Demanding money for build a house amounts to Dowry - ಮನೆ ಕಟ್ಟಲು ಹಣ ಕೇಳುವುದು ವರದಕ್ಷಿಣೆ ಬೇಡಿಕೆ: ಸುಪ್ರೀಂ ಕೋರ್ಟ್
ಮನೆ ಕಟ್ಟಲು ಹಣ ಕೇಳುವುದು ವರದಕ್ಷಿಣೆ ಬೇಡಿಕೆ: ಸುಪ್ರೀಂ ಕೋರ್ಟ್
ಮನೆ ಕಟ್ಟಲು ಹಣ ಕೊಡಿ ಎಂದು ಪತ್ನಿಯ ಪೋಷಕರಲ್ಲಿ ಬೇಡಿಕೆ ಇಡುವುದು ಕೂಡ ವರದಕ್ಷಿಣೆ ಬೇಡಿಕೆ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದ್ದು, ವರದಕ್ಷಿಣೆಯನ್ನು ವಿಶಾಲ ದೃಷ್ಟಿಕೋನದಿಂದ ನ್ಯಾಯಾಲಯಗಳು ನೋಡಬೇಕು ಎಂದು ತೀರ್ಪಿನಲ್ಲಿ ಹೇಳಿದೆ.
'ವರದಕ್ಷಿಣೆ ನಿಷೇಧ ಕಾಯಿದೆ, 1961'ರ ಸೆಕ್ಷನ್ 2ರಲ್ಲಿ ವ್ಯಾಖ್ಯಾನಿಸಲಾದ ಆಸ್ತಿ ಅಥವಾ ಯಾವುದೇ ರೀತಿಯ ಮೌಲ್ಯಯುತ ಭದ್ರತೆಗೆ ಸಂಬಂಧಿಸಿದಂತೆ ಬೇಡಿಕೆ ಇಡುವುದು ವರದಕ್ಷಿಣೆಗೆ ಸಮಾನ ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.
ಪ್ರಕರಣ: ಮಧ್ಯಪ್ರದೇಶ ಸರ್ಕಾರ ಮತ್ತು ಜೋಗೇಂದ್ರ ಇನ್ನಿತರರು
ಈ ಪ್ರಕರಣದಲ್ಲಿ ಮಧ್ಯಪ್ರದೇಶದಲ್ಲಿ ಮಹಿಳೆಯೊಬ್ಬರು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಗಂಡ ಮತ್ತು ಮಾವನನ್ನು ದೋಷಮುಕ್ತಗೊಳಿಸಿದ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು.
ಸಿಜೆಐ ಎನ್ ವಿ ರಮಣ, ನ್ಯಾ. ಹಿಮಾ ಕೊಹ್ಲಿ ಮತ್ತು ನ್ಯಾ. A.S. ಬೋಪಣ್ಣ ಅವರಿದ್ದ ನ್ಯಾಯಪೀಠ IPC ಸೆಕ್ಷನ್ 304 ಬಿ ಅಡಿಯಲ್ಲಿ ವರದಕ್ಷಿಣೆ ಸಾವು ಪ್ರಕರಣದ ವಿಚಾರಣೆ ನಡೆಸುವಾಗ 'ವರದಕ್ಷಿಣೆ' ಎಂಬ ಪದಕ್ಕೆ ಉದಾರ ಮತ್ತು ವಿಸ್ತಾರ ವ್ಯಾಖ್ಯಾನ ನೀಡಬೇಕು ಎಂದು ಹೇಳಿತು.
ಆರೋಪಿಗಳ ಜೊತೆ ಸೇರಿ ಪತ್ನಿಯೂ ಮನೆ ಕಟ್ಟಲು ಹಣ ಕೇಳಿದ್ದನ್ನು 'ವರದಕ್ಷಿಣೆ ಬೇಡಿಕೆ' ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂಬ ಮಧ್ಯಪ್ರದೇಶ ಹೈಕೋರ್ಟ್ ಅಭಿಮತ ತಪ್ಪು ಎಂದು ನ್ಯಾಯಪೀಠ ತಿಳಿಸಿತು.
ಸೆಕ್ಷನ್ 304 ಬಿ ಅಡಿಯಲ್ಲಿ ವರದಕ್ಷಿಣೆ ಸಾವಿನ ಆರೋಪಿಗಳನ್ನು ಖುಲಾಸೆಗೊಳಿಸುವ ಕುರಿತು ಹೈಕೋರ್ಟ್ ನೀಡಿದ್ದ ತೀರ್ಪನ್ನು ರದ್ದುಗೊಳಿಸಿ ಆರೋಪಿಗಳಿಗೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿತು. ನಿರ್ಣಾಯಕ ಸಾಕ್ಷ್ಯಾಧಾರಗಳ ಕೊರತೆಯಿಂದ ಸೆಕ್ಷನ್ 306ರ ಅಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಅಪರಾಧಕ್ಕಾಗಿ ಅವರನ್ನು ಖುಲಾಸೆಗೊಳಿಸುವ ಹೈಕೋರ್ಟ್‌ನ ತೀರ್ಪಿನಲ್ಲಿ ಅದು ಮಧ್ಯಪ್ರವೇಶಿಸಲಿಲ್ಲ.