ಕಂಪೆನಿ ವಿರುದ್ಧ ಕ್ರಿಮಿನಲ್ ಕೇಸು ಹೂಡುವವರು ಈ ಅಂಶಗಳನ್ನು ತಪ್ಪದೆ ಮರೆಯದಿರಿ
"ಕಂಪೆನಿಯನ್ನು ಆರೋಪಿಯನ್ನಾಗಿಸದೆ ಅದರ 'ಪದಾಧಿಕಾರಿ'ಗಳ ವಿರುದ್ಧ ಮೊಕದ್ದಮೆ ಹೂಡುವಂತಿಲ್ಲ"
'ಕಂಪೆನಿ' ಪದಾಧಿಕಾರಿಗಳ ವಿರುದ್ಧ ನಿರ್ದಿಷ್ಟ ಆರೋಪ ಇಲ್ಲದಿದ್ದಾಗ, 'ಕಂಪನಿ'ಯನ್ನು ಆರೋಪಿಯನ್ನಾಗಿ ಮಾಡದಿದ್ದರೆ, ಆ ಕಂಪೆನಿಯ ಪದಾಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ವಿಚಾರಣೆ ಸಾಧ್ಯವಿಲ್ಲ- ಜಮ್ಮು ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್
ಕಂಪೆನಿಯ ನಿರ್ದೇಶಕರುಗಳ ವಿರುದ್ಧ ನಿರ್ದಿಷ್ಟ ಆರೋಪ ಇದ್ದಾಗ ಕಂಪೆನಿಯನ್ನು 'ಆರೋಪಿ'ಯನ್ನಾಗಿ ನ್ಯಾಯಾಲಯಕ್ಕೆ ಹಾಜರುಪಡಿಸದ ಹೊರತು ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ವಿಚಾರಣೆ ಆರಂಭಿಸುವಂತಿಲ್ಲ ಎಂದು ಜಮ್ಮು ಕಾಶ್ಮೀರ ಹಾಗೂ ಲಡಾಖ್ ಹೈಕೋರ್ಟ್ ತೀರ್ಪು ನೀಡಿದೆ.
ಪ್ರಕರಣ: ಸಂದೀಪ್ ಸಿಂಗ್ ಮತ್ತಿತರರು Vs ನಿಸಾರ್ ಅಹ್ಮದ್ ದಾರ್
ಜಮ್ಮು ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್ Dated 21-05-2022
ಹಲವು ಸುಪ್ರೀಂ ಕೋರ್ಟಿನ ಮಹತ್ವದ ತೀರ್ಪುಗಳನ್ನು ಅನ್ವಯಿಸಿದ್ದು, ಪ್ರತಿವಾದಿ ನಿಸಾರ್ ಅಹ್ಮದ್ ದರ್ ಎಂಬುವವರಿಗೆ ₹ 3 ಕೋಟಿ ವಂಚಿಸಿದ ಆರೋಪದ ಮೇಲೆ 'ಐಜೆನ್ ಕಮ್ಯುನಿಕೇಷನ್ ಪ್ರೈ.ಲಿ.'ನ ಪದಾಧಿಕಾರಿಗಳ ವಿರುದ್ಧ ದಾಖಲಾಗಿದ್ದ ಮೊಕದ್ದಮೆಯನ್ನು ಏಕಸದಸ್ಯ ಪೀಠ ರದ್ದುಗೊಳಿಸಿತು.
ಸದ್ರಿ ಕಂಪೆನಿಯಲ್ಲಿ ಹಣ ಹೂಡಿದರೆ 3 ವರ್ಷದಲ್ಲಿ ಹಣ ಡಬಲ್ ಮಾಡಿಕೊಡುವುದಾಗಿ ಮತ್ತು ಆಕರ್ಷಕ ಬೋನಸ್ ನೀಡುವುದಾಗಿ ನಿರ್ದೇಶಕರು ವಂಚನೆಯ ಜಾಲ ಹರಡಿದ್ದರು. ಅಲ್ಲದೆ, ನಿಸಾರ್ ಅಹ್ಮದ್ ದರ್ ಎಂಬುವವರಿಗೆ 3 ಕೋಟಿ ರೂ. ವಂಚಿಸಿದ್ದರು.
ಈ ಪ್ರಕರಣದಲ್ಲಿ ಕಂಪೆನಿಯನ್ನು ಆರೋಪಿಯನ್ನಾಗಿ ಮಾಡದೆ ಅದರ ಪದಾಧಿಕಾರಿಗಳ ವಿರುದ್ಧ ಮೊಕದ್ದಮೆ ಹೂಡುವಂತಿಲ್ಲ ಮತ್ತು ದೂರುದಾರರು ವಿಚಾರಣಾ ನ್ಯಾಯಾಲಯದ ವ್ಯಾಪ್ತಿಯ ಹೊರಗಿನ ವಾಸಿಯಾಗಿರುವುದರಿಂದ ನ್ಯಾಯಾಲಯ ಪ್ರಕರಣದಲ್ಲಿ ವಿಚಾರಣೆ ನಡೆಸುವಂತೆ ಸೂಚಿಸುವಂತಿಲ್ಲ ಎಂಬುದು ಕಂಪೆನಿ ನಿರ್ದೇಶಕರು ವಾದಿಸಿದ್ದರು.
ಅರ್ಜಿದಾರರ ವಾದ ಆಲಿಸಿದ ಹೈಕೋರ್ಟ್, "ಕಂಪೆನಿ ನಿರ್ದೇಶಕರುಗಳ ಮೇಲೆ ದೋಷಪೂರಿತ ಹೊಣೆ ಹೊರಿಸುವ ಯಾವುದೇ ನಿಯಮಾವಳಿಯನ್ನು ದಂಡ ಸಂಹಿತೆ ಒಳಗೊಂಡಿಲ್ಲ ಎಂಬುದು ಸ್ಪಷ್ಟವಾಗಿದೆ. ಕಂಪನಿಯ ನಿರ್ದೇಶಕರುಗಳ ವಿರುದ್ಧ ನಿರ್ದಿಷ್ಟ ಆರೋಪ ಇಲ್ಲದಿದ್ದಾಗ ಹಾಗೂ ಕಂಪನಿಯನ್ನು ಆರೋಪಿಯನ್ನಾಗಿ ಮಾಡದಿದ್ದಾಗ, ಅದರ ಪದಾಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ವಿಚಾರಣೆ ಸಾಧ್ಯವಿಲ್ಲ,” ಎಂದು ನ್ಯಾಯಾಲಯ ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶವನ್ನು ರದ್ದುಗೊಳಿಸಿತು.
Judgement;