-->
ಅಪರಾಧದ ಎಲ್ಲ ಅಂಶಗಳನ್ನು ಸಾಬೀತುಪಡಿಸುವ ಹೊಣೆ ಆರೋಪಿಯದ್ದಲ್ಲ, ಅಭಿಯೋಜನೆಯದ್ದು: ಸುಪ್ರೀಂ ಮಹತ್ವದ ತೀರ್ಪು

ಅಪರಾಧದ ಎಲ್ಲ ಅಂಶಗಳನ್ನು ಸಾಬೀತುಪಡಿಸುವ ಹೊಣೆ ಆರೋಪಿಯದ್ದಲ್ಲ, ಅಭಿಯೋಜನೆಯದ್ದು: ಸುಪ್ರೀಂ ಮಹತ್ವದ ತೀರ್ಪು

ಅಪರಾಧದ ಎಲ್ಲ ಅಂಶಗಳನ್ನು ಸಾಬೀತುಪಡಿಸುವ ಹೊಣೆ ಆರೋಪಿಯದ್ದಲ್ಲ, ಅಭಿಯೋಜನೆಯದ್ದು: ಸುಪ್ರೀಂ ಮಹತ್ವದ ತೀರ್ಪು






'ಅಪರಾಧ'ದ ಎಲ್ಲಾ ಅಂಶಗಳನ್ನು ಸಾಬೀತುಪಡಿಸುವ ಹೊಣೆ ಸದಾ ಅಭಿಯೋಜನೆಯ ಮೇಲಿದೆ. ಅದು ಯಾವುದೇ ಹಂತದಲ್ಲೂ ಆರೋಪಿಗೆ ವರ್ಗಾವಣೆಯಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ತ್ರಿಸದಸ್ಯ ಪೀಠ ಮಹತ್ವದ ತೀರ್ಪು ನೀಡಿದೆ.


ಪ್ರಕರಣ: ನಂಜುಂಡಪ್ಪ ಮತ್ತೊಬ್ಬರು Vs ಕರ್ನಾಟಕ ಸರ್ಕಾರ

ಸುಪ್ರೀಂ ಕೋರ್ಟ್: Cr.A.-900/2017 Dated 17-05-2022


ಆರೋಪಿಯ ವಾದ ದುರ್ಬಲವಾಗಿದೆ ಎಂದಾದಾಗ ಅಥವಾ ಆರೋಪಿ ಸ್ಪಷ್ಟವಾಗಿ ಸುಳ್ಳು ಹೇಳುತ್ತಿದ್ದಾನೆ ಎನ್ನುವ ಪ್ರಕರಣಗಳಲ್ಲೂ ಅಪರಾಧವನ್ನು ಸಾಬೀತುಪಡಿಸುವ ಹೊಣೆ ಅಭಿಯೋಜನೆಯದ್ದೇ ಆಗಿರುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ನೇತೃತ್ವದ ನ್ಯಾಯಪೀಠ ಅಭಿಪ್ರಾಯಪಟ್ಟಿತು.


ಪ್ರಕರಣದ ವಿವರ:

ಕರ್ನಾಟಕದ ಮೊಳಕಾಲ್ಮೂರು ನಗರದಲ್ಲಿ 2003ರಲ್ಲಿ ಸಂಭವಿಸಿದ್ದ ವಿದ್ಯುತ್ ಆಘಾತದಲ್ಲಿ ಓರ್ವ ವ್ಯಕ್ತಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂ ಕೋರ್ಟ್‌ ಮುಂದೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. 

IPC ಸೆಕ್ಷನ್ 34 (ಸಾಮಾನ್ಯ ಉದ್ದೇಶ) R/w ಸೆಕ್ಷನ್ 304- ಎ (ನಿರ್ಲಕ್ಷ್ಯದಿಂದ ಸಾವಿಗೆ ಕಾರಣ) ಅಡಿಯಲ್ಲಿ ಕರ್ನಾಟಕ ಹೈಕೋರ್ಟ್‌ ಅರ್ಜಿದಾರರ ವಿರುದ್ಧ ವಿಚಾರಣಾ ನ್ಯಾಯಾಲಯ ನೀಡಿದ್ದ ಶಿಕ್ಷೆಯನ್ನು ಎತ್ತಿಹಿಡಿದಿತ್ತು.


ವಿದ್ಯುತ್ ತಂತಿ ಮತ್ತು ಟೆಲಿಫೋನ್ ತಂತಿಯನ್ನು ಬೇರ್ಪಡಿಸಲು ಮುಂದಾಗಿದ್ದ ಉದಯಶಂಕರ್ ಎಂಬಾತ ವಿದ್ಯುತ್‌ ಅಪಘಾತಕ್ಕೆ ಸಿಲುಕಿ ಮೃತಪಟ್ಟಿದ್ದರು.



ದೂರಸಂಪರ್ಕ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ದಿನಗೂಲಿ ನೌಕರರಾಗಿದ್ದ ಎರಡನೇ ಅರ್ಜಿದಾರರು ಮೊದಲನೇ ಅರ್ಜಿದಾರರ ಸೂಚನೆ ಮೇರೆಗೆ ಆ ಟೆಲಿಫೋನ್ ಕಂಬದಲ್ಲಿ ಕೆಲಸ ಮಾಡಿಕೊಂಡಿದ್ದರು ಎಂಬುದು ತನಿಖೆ ವೇಳೆ ಗೊತ್ತಾಗಿತ್ತು.



