FiR against media firm- ಅತಿಕ್ರಮ ಪ್ರವೇಶ, ದೃಶ್ಯ ಚಿತ್ರೀಕರಣ: ಯೂಟ್ಯೂಬ್ ಚಾನೆಲ್ ವಿರುದ್ಧ ಹೈಕೋರ್ಟ್ ಆಡಳಿತ ದೂರು
ಅತಿಕ್ರಮ ಪ್ರವೇಶ, ದೃಶ್ಯ ಚಿತ್ರೀಕರಣ: ಯೂಟ್ಯೂಬ್ ಚಾನೆಲ್ ವಿರುದ್ಧ ಹೈಕೋರ್ಟ್ ಆಡಳಿತ ದೂರು
ಹೈಕೋರ್ಟ್ ಅತಿಕ್ರಮ ಪ್ರವೇಶ
ಅನುಮತಿ ಇಲ್ಲದೆ ದೃಶ್ಯ ಚಿತ್ರೀಕರಣ
'ಸಂವಾದ' ಸಂಸ್ಥೆಯಿಂದ ಆಕ್ಷೇಪಾರ್ಹ ಸುದ್ದಿ ಪ್ರಸಾರ
ಹೈಕೋರ್ಟ್ ನಿಂದ ದೂರು ದಾಖಲು
ವಿಧಾನ ಸೌಧ ಪೊಲೀಸ್ ಠಾಣೆಯಲ್ಲಿ ತನಿಖೆ ಆರಂಭ
ರಾಜ್ಯದ ಮಾನ್ಯ ಕರ್ನಾಟಕ ಹೈಕೋರ್ಟ್ ಕೊಠಡಿ ಒಳಗೆ ಪ್ರವೇಶ ಮಾಡಿ ದೃಶ್ಯ ಚಿತ್ರೀಕರಿಸಿದ ಹಾಗೂ ಎರಡು ಸಮುದಾಯಗಳ ನಡುವೆ ದ್ವೇಷ ಹರಡುವ ವಿಡಿಯೊ ಪ್ರಸಾರ ಮಾಡಿದ ಸಂವಾದ ಸಂಸ್ಥೆ ವಿರುದ್ಧ ಹೈಕೋರ್ಟ್ ರಿಜಿಸ್ಟ್ರಾರ್ ದೂರು ದಾಖಲಿಸಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್‌ನ ಆಡಳಿತ ವಿಭಾಗದ ಉಸ್ತುವಾರಿ ರಿಜಿಸ್ಟ್ರಾರ್ ನೀಡಿದ ದೂರಿನ ಮೇರೆಗೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ಮಾನ್ಯ ಕರ್ನಾಟಕ ಹೈಕೋರ್ಟ್ ನಿಂದ ಯಾವುದೇ ಅನುಮತಿ ಪಡೆಯದೇ ಹೈಕೋರ್ಟ್ ಆವರಣದಲ್ಲಿ ಅತಿಕ್ರಮ ಪ್ರವೇಶ ಮಾಡಿದ್ದಲ್ಲದೆ, ವಿಡಿಯೊ ಚಿತ್ರೀಕರಣ ಮಾಡಿರುವ ಸಂವಾದ ಎಂಬ ಮಾಧ್ಯಮ ಸಂಸ್ಥೆ ಇಕ್ಕಟ್ಟಿಗೆ ಸಿಲುಕಿದೆ. ಸಂವಾದ ಎಂಬ ಸಂಸ್ಥೆ ತನ್ನ ಫೇಸ್‌ಬುಕ್ ಮತ್ತು 'ಯೂಟ್ಯೂಬ್' ಚಾನೆಲ್‌ನಲ್ಲಿ “ಕರ್ನಾಟಕ ಹೈಕೋರ್ಟ್‌ನಲ್ಲಿ ನಮಾಜ್! 2022” ಎಂಬ ತಲೆಬರಹದಡಿಯಲ್ಲಿ ಈ ವೀಡಿಯೋ ಪ್ರಸಾರ ಮಾಡಿದೆ.
