ವಕೀಲರು ಅಟೆಸ್ಟ್ ಮಾಡಿದ ಆದೇಶದ ಡೌನ್‌ಲೋಡ್ ಪ್ರತಿ ಸಾಕು, ದೃಢೀಕೃತ ಪ್ರತಿ ಅನಗತ್ಯ: ಹಿ.ಪ್ರ.ಹೈಕೋರ್ಟ್
ವಕೀಲರು ಅಟೆಸ್ಟ್ ಮಾಡಿದ ಆದೇಶದ ಡೌನ್‌ಲೋಡ್ ಪ್ರತಿ ಸಾಕು, ದೃಢೀಕೃತ ಪ್ರತಿ ಅನಗತ್ಯ: ಹಿ.ಪ್ರ. ಹೈಕೋರ್ಟ್
ನ್ಯಾಯಾಲಯಗಳ ಮಧ್ಯಂತರ ಆದೇಶಗಳು ಮತ್ತು ಜಾಮೀನು ಅರ್ಜಿಯ ಆದೇಶಗಳಿಗೆ ಸಂಬಂಧಿಸಿದಂತೆ ಕೋರ್ಟಿನ ದೃಢೀಕೃತ ಪ್ರತಿಗಳನ್ನೇ ನೀಡಬೇಕು ಎಂದು ತಾಕೀತು ಮಾಡುವಂತಿಲ್ಲ. ಕಂಪ್ಯೂಟರ್‌ನಿಂದ ಡೌನ್‌ಲೋಡ್ ಮಾಡಿದ ನ್ಯಾಯಾಲಯದ ಆದೇಶಗಳ ವಕೀಲರ ದೃಢೀಕರಿಸಿದ ಸಹಿ ಇರುವ ಪ್ರತಿಗಳನ್ನು ಅದಕ್ಕೆ ಬದಲಾಗಿ ನೀಡಬಹುದು.
ಈ ಬಗ್ಗೆ ಜೂನ್ 3ರಂದು ಹಿಮಾಚಲ ಪ್ರದೇಶದ ಹೈಕೋರ್ಟ್ ನ್ಯಾಯಾಂಗದ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಹಿಮಾಚಲ ಪ್ರದೇಶ ಹೈಕೋರ್ಟ್ ರಿಜಿಸ್ಟ್ರಾರ್ ಈ ಬಗ್ಗೆ ಆದೇಶ ಹೊರಡಿಸಿದ್ದಾರೆ.
ವಿಚಾರಣಾ ನ್ಯಾಯಾಲಯ ಯಾ ಹೈಕೋರ್ಟ್ ನೀಡಿದ ಜಾಮೀನು ಆದೇಶ, ಮಧ್ಯಂತರ ಆದೇಶಗಳ ದೃಢೀಕೃತ ಪ್ರತಿ ನೀಡುವಂತೆ ದಾವೆದಾರರಿಗೆ ಒತ್ತಾಯಿಸದಂತೆ ಆದೇಶದಲ್ಲಿ ತಿಳಿಸಲಾಗಿದೆ.
ನ್ಯಾಯಾಲಯದ ಆದೇಶಗಳನ್ನು ನಿಜವಾಗಿಯೂ ಡೌನ್‌ಲೋಡ್ ಮಾಡಲಾಗಿದೆ ಎಂಬುದಾಗಿ ವಕೀಲರ ಅಟೆಸ್ಟ್ ಮಾಡಿದ್ದರೆ ಸಾಕು. ಅದರ ಬದಲು ದೃಢೀಕೃತ ನಕಲು ಬೇಕು ಎಂದು ಒತ್ತಾಯಿಸುವುದು ದಾವೆದಾರರಿಗೆ ಅನಾನುಕೂಲ ಉಂಟು ಮಾಡಿ, ತೊಂದರೆಗೆ ಕಾರಣವಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಆದರೆ, ಇಂತಹ ಪ್ರತಿಗಳನ್ನು ಸ್ವೀಕರಿಸುವಾಗ ಹೈಕೋರ್ಟ್ ಜಾಲತಾಣ ಪರಿಶೀಲಿಸಿ ಖಚಿತಪಡಿಸಿಕೊಳ್ಳುವಂತೆ ನ್ಯಾಯಾಂಗ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಜಿಲ್ಲಾ / ತಾಲೂಕು ಮಟ್ಟದ ನ್ಯಾಯಾಂಗ ಅಧಿಕಾರಿಗಳು ಕೋರ್ಟ್ ಆದೇಶಗಳ ದೃಢೀಕೃತ ನಕಲು ನೀಡಬೇಕು ಎಂದು ತಾಕೀತು ಮಾಡುತ್ತಿರುವುದು ಹೈಕೋರ್ಟ್ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಈ ಆಡಳಿತಾತ್ಮಕ ನಿರ್ದೇಶನ ನೀಡಲಾಗಿದೆ.