act Sec 138 ದೂರಿಗೆ ಸಂಬಂಧಿಸಿದಂತೆ, 2012ರಲ್ಲಿ ವಿಚಾರಣಾ ನ್ಯಾಯಾಲಯವು ಕಂಪೆನಿಯ ನಿರ್ದೇಶಕರಿಗೆ ಸಮನ್ಸ್ ಜಾರಿಗೊಳಿಸಿದ್ದನ್ನು 2014ರಲ್ಲಿ ಹೈಕೋರ್ಟ್ ವಜಾ ಮಾಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರು ಸಲ್ಲಿಸಿದ ಮೇಲ್ಮನವಿ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ಈ ವಿಚಾರ ಹೇಳಿದೆ.
ಅಮಾನ್ಯಗೊಂಡ ಚೆಕ್ ಪ್ರಕರಣಕ್ಕೆ ಮೇಲ್ಮನವಿ ಸಲಿಸಿದ್ದ ನಿರ್ದೇಶಕರುಗಳು ಚೆಕ್‌ಗೆ ಸಹಿ ಮಾಡಿರಲಿಲ್ಲ. ಅಲ್ಲದೇ, ಮೇಲ್ಮನವಿದಾರರು ತಾವು ಕಾರ್ಯಕಾರಿ ನಿರ್ದೇಶಕರು ಅಲ್ಲ ಎಂಬುದಾಗಿ ವಾದ ಮಾಡಿದ್ದರು.
ದೂರನ್ನು ಪರಿಶೀಲಿಸಿದ ಸುಪ್ರೀಂ ಕೋರ್ಟ್ “ಕಂಪೆನಿ ನೀಡಿರುವ ಚೆಕ್‌ಗಳನ್ನು ಬ್ಯಾಂಕ್ ನಿರಾಕರಿಸಿದ ಸಂದರ್ಭದಲ್ಲಿ ಮೇಲ್ಮನವಿದಾರರು ನಿರ್ದೇಶಕರಾಗಿದ್ದು ಕಂಪೆನಿಯ ವ್ಯವಹಾರಕ್ಕೆ ಜವಾಬ್ದಾರರಾಗಿದ್ದಾರೆ ಎಂದು ದೂರಿನಲ್ಲಿರುವ ಆರೋಪಗಳಿಂದ ಸ್ಪಷ್ಟವಾಗಿ ತಿಳಿದುಬಂದಿದೆ” ಎಂದು ನ್ಯಾಯಾಲಯ ಹೇಳಿದೆ.
ಆರೋಪಿ ಮೇಲ್ಮನವಿದಾರರ ವಾದವನ್ನು ಅಲ್ಲಗಳೆದಿರುವ ಸುಪ್ರೀಂ ಕೋರ್ಟ್, ಹೈಕೋರ್ಟ್ ಆದೇಶದಲ್ಲಿ ಯಾವುದೇ ನ್ಯೂನ್ಯತೆ ಇಲ್ಲ ಎಂದು ಹೇಳಿದ್ದು, ಸಮನ್ಸ್‌ನಲ್ಲಿ ಮಧ್ಯಪ್ರವೇಶ ಮಾಡಲಾಗದು ಎಂದು ಸ್ಪಷ್ಟಪಡಿಸಿದೆ.