ಜೂನ್ 25ರಂದು ರಾಜ್ಯದಲ್ಲಿ ಮೆಗಾ ಲೋಕ ಅದಾಲತ್: ವ್ಯಾಜ್ಯ ಪರಿಹಾರಗಳ ತಕ್ಷಣ ಪರಿಹಾರಕ್ಕೆ ಅವಕಾಶ
ಜೂನ್ 25ರಂದು ರಾಜ್ಯದಲ್ಲಿ ಮೆಗಾ ಲೋಕ ಅದಾಲತ್: ವ್ಯಾಜ್ಯ ಪರಿಹಾರಗಳ ತಕ್ಷಣ ಪರಿಹಾರಕ್ಕೆ ಅವಕಾಶ
ಮುಂಬರುವ ಜೂನ್ 25ರಂದು ರಾಷ್ಟ್ರೀಯ ಲೋಕ್ ಅದಾಲತ್ ಆಯೋಜಿಸಲಾಗಿದ್ದು, ಅದರ ಅಂಗವಾಗಿ ರಾಜ್ಯದಲ್ಲೂ ಎಲ್ಲ ನ್ಯಾಯಾಲಯಗಳಲ್ಲಿ ಲೋಕ ಅದಾಲತ್ ನಡೆಯಲಿದೆ.
ನಾಗರೀಕರು ತಮ್ಮ ವ್ಯಾಜ್ಯ ಪೂರ್ವ ಹಾಗೂ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ತಕ್ಷಣ ಪರಿಹಾರ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
-ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ(SLSA)ದ ವತಿಯಿಂದ ಜೂನ್ 25ರಂದು ಸಾರ್ವಜನಿಕರು ತಮ್ಮ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಕರ್ನಾಟಕ ರಾಜ್ಯದ ಎಲ್ಲಾ ನ್ಯಾಯಾಲಯಗಳಲ್ಲಿ ಮೆಗಾ ಲೋಕ್ ಅದಾಲತ್ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಉಭಯ ಪಕ್ಷಕಾರರು ರಾಜಿ ಮಾಡಿಕೊಳ್ಳಲು ಸೂಕ್ತ ಮಾರ್ಗದರ್ಶನ ನೀಡಲಾಗುವುದು.
ಉಭಯ ಪಕ್ಷಕಾರರು ಅಥವಾ ವ್ಯಾಜ್ಯದ ಪಾರ್ಟಿಗಳು ಪರಸ್ಪರ ಎರಡೂ ಕಡೆಯವರಿಗೆ ಒಪ್ಪಿಗೆಯಾಗುವಂತಹ ಪ್ರಕರಣಗಳು ತೀರ್ಮಾನ ವಾಗುವುದರಿಂದ ಬಾಂಧವ್ಯಗಳು ಉಳಿದು ವಿವಾದವು ತೀರ್ಮಾನವಾಗುತ್ತದೆ, ನ್ಯಾಯಾಲಯದಲ್ಲಿ ದಾಖಲಾಗದೆ ಇರುವ ಪ್ರಕರಣಗಳನ್ನು ಸಹ ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಇದರಲ್ಲಿ ಅವಕಾಶ ಕಲ್ಪಿಸಲಾಗಿದೆ.
ಹೀಗೆ, ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಂಡಲ್ಲಿ ನ್ಯಾಯಾಲಯಕ್ಕೆ ಪಾವತಿಸಲಾದ ಶುಲ್ಕವನ್ನು ಮರುಪಾವತಿಸಲಾಗುವುದು. ಪ್ರಾಧಿಕಾರದ ಅಧಿಕಾರಿಗಳು ಮತ್ತು ಸಂಧಾನಕಾರರು ಸೂಚಿಸುವ ಪರಿಹಾರವನ್ನು ಯಾವುದೇ ಒತ್ತಡವಿಲ್ಲದೆ ಎರಡೂ ಪಕ್ಷಕಾರರಿಗೆ ಒಪ್ಪಿಗೆಯಾದರೆ ಮಾತ್ರ ರಾಜಿ ಮಾಡಹುದಾಗಿದೆ. ಕಡಿಮೆ ಖರ್ಚಿನಲ್ಲಿ ಶೀಘ್ರ ತೀರ್ಮಾನಕ್ಕಾಗಿ ಅವಕಾಶವನ್ನು ಕಲ್ಪಿಸಿ ಕೊಡಲಾಗಿದೆ.