ಮೈನ್ ಸ್ವಿಚ್ ಆಫ್ ಮಾಡಿದ್ದರೂ ತಂತಿಯಲ್ಲಿ ವಿದ್ಯುತ್ ಪ್ರವಹಿಸಿದ ಪರಿಣಾಮ ಈ ಮೃತ್ಯು ಸಂಭವಿಸಿದೆ. ಇದು ಅರ್ಜಿದಾರರ ನಿರ್ಲಕ್ಷ್ಯದ ಪರಿಣಾಮದಿಂದ ಆಗಿರುವ ಅಪರಾಧ ಎಂದು ಆರೋಪಪಟ್ಟಿ ಸಲ್ಲಿಸಲಾಗಿತ್ತು.



ಆದರೆ, ಈ ಪ್ರಕರಣದಲ್ಲಿ ಯಾರೂ ಪ್ರತ್ಯಕ್ಷ ಸಾಕ್ಷಿ ಇರಲಿಲ್ಲ. ಅರ್ಜಿದಾರರು ಮರಣೋತ್ತರ ವರದಿಗೆ ಯಾವುದೇ ತಕರಾರು ಸಲ್ಲಿಸಿಲ್ಲ. ಈ ಸಾವು ಟೆಲಿಫೋನ್ ತಂತಿಯ ವಿದ್ಯುತ್ ಪ್ರವಾಹದಿಂದ ಸಂಭವಿಸಿಲ್ಲ ಬದಲಾಗಿ ಟಿವಿ ಸೆಟ್‌ ನಿಂದ ಹರಿದ ಪ್ರವಾಹ ಎಂಬುದಾಗಿ ಅರ್ಜಿದಾರರು ವಾದಿಸಿದ್ದರು.



ಘಟನೆ ನಡೆದ ದಿನ ಅರ್ಜಿದಾರರು ಟೆಲಿಫೋನ್‌ ತಂತಿ ರಿಪೇರಿ ಮಾಡುತ್ತಿರಲಿಲ್ಲ. ಹಾಗಾಗಿ, ಮೃತರ ಸಾವಿನಲ್ಲಿ ನಮ್ಮ ನಿರ್ಲಕ್ಷ್ಯ ಇಲ್ಲ. ಆದ್ದರಿಂದ ಹೈಕೋರ್ಟ್‌ ವಿಧಿಸಿರುವ ಶಿಕ್ಷೆಯನ್ನು ರದ್ದುಗೊಳಿಸುವಂತೆ ಅರ್ಜಿದಾರರು ಕೋರಿದ್ದರು.



ವಾದ ಆಲಿಸಿದ ನ್ಯಾಯಪೀಠ, 'ಅಕಸ್ಮಾತ್, ಅರ್ಜಿದಾರರು ಘಟನಾ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಒಪ್ಪಿದರೂ ಮೃತರು ಸ್ಪರ್ಶಿಸಿದ ಟೆಲಿಫೋನ್‌ ತಂತಿ 11 ಕೆವಿಯಷ್ಟು ವಿದ್ಯುತ್‌ ಹರಿದರೂ ಕರಗದೇ ಉಳಿದಿದೆ, ಟಿವಿ ಕೂಡ ಸ್ಫೋಟಗೊಂಡಿಲ್ಲ, ವಿದ್ಯುತ್‌ ತಗುಲಿದರೂ ಸಾಕ್ಷಿದಾರರಿಗೆ ಏನೂ ಆಗಿಲ್ಲ ಎಂಬುದನ್ನು ನಂಬುವುದು ಕಷ್ಟ' ಎಂದು ಸುಪ್ರೀಂ ಕೋರ್ಟ್‌ ತೀರ್ಪಿನಲ್ಲಿ ಹೇಳಿತು.



'ಸಾಂದರ್ಭಿಕ ಪುರಾವೆಗಳ ಗಮನಿಸಿ, ಆತುರದ ತೀರ್ಪು ನೀಡುವ ಅಪಾಯವಿದೆ. ಅಂತಹ ಸಾಕ್ಷ್ಯಗಳನ್ನು ಮೌಲ್ಯಮಾಪನ ಮಾಡುವಾಗ ಅತಿ ಜಾಗರೂಕತೆಯಿಂದ ಇರಬೇಕಾಗುತ್ತದೆ. ಅಪರಾಧದ ನಿರ್ಣಯ ಎಂಬುದು ವಾಸ್ತವಾಂಶಗಳಿಂದ ಸೂಕ್ತ ರೀತಿಯಲ್ಲಿ ತೀರ್ಮಾನವಾಗಿದೆ ಎಂಬುದನ್ನು ನ್ಯಾಯತೀರ್ಪು ನೀಡುವವರು ಅರಿತಿರಬೇಕು. ಸದ್ರಿ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಆರೋಪಿ ವಿರುದ್ಧದ ಸಾಕ್ಷ್ಯ ಸಂಪೂರ್ಣ ನ್ಯಾಯಸಮ್ಮತವಾಗಿಲ್ಲ' ಎಂಬುದಾಗಿ ಸುಪ್ರೀಂ ಕೋರ್ಟ್ ಗಮನಿಸಿತು.



ದೂರುದಾರರ ವಿರುದ್ಧದ ಆರೋಪ ಸಾಬೀತುಪಡಿಸುವಂತಹ ಯಾವುದೇ ತಾಂತ್ರಿಕ ವರದಿ ಸಲ್ಲಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಹೇಳಿದ, ನ್ಯಾಯಪೀಠ, ಮೇಲ್ಮನವಿಯನ್ನು ಪುರಸ್ಕರಿಸಿ ಅರ್ಜಿದಾರರಿಗೆ ವಿಧಿಸಿದ್ದ ಶಿಕ್ಷೆಯನ್ನು ರದ್ದುಪಡಿಸಿತು.

Ads on article

Advertise in articles 1

advertising articles 2

Advertise under the article