ಲೈಂಗಿಕ ಕಿರುಕುಳ ಪ್ರಕರಣ: ಆಂತರಿಕ ಸಮಿತಿ ವರದಿ ಆಧರಿಸಿ ಆರೋಪಿ ನೌಕರನ ವಿರುದ್ದ ಕ್ರಮ ತರವಲ್ಲ: ಹೈಕೋರ್ಟ್
ಲೈಂಗಿಕ ಕಿರುಕುಳ ಪ್ರಕರಣ: ಆಂತರಿಕ ಸಮಿತಿ ವರದಿ ಆಧರಿಸಿ ಆರೋಪಿ ನೌಕರನ ವಿರುದ್ದ ಕ್ರಮ ತರವಲ್ಲ: ಹೈಕೋರ್ಟ್
ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಇಲಾಖಾ ವಿಚಾರಣೆ ನಡೆಸದೆ ಆಂತರಿಕ ಸಮಿತಿಯು ನೀಡಿದ ವರದಿಯ ಆಧಾರದಲ್ಲಿ ತಪ್ಪಿತಸ್ಥ ನೌಕರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತಿಲ್ಲ : ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು (20.7.2021)
ಇದು ಮಂಗಳೂರು ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರೊಫೆಸರ್ ವಿರುದ್ಧ ವಿದ್ಯಾರ್ಥಿನಿಯೊಬ್ಬರು ನೀಡಿದ ಲೈಂಗಿಕ ಕಿರುಕುಳದ ದೂರು ಕುರಿತು ಐತಿಹಾಸಿಕ ತೀರ್ಪು.
ಈ ಪ್ರಕರಣದ ವಿಚಾರಣೆ ನಡೆಸಿದ ವಿವಿಯ ಆಂತರಿಕ ದೂರು ಸಮಿತಿ, ತಪ್ಪಿತಸ್ಥ ಪ್ರೊಫೆಸರ್ ವಿರುದ್ಧದ ಆರೋಪಗಳು ಸಾಬೀತಾಗಿದೆ ಎಂಬ ವರದಿ ನೀಡಿತು. ಈ ಆಧಾರದಲ್ಲಿ ನಿಷ್ಕರ್ಷೆಗೆ ಬಂದ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ತಪ್ಪಿತಸ್ಥ ಪ್ರೊಫೆಸರ್ ಅವರನ್ನು ಸೇವೆಯಿಂದ ಏಕೆ ವಜಾ ಮಾಡಬಾರದು ಎಂದು ನೀಡಿದ ಎರಡನೆಯ ಕಾರಣ ಕೇಳುವ ನೋಟಿಸ್ ನೀಡಿತು.
ಈ ನೋಟೀಸ್ ಕಾನೂನಿನಡಿ ಊರ್ಜಿತವಲ್ಲ ಮತ್ತು ಸೇವಾ ನಿಯಮಾನುಸಾರ ವಿಚಾರಣೆ ನಡೆಸದೆ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಯಾವುದೇ ನೌಕರರನಿಗೆ ಸೇವೆಯಿಂದ ವಜಾ ಸಹಿತ ಯಾವುದೇ ರೀತಿಯ ದಂಡನೆ ವಿಧಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿತು.
ಡಾ। ಅರಬಿ ಯು. ವಿರುದ್ಧ ಮಂಗಳೂರು ವಿಶ್ವವಿದ್ಯಾನಿಲಯ ಈ ಪ್ರಕರಣದಲ್ಲಿ ಗೌ। ನ್ಯಾಯಮೂರ್ತಿ ಎಂ. ನಾಗ ಪ್ರಸನ್ನ ಅವರ ಏಕಸದಸ್ಯ ನ್ಯಾಯಪೀಠವು ದಿನಾಂಕ 20.7.2021 ರಂದು ಮಹತ್ವದ ತೀರ್ಪನ್ನು ನೀಡಿದೆ.
