ಕಲೆಕ್ಷನ್ ಸೆಂಟರ್‌ಗಳಾದ ಭ್ರಷ್ಟಾಚಾರ ನಿಗ್ರಹ ದಳದ ಕಚೇರಿಗಳು: ಹೈಕೋರ್ಟ್ ಕೆಂಡಾಮಂಡಲ
ಕಲೆಕ್ಷನ್ ಸೆಂಟರ್‌ಗಳಾದ ಭ್ರಷ್ಟಾಚಾರ ನಿಗ್ರಹ ದಳದ ಕಚೇರಿಗಳು: ಹೈಕೋರ್ಟ್ ಕೆಂಡಾಮಂಡಲ
ರಾಜ್ಯದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ (ACB) ಕಚೇರಿಗಳು ಕಲೆಕ್ಷನ್ ಸೆಂಟರ್‌ಗಳಾಗಿವೆ. ಸ್ವತಃ ಎಸಿಬಿ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರೇ (ADGP) ಕಳಂಕಿತ ಅಧಿಕಾರಿಯಾಗಿದ್ದಾರೆ. ದೊಡ್ಡ ದೊಡ್ಡ IAS, IPS ಅಧಿಕಾರಿಗಳನ್ನು ಹಿಡಿಯೋದು ಬಿಟ್ಟು ಅವರ ಬಾಲಂಗೋಚಿಗಳಾಗಿರುವ ಗುಮಾಸ್ತರನ್ನು ಹಿಡಿದು ನ್ಯಾಯಾಲಯಕ್ಕೆ ಬರಲಾಗುತ್ತಿದೆ ಎಂದು ಕರ್ನಾಟಕ ಹೈಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ.
'ಭ್ರಷ್ಟಾಚಾರ' ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯ ಉಪ ತಹಶೀಲ್ದಾರ್ ಪಿ ಎಸ್ ಮಹೇಶ್ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಚ್ ಪಿ ಸಂದೇಶ್ ನೇತೃತ್ವದ ನ್ಯಾಯಪೀಠ, ಎಸಿಬಿಯೇ ಅತಿದೊಡ್ಡ ಭ್ರಷ್ಟರ ಕೂಪವಾಗಿದ್ದು, ಅದರ ಕಚೇರಿಗಳು ದಂಧೆಯ ಕೇಂದ್ರಗಳಾಗಿ ಪರಿಣಮಿಸಿವೆ ಎಂದು ಕೆಂಡಾಮಂಡಲವಾಯಿತು.
'ಈ ಪ್ರಕರಣದಲ್ಲಿ ಬೆಂಗಳೂರು ನಗರ ಡಿಸಿ ಜೆ ಮಂಜುನಾಥ್ ಅವರನ್ನೂ ಆರೋಪಿಯನ್ನಾಗಿ ಮಾಡಲಾಗಿದೆ. ಪ್ರಕರಣ ರದ್ದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದ್ದು, ತನಿಖೆಗೆ ತಡೆ ನೀಡಲು ಹೈಕೋರ್ಟ್‌ನ ಮತ್ತೊಂದು ನ್ಯಾಯಪೀಠ ನಿರಾಕರಿಸಿದೆ' ಎಂದು ಎಸಿಬಿ ಪರ ವಕೀಲರು ಪೀಠಕ್ಕೆ ವಿವರಿಸಿದರು.
ಇದಕ್ಕೆ ನ್ಯಾಯಪೀಠ, 'ಪ್ರಕರಣ ಕುರಿತ ತನಿಖಾ ವರದಿ ಎಲ್ಲಿದೆ? ತನಿಖೆ ನಡೆಸಿದ ಮಾಹಿತಿ ನೀಡಬೇಕು. ACB ಏಕೆ ರಚನೆಯಾಗಿದೆ? ಇವತ್ತು ಎಸಿಬಿ ಏನಾಗಿದೆ ನಿಮಗೆ ಗೊತ್ತೆ? ಎಸಿಬಿ ಕಚೇರಿಗಳು ಭ್ರಷ್ಟಾಚಾರದ ದಂಧೆಯ ಕೇಂದ್ರಗಳಾಗಿವೆ ಎಂದು ಹೇಳಿತು.
ಈ ಮಹಾದಂಧೆಯ ಬೇರುಗಳಾದ ಮೇಲ್ಮಟ್ಟದ ಅಧಿಕಾರಿಗಳನ್ನು ಆರೋಪಿಗಳನ್ನಾಗಿ ಮಾಡದೇ ಸಣ್ಣಪುಟ್ಟ ಅಧಿಕಾರಿಗಳನ್ನು ಮಾತ್ರ ಮುಟ್ಟಲಾಗುತ್ತದೆ. ಕೇವಲ ಗುಮಾಸ್ತರ ವಿರುದ್ಧ ಪ್ರಕರಣ ದಾಖಲಿಸುವುದಲ್ಲ. ಭ್ರಷ್ಟಾಚಾರ ನಡೆಸುತ್ತಿರುವ ದೊಡ್ಡ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು” ಎಂದು ತರಾಟೆಗೆ ತೆಗೆದುಕೊಂಡಿತು.
