ಪತಿಯ ಆದಾಯದ ವಿವರ ಕೇಳುವುದು ಗೌಪ್ಯತೆಯ ಉಲ್ಲಂಘನೆ ಅಲ್ಲ: ಜೀವನಾಂಶ ಪ್ರಕರಣದಲ್ಲಿ ಮಧ್ಯಪ್ರದೇಶ ಹೈಕೋರ್ಟ್ ತೀರ್ಪು
ಪತಿಯ ಆದಾಯದ ವಿವರ ಕೇಳುವುದು ಗೌಪ್ಯತೆಯ ಉಲ್ಲಂಘನೆ ಅಲ್ಲ: ಜೀವನಾಂಶ ಪ್ರಕರಣದಲ್ಲಿ ಮಧ್ಯಪ್ರದೇಶ ಹೈಕೋರ್ಟ್ ತೀರ್ಪು
'ಜೀವನಾಂಶ' ಕುರಿತ ಪ್ರಕರಣದ ವಿಚಾರಣೆ ವೇಳೆ ಆರ್ಥಿಕ ಸಬಲತೆಯನ್ನು ನಿರ್ಧರಿಸುವ ಸಂದರ್ಭದಲ್ಲಿ ಪತಿಯನ್ನು ಆತನ ಸಂಬಳದ ವಿವರ ಹಾಜರುಪಡಿಸುವಂತೆ ಸೂಚಿಸುವುದು ಸಂವಿಧಾನದ 21ನೇ ವಿಧಿಯಡಿ ಗೌಪ್ಯತೆಯ ಹಕ್ಕಿನ ಉಲ್ಲಂಘನೆ ಅಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್ ತೀರ್ಪು ನೀಡಿದೆ.
ಪ್ರಕರಣ: ರಾಶಿ ಗುಪ್ತಾ ಮತ್ತಿತರರು Vs ಗೌರವ್ ಗುಪ್ತಾ
ಮಧ್ಯಪ್ರದೇಶ ಹೈಕೋರ್ಟ್ (CRR No. 3519/2018) Dated 29/04/2022
"ಪತಿಯಿಂದ ಪತ್ನಿಗೆ ಸಿಗಬೇಕಾದ ಜೀವನಾಂಶ ನಿರ್ಧರಿಸುವ ಪ್ರಕರಣದಲ್ಲಿ ಪರಿಣಾಮಕಾರಿ ತೀರ್ಪು ನೀಡುವುದಕ್ಕಾಗಿ ಪತಿಯ ಆದಾಯದ ದಾಖಲೆ ಸಲ್ಲಿಸುವಂತೆ ಪತಿಗೆ ಕೇಳಿಕೊಳ್ಳುವುದು ಆತನ ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯ ಕಸಿದಂತೆ ಎನ್ನಲಾಗದು" ಎಂದು ನ್ಯಾಯಪೀಠ ಹೇಳಿದೆ.
ಪ್ರತಿವಾದಿ ಪರ ವಾದ ಮಂಡಿಸಿದ್ದ ವಕೀಲರು, ಪತಿಯ ವೇತನದ ವಿವರ ಕೇಳುವುದು ಸಂವಿಧಾನದ 21ನೇ ವಿಧಿಯಡಿ ಒದಗಿಸಲಾದ ಮೂಲಭೂತ ಹಕ್ಕಿನ ಉಲ್ಲಂಘನೆ. ಸಂವಿಧಾನದ 20ನೇ ವಿಧಿಯಡಿ ತನ್ನ ವಿರುದ್ಧ ತಾನೇ ಸಾಕ್ಷ್ಯಗಳನ್ನು ಒದಗಿಸುವಂತೆ ಯಾರನ್ನೂ ಕೇಳುವಂತಿಲ್ಲ ಎಂದು ವಾದಿಸಿದ್ದರು.
ಆದರೆ, ಸಂವಿಧಾನದ 20ನೇ ವಿಧಿಯು ಇಲ್ಲಿ ಅನ್ವಯಿಸುವುದಿಲ್ಲ. ಏಕೆಂದರೆ, ಪ್ರತಿವಾದಿ ಗೌರವ್ ಇಲ್ಲಿ ಆರೋಪಿಯಲ್ಲ ಎಂದು ನ್ಯಾಯಪೀಠ ಪ್ರತಿವಾದಿಯ ಆ ಮನವಿಯನ್ನು ತಿರಸ್ಕರಿಸಿತು.
ಸಂಬಳದ ಮಾಹಿತಿ ಕೇಳುವುದು ಗೌಪ್ಯತೆಯ ಉಲ್ಲಂಘನೆಯಲ್ಲ. ಅದೇ ರೀತಿ, ಕೇಳಿದ ಮಾಹಿತಿ ನೀಡದಿರುವುದು ಪ್ರತಿಕೂಲ ಕ್ರಮಕ್ಕೆ ಕಾರಣವಾಗುತ್ತದೆ ಎಂದು ನ್ಯಾಯಪೀಠ ಎಚ್ಚರಿಸಿತು.