ಉದ್ಯೋಗದ ಸ್ಥಳದಲ್ಲಿ ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯ (ತಡೆ; ಪ್ರತಿಬಂಧ ಮತ್ತು ಪರಿಹಾರ) ಕಾಯಿದೆ 2013 ರ ನಿಯಮಗಳಡಿ ರಚಿಸಲ್ಪಟ್ಟ ಆಂತರಿಕ ದೂರು ಸಮಿತಿ ನೀಡಿದ ವರದಿಯು ಸತ್ಯಶೋಧನಾ ವರದಿ ಅಥವಾ ಪ್ರಾರಂಭಿಕ ವರದಿಯಾಗಿದ್ದು ಲೈಂಗಿಕ ದೌರ್ಜನ್ಯದ ಆರೋಪವನ್ನು ಎದುರಿಸುವ ನೌಕರರನ್ನು ಸದರಿ ವರದಿಯ ಆಧಾರದಲ್ಲಿ ದಂಡನೆಗೆ ಒಳಪಡಿಸುವಂತಿಲ್ಲ. ತಪ್ಪಿತಸ್ಥ ನೌಕರನ ವಿರುದ್ಧ ವಿಶ್ವವಿದ್ಯಾನಿಲಯದ ವರ್ಗೀಕರಣ ನಿಯಂತ್ರಣ ಮತ್ತು ಅಪೀಲು ನಿಯಮ ಪ್ರಕಾರ ವಿಚಾರಣೆ ನಡೆಸಿದ ಬಳಿಕ ದೋಷಾರೋಪಣೆ ಸಾಬೀತಾದಲ್ಲಿ ಶಿಕ್ಷೆಯ ಪ್ರಮಾಣವನ್ನು ನಿರ್ಧರಿಸುವುದು ಶಿಸ್ತು ಪ್ರಾಧಿಕಾರದ ಕರ್ತವ್ಯವಾಗಿದೆ ಎಂಬುದಾಗಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಉದ್ಯೋಗದ ಸ್ಥಳದಲ್ಲಿ ಪುರುಷ ಸಹೋದ್ಯೋಗಿಗಳಿಂದ ಯಾವುದೇ ರೀತಿಯ ಕಿರುಕುಳಕ್ಕೆ ಒಳಗಾಗದೆ ಗೌರವಯುತ ಪರಿಸರದಲ್ಲಿ ತಾನು ಕೆಲಸ ಮಾಡಬೇಕೆನ್ನುವುದು ಪ್ರತಿಯೊಬ್ಬ ದುಡಿಯುವ ಮಹಿಳೆಯ ಮೂಲಭೂತ ಹಕ್ಕು ಎಂಬುದಾಗಿ ಸರ್ವೋಚ್ಚ ನ್ಯಾಯಾಲಯವು *ವಿಶಾಖಾ ಮತ್ತಿತರರು ವಿರುದ್ಧ ರಾಜಸ್ಥಾನ ರಾಜ್ಯ ಮತ್ತಿತರರು* ಈ ಪ್ರಕರಣದಲ್ಲಿ ನೀಡಿದ ಮಹತ್ವದ ತೀರ್ಪಿನಲ್ಲಿ ಹೇಳಿದ್ದಲ್ಲದೆ ಲೈಂಗಿಕ ಕಿರುಕುಳಕ್ಕೆ ಒಳಗಾದ ದುಡಿಯುವ ಮಹಿಳೆಯ ರಕ್ಷಣೆಗೆ ಸೂಕ್ತ ಮಾರ್ಗದರ್ಶನ ಸೂತ್ರಗಳನ್ನು ನೀಡಿದೆ.
ಲೈಂಗಿಕ ಕಿರುಕುಳ ಎಂದರೇನು?