ಲೋಕ್ ಅದಾಲತ್ ನಲ್ಲಿ ರಾಜಿ ಸಂಧಾನದ ಮೂಲಕ ಕೆಲವೊಂದು ರಾಜಿಯಾಗುವ ಕ್ರಿಮಿನಲ್ ಪ್ರಕರಣಗಳು, ಬ್ಯಾಂಕ್ ವಸೂಲಾತಿ ಪ್ರಕರಣಗಳು, ಉದ್ಯೋಗದಲ್ಲಿ ಪುನರ್ ಸ್ಥಾಪಿಸಲು ಪಡುವ ಪ್ರಕರಣಗಳು, ಕೈಗಾರಿಕಾ ಕಾರ್ಮಿಕರ ವೇತನಕ್ಕೆ ಸಂಬಂಧಿಸಿದ ಕ್ಲೇಮುಗಳು, ಜಿಲ್ಲಾ ಗ್ರಾಹಕರ ವೇದಿಕೆಯಲ್ಲಿನ ಪ್ರಕರಣಗಳು, ರೇರಾ (ಕರ್ನಾಟಕ ರಿಯಲ್ ಎಸ್ಟೇಟ್ ಪ್ರಾಧಿಕಾರ) ಇವುಗಳಿಗೆ ಸಂಬಂಧಿಸಿದ ವ್ಯಾಜ್ಯಗಳು, ಪ್ರಕರಣಗಳು, ಡೆಟ್ ರಿಕವರಿ ಟ್ರಿಬ್ಯೂನಲ್ ಕೇಸುಗಳು, ಪರ್ಮನೆಂಟ್ ಜನತಾ ಅದಾಲತ್ ನಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳು, ಚೆಕ್ ಅಮಾನ್ಯ ಪ್ರಕರಣಗಳು, ಮೋಟಾರು ಅಪಘಾತ ಕ್ಲೇಮು ಟ್ರಿಬ್ಯೂನಲ್ ಪ್ರಕರಣಗಳು, ಕಾರ್ಮಿಕ ವಿವಾದಗಳು, ವಿದ್ಯುತ್ ಶುಲ್ಕಗಳು, ಲ್ಯಾಂಡ್ ಎಕ್ಷಿಷಿಶನ್ (ಭೂ ಸ್ವಾಧೀನ) ತಗಾದೆಗಳು, ವೇತನ ಹಾಗೂ ಭತ್ಯೆಗಳಿಗೆ ಸಂಬಂಧಿಸಿದ ಸೇವಾ ಹಾಗೂ ಪಿಂಚಣಿ ಪ್ರಕರಣಗಳು, ಸಾರ್ವಜನಿಕ ಉಪಯುಕ್ತತೆ ಸೇವೆಗಳ ಸಂಬಂಧಿಸಿದ ಪ್ರಕರಣಗಳು, ರಾಜಿಯಾಗಬಹುದಾದ ಸಿವಿಲ್ ಹಾಗೂ ಇತರೆ ಪ್ರಕರಣಗಳು, ವಿಚ್ಛೇದನ ಹೊರತುಪಡಿಸಿದಂತೆ ಕೌಟುಂಬಿಕ ಹಾಗೂ ವೈವಾಹಿಕ ನ್ಯಾಯಾಲಯದ ಪ್ರಕರಣಗಳನ್ನು ಲೋಕ್ ಅದಾಲತ್ ನಲ್ಲಿ ರಾಜಿ ಮೂಲಕ ಇತ್ಯರ್ಥ ಪಡಿಸಿ ಕೊಳ್ಳಬಹುದಾಗಿದೆ.