ದೇಶದ ಎಲ್ಲ ವಕೀಲರ ಸಂಘಗಳಲ್ಲಿ ಯೋಗ ದಿನ ಆಚರಿಸಲು ಭಾರತೀಯ ವಕೀಲರ ಪರಿಷತ್ತು ಕರೆ
ದೇಶದ ಎಲ್ಲ ವಕೀಲರ ಸಂಘಗಳಲ್ಲಿ ಯೋಗ ದಿನ ಆಚರಿಸಲು ಭಾರತೀಯ ವಕೀಲರ ಪರಿಷತ್ತು ಕರೆ
ವಿಶ್ವ ಯೋಗ ದಿನವನ್ನು ಎಲ್ಲಾ ರಾಜ್ಯಗಳ ವಕೀಲರ ಪರಿಷತ್‌ಗಳು ಹಾಗೂ ವಕೀಲರ ಸಂಘಗಳಲ್ಲೂ ಆಚರಿಸುವಂತೆ ಭಾರತೀಯ ವಕೀಲರ ಪರಿಷತ್ತು (BCI) ಕರೆ ನೀಡಿದೆ. ಜೂನ್ 21ರಂದು ಯೋಗ ಶಿಬಿರಗಳನ್ನು ಆಯೋಜಿಸುವ ಮೂಲಕ ಯೋಗ ದಿನ ಆಚರಿಸಬೇಕು ಎಂದು ಅದು ಪತ್ರ ಬರೆದಿದೆ.
ನ್ಯಾಯಾಂಗ ಸಮುದಾಯವೂ ಯೋಗ ದಿನದಲ್ಲಿ ಪಾಲ್ಗೊಳ್ಳಬೇಕು ಎಂದು ಕಾನೂನು ಸಚಿವ ಕಿರಣ್ ರಿಜಿಜು ವಕೀಲರ ಸಂಘಕ್ಕೆ ಮನವಿ ಮಾಡಿದ್ದರು. ಅದರಂತೆ, ಬಿಸಿಐ ಈ ಮನವಿ ಮಾಡಿದೆ.
ವಕೀಲರಿಗೆ ಮಾನಸಿಕ, ದೈಹಿಕ ಆರೋಗ್ಯದ ಜೊತೆಗೆ ತಮ್ಮ ವೃತ್ತಿಪರ ಒತ್ತಡ ನಿಭಾಯಿಸಲು ಮತ್ತು ವೃತ್ತಿ ಘನತೆಯನ್ನು ಮೆರೆಯಲು ಯೋಗ ಪೂರಕವಾಗಿದೆ. ವೈಯಕ್ತಿಕ ಔನತ್ಯದ ಸಾಮರ್ಥ್ಯ ರೂಪಿಸಲು ದೇಹ, ಮನಸ್ಸು ಹಾಗೂ ಆತ್ಮವನ್ನು ಬೆಸೆಯುವ ನಿಟ್ಟಿನಲ್ಲಿ ಯೋಗ ಮಹತ್ವದ ಸಾಧನವಾಗಿದೆ. ವಿಶ್ವಕ್ಕೆ ಯೋಗ ಪರಿಚಯಿಸಿರುವ ದೇಶದಲ್ಲಿ ವಕೀಲ ಸಮುದಾಯ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸುವಂತೆ ಬಿಸಿಐ ತನ್ನ ಮನವಿ ಪತ್ರದಲ್ಲಿ ತಿಳಿಸಿದೆ.