ಸುಪ್ರೀಂ ಕೋರ್ಟ್ ವ್ಯಾಖ್ಯಾನಿಸಿದಂತೆ ಲೈಂಗಿಕ ಕಿರುಕುಳ ಈ ಕೆಳಗೆ ಕಾಣಿಸಿದ ಸ್ವಾಗತಾರ್ಹವಲ್ಲದ ಲೈಂಗಿಕ ಸ್ವರೂಪದ ನೇರ ಅಥವಾ ಇಂಗಿತ ವರ್ತನೆಯನ್ನು ಒಳಗೊಳ್ಳುತ್ತವೆ.
1. ಅನವಶ್ಯಕ ದೈಹಿಕ ಸ್ಪರ್ಶ
2. ಲೈಂಗಿಕ ಒಲವಿಗಾಗಿ ಒತ್ತಾಯ ಅಥವಾ ಬೇಡಿಕೆ
3. ಲೈಂಗಿಕ ಛಾಯೆಯ (ಲೈಂಗಿಕ ಲೇಪದ) ಟೀಕೆಗಳು
4. ಅಶ್ಲೀಲ ವಿಷಯವನ್ನೊಳಗೊಂಡ ರಚನೆ (ಸಾಹಿತ್ಯ) ತೋರಿಸುವುದು
5. ಬೇರೆ ಯಾವುದೇ ವಿಧದ ಸ್ವಾಗತಾರ್ಹವಲ್ಲದ ಬಾಯಿಮಾತಿನ ಅಥವಾ ಬಾಯಿ ಮಾತಿನದಲ್ಲದ ಲೈಂಗಿಕ ಸ್ವರೂಪದ ನಡತೆ
ಲೈಂಗಿಕ ಕಿರುಕುಳದ ಕೆಲ ಉದಾಹರಣೆಗಳು
1. ಕೆಲಸದ ನೆಪದಲ್ಲಿ ಪುರುಷನು ಅನವಶ್ಯಕವಾಗಿ ಮತ್ತು ಉದ್ದೇಶಪೂರ್ವಕವಾಗಿ ಮಹಿಳೆಯ ದೇಹ ಸ್ಪರ್ಶ ಮಾಡುವುದು.
2. ಮಹಿಳೆಗೆ ಕಾನೂನಿನನ್ವಯ ಕೊಡಬೇಕಾದ ರಜೆ; ವೇತನ; ಬಡ್ತಿ ಮುಂತಾದವುಗಳನ್ನು ಮುಂದಿಟ್ಟು ಲೈಂಗಿಕ ಒಲವನ್ನು ತೋರಿಸುವಂತೆ ಆಕೆಯನ್ನು ಒತ್ತಾಯಿಸುವುದು ಅಥವ ಕೇಳಿಕೊಳ್ಳುವುದು.
3. ಮಹಿಳೆಯರ ವೇಷಭೂಷಣ ಮತ್ತು ಅಂಗಗಳ ಸಂಬಂಧ ಅಶ್ಲೀಲ ಅಥವಾ ಲೈಂಗಿಕ ಅರ್ಥಬರುವ ಮಾತುಗಳನ್ನಾಡುವುದು.
4. ಕೆಲಸದ ಸ್ಥಳದಲ್ಲಿ ಅಶ್ಲೀಲ ದೃಶ್ಯಾವಳಿಗಳು ಗಳನ್ನೊಳಗೊಂಡ ಚಿತ್ರವನ್ನು ಇರಿಸುವುದು.
5. ಮಹಿಳೆ ಗಮನಿಸುವಂತೆ ಅಶ್ಲೀಲಕರವಾದ ಹಾಸ್ಯ ಚಟಾಕಿ ಹಾರಿಸುವುದು ಅಥವಾ ಹಾವಭಾವಗಳನ್ನು ಪ್ರದರ್ಶಿಸುವುದು ಮುಂತಾದವು ವರ್ತನೆ ಲೈಂಗಿಕ ಕಿರುಕುಳ ವೆನಿಸುತ್ತದೆ.
