permission needed to proceed against advocate notary- ವಕೀಲರು, ನೋಟರಿ ವಿರುದ್ಧ ವಿಚಾರಣೆಗೆ ಸರ್ಕಾರದ ಅನುಮತಿ ಅಗತ್ಯ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
ವಕೀಲರು, ನೋಟರಿ ವಿರುದ್ಧ ವಿಚಾರಣೆಗೆ ಸರ್ಕಾರದ ಅನುಮತಿ ಅಗತ್ಯ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
ಯಾವುದೇ ಲೋಪದೋಷಕ್ಕಾಗಿ ವಕೀಲರು ಅಥವಾ ನೋಟರಿ ವಿರುದ್ಧ ಪ್ರಕರಣಗಳು ದಾಖಲಾಗಿದ್ದರೆ ಅವರನ್ನು ವಿಚಾರಣೆಗೆ ಒಳಪಡಿಸಲು ರಾಜ್ಯ ಅಥವಾ ಕೇಂದ್ರ ಸರ್ಕಾರದ ಅನುಮತಿ ಅಗತ್ಯ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
ಮಂಗಳೂರಿನ ಪ್ರವೀಣ್ ಕುಮಾರ್ ಅದ್ಯಪಾಡಿ ಮತ್ತು ಈಶ್ವರ ಪೂಜಾರಿ ಎಂಬ ಇಬ್ಬರು ನೋಟರಿಗಳ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸಿ ಕರ್ನಾಟಕ ಹೈಕೋರ್ಟ್ ಈ ಮಹತ್ವದ ತೀರ್ಪು ನೀಡಿದೆ.
ಪ್ರಕರಣ: ಪ್ರವೀಣ್ ಕುಮಾರ್ ಅದ್ಯಪಾಡಿ ಮತ್ತೊಬ್ಬರು Vs ಕರ್ನಾಟಕ ಸರ್ಕಾರ
ಕರ್ನಾಟಕ ಹೈಕೋರ್ಟ್, Crl Petition: 888/2018 dated 11-04-2022
ಪೋಕ್ಸೊ ಪ್ರಕರಣವೊಂದರ ಆರೋಪಿಗೆ ಸಹಾಯ ಮಾಡುವ ಉದ್ದೇಶದಿಂದ ಸಂತ್ರಸ್ತೆಯ ವಯಸ್ಸನ್ನು ಕುಶಲತೆಯಿಂದ ತಿದ್ದಿದ ಮತ್ತು ಅದರ ಆಧಾರದಲ್ಲಿ ಪ್ರಮಾಣ ಪತ್ರದ ಮೂಲಕ ವಯಸ್ಸು ಘೋಷಿಸಿಕೊಂಡ ಮಹತ್ವದ ದಾಖಲೆಯನ್ನು ನೋಟರಿ ವಕೀಲರು ಮಾಡಿದ್ದರು ಎಂದು ಆರೋಪಿಸಲಾಗಿತ್ತು.
ಪೋಕ್ಸೋ ಪ್ರಕರಣದ ಪ್ರಮುಖ ಆರೋಪಿಯು ಎರಡರಿಂದ ಏಳನೇ ಆರೋಪಿಗಳ ಜೊತೆ ಸೇರಿ ಸಂತ್ರಸ್ತೆಯ ವಯಸ್ಸನ್ನು 25-9-1999ರ ಬದಲಿಗೆ 25-9-2000 ಎಂದು ಬದಲಿಸಿದ್ದರು. ಈ ದಾಖಲೆಯನ್ನು ಪ್ರಕರಣದ ಎಂಟನೇ ಆರೋಪಿಯಾದ ನೋಟರಿ ವಕೀಲರು ತಯಾರಿಸಿದ್ದರು. ಮತ್ತು ಅದರ ಆಧಾರದಲ್ಲಿ ಹತ್ತನೇ ಆರೋಪಿಯು ಘೋಷಣಾ ಅಫಿಡವಿಟ್ ತಯಾರಿಸಿದ್ದರು.
ಆ ಬಳಿಕ ಮೊದಲನೇ ಆರೋಪಿಯು ಸಂತ್ರಸ್ತೆಯನ್ನು ಮಂಗಳೂರಿನ ಅರ್ಯ ಸಮಾಜದಲ್ಲಿ ಮದುವೆಯಾಗಿದ್ದರು. ಆರೋಪ ಪಟ್ಟಿ ಸಲ್ಲಿಕೆಯ ಮೊದಲೇ ಆರೋಪಿಗಳಾದ ನೋಟರಿ ವಕೀಲರು ತಮ್ಮ ಅಧಿಕಾರವನ್ನು ಬಳಸಿ ವಯಸ್ಸಿನ ವ್ಯತ್ಯಾಸವನ್ನು ಮಾಡಿದ್ದರು ಎಂದು ಆರೋಪಿಸಲಾಗಿತ್ತು.
ಆದರೆ, ಆರೋಪಿ ಪರ ವಾದ ಮಂಡಿಸಿದ ವಕೀಲರು, ನೋಟರಿ ಕಾಯ್ದೆ- 1952 ಸೆಕ್ಷನ್ 13ರ ಪ್ರಕಾರ ಆರೋಪಿಗಳ ವಿರುದ್ಧ FIR ದಾಖಲಿಸಿದ್ದು ತಪ್ಪು ಎಂದು ಅಭಿಪ್ರಾಯಪಟ್ಟರು.
ಅಫಿಡವಿಟ್ ದಾಖಲೆಗೆ ಸಹಿ ಹಾಕಿದ್ದಕ್ಕಾಗಿ ನೋಟರಿಗಳ ವಿರುದ್ಧ ಐಪಿಸಿ, ಪೋಕ್ಸೊ ಕಾಯಿದೆ ಮತ್ತು ಬಾಲ್ಯ ವಿವಾಹ ತಡೆ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಮಹಿಳಾ ಪೊಲೀಸ್ ಠಾಣೆಯಿಂದ ಆರೋಪ ಹೊರಿಸಲಾಗಿತ್ತು.
ನೋಟರಿ ಕಾಯ್ದೆಯ ಸೆಕ್ಷನ್ 13 ರ ಪ್ರಕಾರ, ವಕೀಲರು ಮತ್ತು ನೋಟರಿ ಮಾಡಿದ ಅಪರಾಧಗಳಿಗೆ ಕಾಗ್ನಿಸೆನ್ಸ್ ತೆಗೆದುಕೊಳ್ಳುವುದಕ್ಕೆ ನಿರ್ಬಂಧವಿದೆ. ನೋಟರಿ ಕಾಯ್ದೆಯಡಿ ತನಿಖಾಧಿಕಾರಿ ಕೇಂದ್ರ ಯಾ ರಾಜ್ಯ ಸರ್ಕಾರದ ಅನುಮತಿ ಪಡೆದ ನಂತರವೇ ವಕೀಲರ ವಿರುದ್ಧ ಕ್ರಮ ಜರುಗಿಸಬೇಕು. ಈ ಪ್ರಕರಣದಲ್ಲಿ ಪೊಲೀಸರು ಈ ಕ್ರಮವನ್ನು ಅನುಸರಿಸಿಲ್ಲ. ಹಾಗಾಗಿ, ನೋಟರಿ ವಕೀಲರ ವಿರುದ್ಧದ FIR ರದ್ದುಪಡಿಸವುಂತೆ ಕರ್ನಾಟಕ ಹೈಕೋರ್ಟ್ ಆದೇಶ ನೀಡಿತು.
Read Judgement;