Success Story of a Civil Judge- ತರಕಾರಿ ವ್ಯಾಪಾರಿ ಮಗಳು ಈಗ ಸಿವಿಲ್ ನ್ಯಾಯಾಧೀಶೆ !
ತರಕಾರಿ ವ್ಯಾಪಾರಿ ಮಗಳು ಈಗ ಸಿವಿಲ್ ನ್ಯಾಯಾಧೀಶೆ !
ತರಕಾರಿ ವ್ಯಾಪಾರಿ ಮಗಳು ಈಗ ಸಿವಿಲ್ ನ್ಯಾಯಾಧೀಶರಾಗಿ ಅಧಿಕಾರ ಸ್ವೀಕರಿಸುವ ಮೂಲಕ ಹೆತ್ತವರಿಗೆ ಹೆಮ್ಮೆ ತಂದಿದ್ದಾರೆ.
ಮಧ್ಯಪ್ರದೇಶದ ಇಂದೋರ್‌ನ ತರಕಾರಿ ಮಾರಾಟಗಾರರೊಬ್ಬರ ಮಗಳು 29 ವರ್ಷದ ಅಂಕಿತಾ ನಾಗರ್ ಜಡ್ಜ್ ಆಗಿ ನೇಮಕಗೊಂಡವರು. ಇವರು ಸಿವಿಲ್ ನ್ಯಾಯಾಧೀಶರ ನೇಮಕಾತಿ ಪರೀಕ್ಷೆಯಲ್ಲಿ ಮೂರು ಬಾರಿ ವಿಫಲವಾಗಿದ್ದರು. ಆದರೂ ಧೃತಿಗೆಡದೆ ನ್ಯಾಯಾಧೀಶರಾಗುವ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದಾರೆ.
"ನ್ಯಾಯಾಧೀಶರ ನೇಮಕಾತಿ ಪರೀಕ್ಷೆಯಲ್ಲಿ ನಾನು ನನ್ನ 4ನೇ ಪ್ರಯತ್ನದಲ್ಲಿ ಸಿವಿಲ್ ನ್ಯಾಯಾಧೀಶರ ಕ್ಲಾಸ್-II ಎಕ್ಸಾಂ ಪಾಸ್ ಆಗಿದ್ದೇನೆ. ನನಗೆ ಅತೀವ ಖುಷಿಯಾಗಿದೆ. ಈ ಸಂಭ್ರಮವನ್ನು ವ್ಯಕ್ತಪಡಿಸಲು ನನ್ನ ಬಳಿ ಪದಗಳೇ ಇಲ್ಲ" ಎಂದು ಅಂಕಿತಾ ಹರ್ಷಗೊಂಡಿದ್ದಾರೆ.
ಅಂಕಿತಾ ತಂದೆ ಅಶೋಕ್ ನಗರ್ ಮುಸಖೇಡಿ ಪ್ರದೇಶದಲ್ಲಿ ತರಕಾರಿ ಮಾರಾಟಗಾರರಾಗಿದ್ದಾರೆ. ಅಂಕಿತಾ ತನ್ನ ಪರೀಕ್ಷೆಗೆ ಸಿದ್ಧತೆಗಳನ್ನು ಪೂರ್ಣಗೊಳಿಸಿದ ನಂತರ, ತಂದೆಯ ಕೆಲಸದಲ್ಲಿ ಸಹಾಯ ಮಾಡುತ್ತಿದ್ದರಂತೆ.
ಅಂಕಿತಾ ತನ್ನ ಸ್ನಾತಕೋತ್ತರ ಪದವಿ (LLM) ಪೂರ್ಣಗೊಳಿಸಿದ ಬಾಲ್ಯದ ಕನಸಾದ ನ್ಯಾಯಾಧೀಶರಾಗಲು ನಿರ್ಧರಿಸಿದ್ದರು. ಇದಕ್ಕೆ ಸಾಕಷ್ಟು ಪೂರ್ವತಯಾರಿ ನಡೆಸಿದರು. 3 ಬಾರಿ ನಡೆಸಿದ ಪ್ರಯತ್ನಗಳು ವಿಫಲವಾದರೂ ಹಿಂಜರಿಯಲಿಲ್ಲ.
"ನನ್ನ ಗುರಿಯನ್ನು ಸಾಧಿಸುವತ್ತ ಗಮನಹರಿಸಿದ್ದೆ. ಈ ಹೋರಾಟ ನನಗೆ ಬಾಗಿಲು ತೆರೆಯಿತು ಮತ್ತು ನಾನು ಮುಂದೆ ಸಾಗುತ್ತಿದ್ದೇನೆ" ಎಂದು ಸಿವಿಲ್ ನ್ಯಾಯಾಧೀಶರಾಗಿರುವ ಅಂಕಿತಾ ಹೇಳಿದ್ದಾರೆ.