2013 ರ ಕಾಯಿದೆ ಪ್ರಕಾರ ಕನಿಷ್ಠ ಹತ್ತು ಮಂದಿ ನೌಕರರು ಕೆಲಸ ನಿರ್ವಹಿಸುತ್ತಿರುವ ಸರಕಾರಿ ಅಥವಾ ಖಾಸಗಿ ಸಂಸ್ಥೆಯಲ್ಲಿ ಲೈಂಗಿಕ ದೌರ್ಜನ್ಯದ ದೂರು ವಿಚಾರಣೆಗೆ ಆಂತರಿಕ ದೂರು ಸಮಿತಿಯನ್ನು ರಚಿಸಿ ತಕ್ಕದ್ದಾಗಿದೆ. ಹತ್ತು ಮಂದಿಗಿಂತ ಕಡಿಮೆ ಸಂಖ್ಯೆಯ ನೌಕರರು ಕೆಲಸ ನಿರ್ವಹಿಸುತ್ತಿರುವ ಸಂಸ್ಥೆಯಲ್ಲಿ ಲೈಂಗಿಕ ದೌರ್ಜನ್ಯದ ದೂರುಗಳನ್ನು ಸ್ವೀಕರಿಸಲು ಪ್ರತಿ ಜಿಲ್ಲೆಯಲ್ಲಿ ಸ್ಥಳೀಯ ಸಮಿತಿಯನ್ನು ರಾಜ್ಯ ಸರಕಾರವು ರಚಿಸಿತಕ್ಕದ್ದು.
ಲೈಂಗಿಕ ದೌರ್ಜನ್ಯದ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಸೇವೆಯಿಂದ ವಜಾ ಮಾಡಬಾರದೇಕೆ ಎಂಬ ಬಗ್ಗೆ ಕಾರಣ ಕೇಳಿ ವಿಶ್ವವಿದ್ಯಾನಿಲಯವು ನೀಡಿದ ಎರಡನೇ ನೋಟಿಸನ್ನು ರದ್ದುಪಡಿಸುವಂತೆ ಕೋರಿ ಕನಾ೯ಟಕ ಹೈಕೋರ್ಟಿನಲ್ಲಿ ಡಾ। ಅರಬಿ ಯು. ಅವರು ರಿಟ್ ಅರ್ಜಿ ದಾಖಲಿಸಿದ್ದರು. ಅರ್ಜಿದಾರರ ಪರ ವಕೀಲರು ಭಾರತದ ಸುಪ್ರೀಂಕೋರ್ಟ್ ಡಾ। ವಿಜಯಕುಮಾರ್ ಸಿ. ಪಿ. ವಿ. ವಿರುದ್ಧ ಸೆಂಟ್ರಲ್ ಯೂನಿವರ್ಸಿಟಿ ಕೇರಳ ಮತ್ತಿತರರು ಹಾಗೂ ರುಚಿಕಾ ಸಿಂಗ್ ಛಾಬ್ರಾ ವಿರುದ್ಧ ಏರ್ ಫ್ರಾನ್ಸ್ ಇಂಡಿಯಾ ಮತ್ತಿತರರು ಪ್ರಕರಣಗಳಲ್ಲಿ ಸೇವಾ ನಿಯಮಾನುಸಾರ ವಿಚಾರಣೆ ನಡೆಸದೆ ಆಂತರಿಕ ದೂರು ಸಮಿತಿ ನೀಡಿದ ವರದಿಯ ಆಧಾರದಲ್ಲಿ ಶಿಸ್ತುಕ್ರಮ ಕೈಗೊಳ್ಳುವುದು ಕಾನೂನಿನಡಿ ಊರ್ಜಿತವಲ್ಲ ಎಂಬುದಾಗಿ ಮಾನ್ಯ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಉಲ್ಲೇಖಿಸಿ ರಿಟ್ ಅರ್ಜಿಯನ್ನು ಪುರಸ್ಕರಿಸುವಂತೆ ಪ್ರಾಥಿ೯ಸಿದರು.
