Fight Against Corruption - ಸರ್ಕಾರಿ ಕಚೇರಿಗಳಲ್ಲಿ ಲಂಚ ನೀಡಿ ರೋಸಿ ಹೋಗಿದ್ದೀರಾ.. ಇಲ್ಲಿದೆ ನಿಮಗೆ ಒಂದು ಪರಿಹಾರ
ಸರ್ಕಾರಿ ಕಚೇರಿಗಳಲ್ಲಿ ಲಂಚ ನೀಡಿ ರೋಸಿ ಹೋಗಿದ್ದೀರಾ.. ಇಲ್ಲಿದೆ ನಿಮಗೆ ಒಂದು ಪರಿಹಾರ
ಕಂದಾಯ ಇಲಾಖೆ, ನಗರಾಭಿವೃದ್ಧಿ ಪ್ರಾಧಿಕಾರ, ಮಹಾನಗರ ಪಾಲಿಕೆ, ನಗರ ಸಭೆ, ಪಟ್ಟಣ ಪಂಚಾಯತ್ RTOದಿಂದ ಹಿಡಿದು ಗ್ರಾಮ ಪಂಚಾಯತ್ ಮಟ್ಟಕ್ಕೂ ಭ್ರಷ್ಟಾಚಾರ ವ್ಯಾಪಿಸಿದೆ. ಈ ವಿಷ ಸರ್ಪ ಸಮಾಜಕ್ಕೆ ಕಂಟಕವಾಗಿ ಪರಿಣಮಿಸಿದ್ದು, ಸಾಮಾನ್ಯ ಜನರು ಪಾಪಿ ಅಧಿಕಾರಿಗಳಿಗೆ ಹಣ ನೀಡಿ ರೋಸಿ ಹೋಗಿದ್ದಾರೆ.
ಇತ್ತೀಚಿನ 40% ಕಮಿಷನ್ ಪ್ರಕರಣದ ಬಳಿಕವಂತೂ ಭ್ರಷ್ಟಾಚಾರ ತಮ್ಮ ಜನ್ಮ ಸಿದ್ಧ ಹಕ್ಕು ಎಂಬಂತೆ ಸರ್ಕಾರಿ ಅಧಿಕಾರಿಗಳು, ಗುಮಾಸ್ತರು ವರ್ತಿಸತೊಡಗಿದ್ದಾರೆ.
ಮಾಮೂಲಿಯಾಗಿ 100 ರೂ. ಪಡೆದುಕೊಳ್ಳುವವರು ಈಗ ಮೇಲ್ದರ್ಜೆಗೆ ಏರಿದ್ದಾರೆ. 500 ಇಲ್ಲವೇ 1000 ರೂ. ನೀಡದೆ ಕೆಲಸ ಮಾಡಲ್ಲ ಎಂಬಂತೆ ವರ್ತಿಸುತ್ತಿದ್ದಾರೆ.
ಸರ್ಕಾರಿ ಅಧಿಕಾರಿಗಳು ತಮ್ಮ ಕೆಲಸ ದೇವರ ಕೆಲಸ ಎಂಬುದನ್ನು ಮರೆತುಬಿಟ್ಟಿದ್ದಾರೆ. ಎಲ್ಲೂ ಪ್ರಾಮಾಣಿಕವಾಗಿ ಕೆಲಸವೇ ಆಗುತ್ತಿಲ್ಲ. ಇದಕ್ಕೆಲ್ಲ ಕಾರಣ ನಾಗರಿಕ ಸಮಾಜ.
ಹೌದು, ಜನ ಭ್ರಷ್ಟಾಚಾರವನ್ನು ನೋಡಿಯೂ ನೋಡದಂತೆ ಸುಮ್ಮನಿದ್ದಾರೆ. ತಮಗೂ ಇದಕ್ಕೆ ಏನೂ ಸಂಬಂಧ ಇಲ್ಲ ಎಂಬಂತೆ ಇದ್ದಾರೆ. ತಮ್ಮ ಕೆಲಸ ಆದರೆ ಸಾಕು.. ಉಳಿದವರ ಚಿಂತೆ ನಮಗೇಕೆ? ಎಂದು ಸರ್ಕಾರಿ ಕಚೇರಿಗೆ ತೆರಳಿ ಭ್ರಷ್ಟ ಅಧಿಕಾರಿಗಳ ಜೇಬಿಗೆ 'ಪ್ರಸಾದ'ವನ್ನು ತಳ್ಳಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರಾರು ಎಂದು ಸುಮ್ಮನಾಗಿದ್ದಾರೆ.