"ACBಯ ADGPಯೇ ಕಳಂಕಿತರಾಗಿದ್ದಾರೆ. ಅವರ ವಿರುದ್ಧದ ಪ್ರಕರಣದಲ್ಲಿ ಮಾಹಿತಿಯನ್ನು ನ್ಯಾಯಾಲಯಕ್ಕೆ ನೀಡಬೇಕು. ಸರ್ಕಾರ ಉದ್ದೇಶಪೂರ್ವಕವಾಗಿ ಕಳಂಕಿತರನ್ನು ಇಲ್ಲಿಗೆ ಹಾಕುತ್ತಿದೆ. ಮಾಜಿ ಚೀಫ್ ಸೆಕ್ರಟರಿ ಅರವಿಂದ ಜಾಧವ್ ಪ್ರಕರಣದಲ್ಲಿ ಎಸಿಬಿ ಏನೆಲ್ಲಾ ಮಾಡಿದೆ ಎಂಬುದು ನ್ಯಾಯಾಲಯಕ್ಕೆ ಗೊತ್ತಿದೆ. ತನಿಖಾಧಿಕಾರಿ ಅಪ್ರಯೋಜಕರಾಗಿದ್ದಾರೆ. ಭ್ರಷ್ಟಾಚಾರದಲ್ಲಿ ತೊಡಗಿರುವ ಅಧಿಕಾರಿಗಳನ್ನು ರಕ್ಷಿಸಬೇಡಿ. ದೊಡ್ಡ ಅಧಿಕಾರಿಗಳನ್ನು ರಕ್ಷಿಸಲಾಗುತ್ತಿದೆ ಎಂಬುದಕ್ಕೆ ಈ ಪ್ರಕರಣವೇ ಉದಾಹರಣೆ” ಎಂದು ಪೀಠವು ತೀಕ್ಷ್ಣವಾಗಿ ನುಡಿಯಿತು.
“ಪ್ರಕರಣದಲ್ಲಿ ಡಿಸಿ ಅವರ ಪಿ.ಎ. ಮೊದಲ ಆರೋಪಿ. ಎರಡನೇ ಆರೋಪಿ ಗುತ್ತಿಗೆ ನೌಕರ. ಆದರೆ, ಜಿಲ್ಲಾಧಿಕಾರಿಯನ್ನು ಆರೋಪಿ ಮಾಡಿರಲಿಲ್ಲ. ನ್ಯಾಯಾಲಯವು ಜಿಲ್ಲಾಧಿಕಾರಿಯ ವಿರುದ್ಧದ ದಾಖಲೆಗಳು ಮನಗಂಡು ಸೂಚನೆ ನೀಡಿದ ನಂತರ ಮೂರನೇ ಆರೋಪಿಯನ್ನಾಗಿ ಮಾಡಲಾಯಿತು. ಕೇವಲ ಔಪಚಾರಿಕ ಕ್ರಮಗಳನ್ನು ಕೈಗೊಂಡಿದೆ, ಅಷ್ಟೇ... ACB ಭ್ರಷ್ಟಾಚಾರವನ್ನು ತಡೆಯುವ ಕೆಲಸ ಮಾಡುತ್ತಿಲ್ಲ” ಎಂದು ನ್ಯಾಯಪೀಟ ಕಟುವಾಗಿ ನುಡಿಯಿತು.
'ಎಷ್ಟು ಭ್ರಷ್ಟಾಚಾರ ಪ್ರಕರಣಗಳಲ್ಲಿ ACB ದಾಳಿ ನಡೆಸಿದೆ? ಕಳೆದ ಆರು ವರ್ಷಗಳಲ್ಲಿ ಎಷ್ಟು ಅಧಿಕಾರಿಗಳ ವಿರುದ್ಧ 'B' ರಿಪೋರ್ಟ್ ಹಾಕಿದ್ದೀರಿ ಎಂಬ ಬಗ್ಗೆ ವಾಸ್ತವ ವರದಿ ನೀಡಿ' ಎಂದು ಸೂಚಿಸಿ ವಿಚಾರಣೆಯನ್ನು ಮುಂದೂಡಿತು.
ಪ್ರಕರಣದ ಹಿನ್ನೆಲೆ: ಬೆಂಗಳೂರು ಜಿಲ್ಲೆಯ ಆನೇಕಲ್ ತಾಲ್ಲೂಕಿನ ಕೂಡ್ಲು ಗ್ರಾಮದ 38 ಗುಂಟೆ ಜಮೀನು ಒಡೆತನಕ್ಕೆ ಸಂಬಂಧಿಸಿದ ವ್ಯಾಜ್ಯದಲ್ಲಿ ಅನುಕೂಲಕರ ಆದೇಶ ನೀಡಲು ಬೇಗೂರು ನಿವಾಸಿ ಅಜಂ ಪಾಷಾ ಎಂಬುವರಿಂದ 5 ಲಕ್ಷ ರೂಪಾಯಿ ಲಂಚ ಪಡೆಯಲಾಗಿದೆ ಎಂಬ ಪ್ರಕರಣದಲ್ಲಿ ಅರ್ಜಿದಾರ ಮಹೇಶ್ ಆರೋಪಿಯಾಗಿದ್ದಾರೆ. ಅವರನ್ನು ಎಸಿಬಿ ಬಂಧಿಸಿದೆ.