ಪ್ರತಿವಾದಿ ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ ವಕೀಲರು ವಿಶಾಖಾ ವಿರುದ್ಧ ರಾಜಸ್ಥಾನ ರಾಜ್ಯ ಹಾಗೂ ಮೇಧಾ ಕೊತ್ವಾಲ್ ಲೀಲೆ ವಿರುದ್ಧ ಭಾರತ ಸರಕಾರ ಮತ್ತಿತರರು ಹಾಗೂ ಸೀಮಾ ಲೆಪ್ಚಾ ವಿರುದ್ಧ ಸಿಕ್ಕಿಂ ಸರಕಾರ ಈ ಪ್ರಕರಣಗಳಲ್ಲಿ ಮಾನ್ಯ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಪ್ರಕಾರ ಆಂತರಿಕ ದೂರು ಸಮಿತಿಯು ನೀಡಿದ ವರದಿಯನ್ನು ತಪ್ಪಿತಸ್ಥ ನೌಕರರ ವಿರುದ್ಧ ವಿಚಾರಣಾ ವರದಿಯಾಗಿ ಪರಿಗಣಿಸಬಹುದಾಗಿದೆ. ಆದುದರಿಂದ ವಿಶ್ವವಿದ್ಯಾನಿಲಯದ ಕ್ರಮ ನಿಯಾಮಾನುಸಾರ ಸರಿಯಾಗಿದೆ ಎಂಬ ವಾದವನ್ನು ಮಂಡಿಸಿದರು.
ಉಭಯ ಪಕ್ಷಕಾರರ ವಾದವನ್ನು ಆಲಿಸಿದ ಹೈಕೋರ್ಟ್ ಸೇವಾ ನಿಯಮಗಳು ಅನ್ವಯವಾಗದ ಪ್ರಕರಣಗಳಲ್ಲಿ ಆಂತರಿಕ ದೂರು ಸಮಿತಿಯ/ಸ್ಥಳೀಯ ಸಮಿತಿಯ ವರದಿಯನ್ನು ವಿಚಾರಣಾ ವರದಿಯನ್ನಾಗಿ ಪರಿಗಣಿಸಬಹುದು. ಆದರೆ ಸೇವಾ ನಿಯಮಗಳು ಅನ್ವಯ ವಾಗುವ ಪ್ರಕರಣಗಳಲ್ಲಿ ನಿಯಮಾನುಸಾರ ವಿಚಾರಣೆ ನಡೆಸದೆ ದಂಡನೆ ವಿಧಿಸುವ ಕ್ರಮ ಕಾನೂನುಬಾಹಿರವಾಗಿದೆ. ಆದುದರಿಂದ ಹೈಕೋರ್ಟ್ ರಿಟ್ ಅರ್ಜಿಯನ್ನು ಪುರಸ್ಕರಿಸಿ ಸೇವೆಯಿ೦ದ ವಜಾಗೊಳಿಸುವ ದಂಡನೆ ಏಕೆ ವಿಧಿಸಬಾರದು ಎನ್ನುವ ಎರಡನೇ ಕಾರಣ ಕೇಳುವ ನೋಟಿಸನ್ನು ರದ್ದುಪಡಿಸಿ ನಿಯಮಾನುಸಾರ ವಿಚಾರಣೆ ನಡೆಸಿ ಎರಡು ತಿಂಗಳೊಳಗೆ ಪ್ರಕರಣವನ್ನು ಇತ್ಯರ್ಥಪಡಿಸುವಂತೆ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ನಿರ್ದೇಶನ ನೀಡಿತು.
✍ ಪ್ರಕಾಶ್ ನಾಯಕ್, ಶಿರಸ್ತೇದಾರರು, ಜುಡೀಶಿಯಲ್ ಸೆಂಟರ್, ಮಂಗಳೂರು ನ್ಯಾಯಾಲಯ ಸಂಕೀರ್ಣ