ಇಂತಹವರಿಗೆ ಸಿಂಹ ಸ್ವಪ್ನವಾಗಿ ಭ್ರಷ್ಟಾಚಾರ ನಿಗ್ರಹ ದಳ ಮತ್ತು ಲೋಕಾಯುಕ್ತ ಕೆಲಸ ಮಾಡುತ್ತಿದೆ. ನೀವು ನಿಜವಾಗಿ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಬೇಕೆಂದು ಇದ್ದರೆ ಈ ಇಲಾಖೆಯ ಸಹಾಯ ಪಡೆದುಕೊಳ್ಳಿ..
ನೀವೇನು ಮಾಡಬಹುದು..?
ಯಾವುದೇ ಸರ್ಕಾರಿ ನೌಕರರು, ಸಾರ್ವಜನಿಕ ಇಲಾಖೆಯ ಸಿಬ್ಬಂದಿ ತಾವು ಮಾಡಬೇಕಾದ ಸಾರ್ವಜನಿಕ ಕೆಲಸಕ್ಕೆ ಪ್ರತಿಫಲವಾಗಿ ಲಂಚದ ಹಣಕ್ಕೆ ಬೇಡಿಕೆ ಇಡುವುದು, ಲಂಚ ಪಡೆಯುವುದು, ಲಂಚದ ರೂಪದಲ್ಲಿ ಪ್ರತಿಫಲ ಪಡೆಯುವುದು ಭ್ರಷ್ಟಾಚಾರ.
ಸಾರ್ವಜನಿಕ ಹುದ್ದೆಯನ್ನು ಬಳಸಿಕೊಂಡು ಬೇರೆ ರೀತಿಯ ಅವ್ಯವಹಾರ ನಡೆಸುವುದು, ಇದೇ ರೀತಿ ಹುದ್ದೆ ದುರ್ಬಳಕೆ ಮಾಡಿಕೊಂಡು ಗಳಿಕೆ ಮಾಡುವುದು ಕೂಡ ಭ್ರಷ್ಟಾಚಾರ.
ಇದೇ ರೀತಿಯ ಹುದ್ದೆ ದುರ್ಬಳಕೆ ಮಾಡಿಕೊಂಡು ಗಳಿಕೆ ಮಾಡುವುದು, ಯಾರಿಗಾದರೂ ಸಾರ್ವಜನಿಕ ಅಧಿಕಾರಿ ತಮ್ಮ ಆದಾಯಕ್ಕಿಂತಲೂ ಹೆಚ್ಚಿನ ಆಸ್ತಿ ಹೊಂದಿದ್ದರೆ ಅದು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ-1988ರ ಪ್ರಕಾರ ಶಿಕ್ಷಾರ್ಹ ಅಪರಾಧವಾಗುತ್ತದೆ.
ಈ ಕುರಿತ ಯಾವುದೇ ಮಾಹಿತಿಯನ್ನು ಸಾರ್ವಜನಿಕರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ಮಾಹಿತಿ ನೀಡಬಹುದು.
ದೂರು ನೀಡುವುದು ಹೇಗೆ..?
ನಿಮ್ಮ ಜಿಲ್ಲೆಯ ಭ್ರಷ್ಟಾಚಾರ ನಿಗ್ರಹ ದಳದ ಕಚೇರಿಗೆ ತೆರಳಿ ದೂರು ನೀಡಬಹುದು. ಇಲ್ಲವೇ ಬೆಂಗಳೂರಿನಲ್ಲಿ ಇರುವ ಕೇಂದ್ರ ಕಚೇರಿಗೆ ಮಾಹಿತಿ ಯಾ ದೂರು ನೀಡಬಹುದು.