ವಿವಾದಾತ್ಮಕ ಈ ವಿಡಿಯೊ ವೈರಲ್ ಆಗಿದ್ದು, ಎರಡು ಸಮುದಾಯಗಳ ನಡುವೆ ದ್ವೇಷ ಹರಡುವ ವಿಡಿಯೊ ಪ್ರಸಾರ ಮಾಡಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಹೈಕೋರ್ಟ್‌ನ ಉಸ್ತುವಾರಿ ರಿಜಿಸ್ಟ್ರಾರ್ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು FIR ದಾಖಲಿಸಿದ್ದಾರೆ.
ರಾಜ್ಯ ಹೈಕೋರ್ಟ್‌ನ ಉಸ್ತುವಾರಿ ರಿಜಿಸ್ಟ್ರಾರ್ ಎನ್. ಜಿ. ದಿನೇಶ್ ತಮ್ಮ ಸಿಬ್ಬಂದಿ ಮೂಲಕ ಕಳುಹಿಸಿದ ದೂರು ಆಧರಿಸಿ ವಿಧಾನಸೌಧ ಪೊಲೀಸರು IPC ಸೆಕ್ಷನ್ 447 (ಕ್ರಿಮಿನಲ್ ಅತಿಕ್ರಮ ಪ್ರವೇಶ) ಮತ್ತು 505 (2)ರ (ಸಾರ್ವಜನಿಕ ಕಿಡಿಗೇಡಿತನಕ್ಕೆ ಕಾರಣವಾಗುವುದು) ಅಡಿ ಅನಾಮಧೇಯರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಘಟನೆ ವಿವರ:
'ಸಂವಾದ' ಮಾಧ್ಯಮ ಸಂಸ್ಥೆಯು ತನ್ನ ಫೇಸ್‌ಬುಕ್ ಮತ್ತು ಯೂಟ್ಯೂಬ್ ಚಾನೆಲ್‌ನಲ್ಲಿ 2022ರ ಮೇ 14ರಂದು “ಕರ್ನಾಟಕ ಹೈಕೋರ್ಟ್‌ನಲ್ಲಿ ನಮಾಜ್! 2022” ಎಂಬ ತಲೆಬರಹದಡಿ ವಿಡಿಯೊ ಒಂದನ್ನು ಅಪ್‌ಲೋಡ್ ಮಾಡಿತ್ತು. ಇದು ವೈರಲ್ ಆಗಿದೆ. ಈ ವಿಡಿಯೊ ಪರಿಶೀಲಿಸಲಾಗಿ ಇದು ಮಾನ್ಯ ಹೈಕೋರ್ಟ್‌ನ ಆವರಣದಲ್ಲಿ ವಿಡಿಯೊ ಚಿತ್ರೀಕರಿಸಿ ಅದನ್ನು ಸಂವಾದದ ಫೇಸ್‌ಬುಕ್, ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರ ಮಾಡಿರುವುದು ಗೊತ್ತಾಗಿದೆ.
ಹೈಕೋರ್ಟ್ ಆವರಣಕ್ಕೆ ಅನುಮತಿ ಇಲ್ಲದೇ ಪ್ರವೇಶ ಮಾಡಿರುವುದು ಮತ್ತು ದೃಶ್ಯ ಚಿತ್ರೀಕರಣ ಮಾಡುವುದನ್ನು ನಿಷೇಧಿಸಲಾಗಿದೆ. ನ್ಯಾಯಾಲಯಕ್ಕೆ ಅತಿಕ್ರಮ ಪ್ರವೇಶ ಮಾಡಿ, ಪೂರ್ವಾನುಮತಿ ಪಡೆಯದೇ ವಿಡಿಯೊ ಚಿತ್ರೀಕರಣ ಮಾಡಿ, ಅದನ್ನು ಫೇಸ್‌ಬುಕ್ ಮತ್ತು ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿ 2 ವರ್ಗಗಳ ನಡುವೆ ದ್ವೇಷ ಉಂಟು ಮಾಡುವ ವಿಡಿಯೊ ಪ್ರಸಾರ ಮಾಡಿರುವವರನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳುವಂತೆ ಹೈಕೋರ್ಟ್‌ನ ಆಡಳಿತ ವಿಭಾಗದ ಉಸ್ತುವಾರಿ ರಿಜಿಸ್ಟ್ರಾರ್ ಎನ್ ಜಿ ದಿನೇಶ್ ತನ್ನ ದೂರಿನಲ್ಲಿ ಆಗ್ರಹಿಸಿದ್ದಾರೆ.