ಪ್ರತಿ ಜಿಲ್ಲೆಯಲ್ಲಿ ಇರುವ ಭ್ರಷ್ಟಾಚಾರ ನಿಗ್ರಹ ದಳದ ಕಚೇರಿಯಲ್ಲಿ ಡಿವೈಎಸ್‌ಪಿ ಇಲ್ಲವೇ ಪೊಲೀಸ್ ಇನ್ಸ್‌ಪೆಕ್ಟರ್ ಅವರನ್ನು ಸಂಪರ್ಕಿಸಿ ಲಿಖಿತ ದೂರು ನೀಡಬಹುದು. ಟೈಪ್ ಮಾಡಿದ ಇಲ್ಲವೇ ಕೈಯಲ್ಲೇ ದೂರು ಬರೆಯಲು ಅಡ್ಡಿ ಇಲ್ಲ. ಹೀಗೆ ಬರೆದ ದೂರುಗಳನ್ನು ರಿಜಿಸ್ಟರ್ಡ್ ಪೋಸ್ಟ್/ಕೊರಿಯರ್/ ಅಂಚೆ ಮೂಲಕ ನೀಡಿದರೂ ಪರಿಗಣಿಸಬಹುದು.
ದೂರಿನಲ್ಲಿ ಇರಬೇಕಾದ ಅಗತ್ಯ ಮಾಹಿತಿ:
ದೂರುದಾರರ ಹೆಸರು, ವಿಳಾಸ ಮತ್ತು ಸಹಿ (ಅನಕ್ಷರಸ್ಥರಾಗಿದ್ದರೆ ಹೆಬ್ಬೆಟ್ಟು ಅಗತ್ಯ). ಯಾವ ಕಾರಣದಿಂದ ದೂರು ನೀಡಲಾಗುತ್ತದೆ ಎಂಬ ವಿಷಯ ಸ್ಪಷ್ಟವಾಗಿರಬೇಕು. ಅಸ್ಪಷ್ಟ ಮಾಹಿತಿ, ಹಾರಿಕೆಯ ಅಂಶ ಇದ್ದರೆ ತನಿಖೆಗೆ ಕಷ್ಟಸಾಧ್ಯವಾಗುತ್ತದೆ.
ಅನಕ್ಷರಸ್ಥರಾಗಿದ್ದರೆ ದೂರಿನ ಕೊನೆಯಲ್ಲಿ ಸ್ವಯಂ ದೃಢೀಕರಣ ಇರಬೇಕು. ದೂರುದಾರರು ದೂರನ್ನು ಓದಿಸಿ ಅದರಲ್ಲಿ ಇರುವ ಅಂಶಗಳನ್ನು ದೂರುದಾರರಿಗೆ ಓದಿ ಹೇಳಿ ಸರಿ ಇದೆ ಎಂದು ಒಪ್ಪಿ ತಮ್ಮ ಎಡಗೈ ಹೆಬ್ಬೆಟ್ಟಿನ ನಿಶಾನೆಯನ್ನು ದೂರಿನ ಪ್ರತಿಗೆ ಒತ್ತಿರಬೇಕು. ಅಕ್ಷರಸ್ಥ ದೂರುದಾರರಾಗಿದ್ದರೆ ದೂರು ನೀಡುವಾಗ ಸಹಿ ಹಾಕಿರಬೇಕು.
ಹೀಗೆ ದೂರು ನೀಡಿದರೆ ಸ್ವೀಕರ ಮಾಡಲಾಗದು..
ಅನಾಮಧೇಯ, ಸುಳ್ಳು ವಿಳಾಸ ಇರುವ ದೂರುಗಳನ್ನು ಪರಿಗಣಿಸಲು ಸಾಧ್ಯವಿಲ್ಲ. ಆದರೆ, ಪ್ರಸ್ತಾಪಿತ ದೂರಿನ ಅಂಶಗಳನ್ನು ಪರಿಶೀಲಿಸಿ ನಿಖರ ಅಂಶ ಯಾ ಮಾಹಿತಿ ಇದ್ದರೆ ಅಂತಹ ದೂರುಗಳನ್ನು ತನಿಖೆಗೆ ಪರಿಗಣಿಸಬಹುದು.
ಭ್ರಷ್ಟಾಚಾರದಿಂದ ಸಂಕಷ್ಟಕ್ಕೆ ಒಳಗಾದವರು ಈ ಕೆಳಗಿನ ನಂಬರನ್ನು ಸಂಪರ್ಕಿಸಬಹುದು.
ದೂರವಾಣಿ ಸಂಖ್ಯೆ: 1064, 08022342100
9480806300
Dakshina Kannada:
Phone: 08242483000
9480806207 (SP)
9480806231 (DySP)
9480806291 (Police Inspector-1)
9480806292 (Police Inspector-2)
Email: dspkd.acb@karnataka.gov.in