Sec 439 CrPC - ದೈವ ಪಾತ್ರಿಗೆ ಜಾತಿ ನಿಂದನೆ; ಅಷ್ಟಮಂಗಲ ಹಾಕಿದ ಜ್ಯೋತಿಷಿ ಜಾಮೀನು ತಿರಸ್ಕೃತ
ದೈವ ಪಾತ್ರಿಗೆ ಜಾತಿ ನಿಂದನೆ; ಅಷ್ಟಮಂಗಲ ಹಾಕಿದ ಜ್ಯೋತಿಷಿ ಜಾಮೀನು ತಿರಸ್ಕೃತ
ದಕ್ಷಿಣ ಕನ್ನಡದ ದೈವಾರಾಧನೆಯಲ್ಲಿ ಪ್ರಧಾನ ಪಾತ್ರ ವಹಿಸುವ ಪರಿಶಿಷ್ಟ ಸಮುದಾಯಕ್ಕೆ ಸೇರಿದ 'ಕೋಲ ಕಟ್ಟುವ ವ್ಯಕ್ತಿ'ಯ ದೈವ ನರ್ತನ ಸೇವೆಗೆ ಅಡ್ಡಿಪಡಿಸಿದ ಮತ್ತು ಜಾತಿನಿಂದನೆ ಮಾಡಿದ ಆರೋಪದ ಮೇಲೆ ಜ್ಯೋತಿಷಿಯೊಬ್ಬರಿಗೆ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಇತ್ತೀಚೆಗೆ ಜಾಮೀನು ನಿರಾಕರಿಸಿದೆ.
ಪ್ರಕರಣ: ಡಿ ಸತ್ಯನಾರಾಯಣ Vs ಬೆಳ್ಳಾರೆ PSI ಮತ್ತಿರರರು
5ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ, ಪುತ್ತೂರು
Crl Misc- 5103/2022 Dated 1-06-2022
'ಆರೋಪಿ ಅರ್ಜಿದಾರ ಜ್ಯೋತಿಷಿಗೆ ಜಾಮೀನು ನೀಡಿದರೆ ಮುಂದಿನ ತನಿಖೆಗೆ ಅವರು ಅಡ್ಡಿಪಡಿಸುವ, ಅಭಿಯೋಜನೆಯ ಸಾಕ್ಷಿಗಳಿಗೆ ಬೆದರಿಕೆ ಒಡ್ಡುವ ಹಾಗೂ ಇಂಥದ್ದೇ ಕೃತ್ಯ ಎಸಗುವ ಸಾಧ್ಯತೆಗಳನ್ನು ನಿರಾಕರಿಸಲಾಗದು. ಕೃತ್ಯದ ಗಂಭೀರತೆಯನ್ನು ಪರಿಗಣಿಸಿ ಹಾಗೂ ತನಿಖೆ ಇನ್ನೂ ಪೂರ್ಣಗೊಂಡಿಲ್ಲದೇ ಇರುವುದರಿಂದ ಅರ್ಜಿದಾರ ಜಾಮೀನಿಗೆ ಅರ್ಹರಲ್ಲ” ಎಂದು ನ್ಯಾಯಪೀಠ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.
ಘಟನೆಯ ವಿವರ:
ದ.ಕ. ಜಿಲ್ಲೆಯ ಪುತ್ತೂರು ತಾಲೂಕಿನ ನಿಡ್ಪಳ್ಳಿ ಹಾಗೂ ಸುಳ್ಯದಲ್ಲಿ ಕಳೆದ ಮೂರು ವರ್ಷಗಳಿಂದ 'ದೈವ ನರ್ತನ' ಸೇವೆ ಮಾಡುತ್ತಿರುವ ʼಪರವʼ ಪರಿಶಿಷ್ಟ ಜಾತಿಗೆ ಸೇರಿದ ಬಾಳಿಲ ನಿವಾಸಿ ಶೇಷಪ್ಪ ಪರವ ಬಿ ಪುತ್ತೂರಿನ DySPರವರಿಗೆ ದೂರೊಂದನ್ನು ಸಲ್ಲಿಸಿದ್ದು, ಅದರ ಪ್ರಕಾರ ಅಯ್ಯನಕಟ್ಟೆಯಲ್ಲಿ ನೇಮೋತ್ಸವದ ವೇಳೆ ನಡೆದ ʼಅಷ್ಟಮಂಗಲʼ ಜ್ಯೋತಿಷ್ಯ ಚರ್ಚೆಯಲ್ಲಿ ಆರೋಪಿಯಾದ ತಂತ್ರಿ ಹಾಗೂ ಜ್ಯೋತಿಷಿ ಸತ್ಯನಾರಾಯಣ ಭಟ್ ತಮ್ಮ ಹಾಗೂ ತಮ್ಮ ಸಮುದಾಯದ ಜಾತಿ ನಿಂದನೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದರು.
ಇನ್ನು ಮುಂದೆ ತಾನು ದೈವ ನರ್ತನ ಸೇವೆ ಮಾಡಬಾರದು ಎಂದು ನಿರ್ಬಂಧಿಸಿದ್ದು, ತಮಗೆ ಚಪ್ಪಲಿಯಿಂದ ಹೊಡೆಯುವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಹೇಳಿರುವ ಶೇಷಪ್ಪರು, ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿ ತಾನು ಮಾಡುವ ಕಸುಬಿಗೆ ಅಡ್ಡಿ ಪಡಿಸಿ, ಆರ್ಥಿಕವಾಗಿ ತೊಂದರೆ ನೀಡಿದ್ದಾರೆ ಎಂದು ಆರೋಪಿಸಿದ್ದರು.
ಈ ಹಿನ್ನೆಲೆಯಲ್ಲಿ ಜಾಮೀನು ಅರ್ಜಿ ಸಲ್ಲಿಸಿದ ಜ್ಯೋತಿಷಿ ಸತ್ಯನಾರಾಯಣ ಭಟ್, ತಾನು ಮುಗ್ಧನಾಗಿದ್ದು ಗೌರವಾನ್ವಿತ ಕುಟುಂಬದಿಂದ ಬಂದಿದ್ದೇನೆ. ಸಮಾಜದೊಂದಿಗೆ ಆಳ ಸಂಬಂಧ ಹೊಂದಿದ್ದೇನೆ. ಮತ್ತು ತನಿಖೆಗೆ ಸಹಕರಿಸುತ್ತೇನೆ ಹಾಗೂ ನಾಪತ್ತೆಯಾಗುವ ಸಂಭವ ಇಲ್ಲ” ಎಂದು ವಾದಿಸಿದ್ದರು.
ಇದಕ್ಕಾಗಿ ಕರ್ನಾಟಕ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ವಿವಿಧ ಪ್ರಕರಣಗಳಲ್ಲಿ ಈ ಹಿಂದೆ ನೀಡಿದ್ದ ತೀರ್ಪುಗಳನ್ನು ಉಲ್ಲೇಖಿಸಿದ್ದರು.
"ಈ ಪ್ರಕರಣದಲ್ಲಿ, 2015ರ ಎಸ್‌ಸಿ ಎಸ್‌ಟಿ ತಿದ್ದುಪಡಿ ಕಾಯಿದೆಯ ಸೆಕ್ಷನ್ 3(1) (ZA)(C) ಹಾಗೂ 3(1)(ZC) ಅಡಿ ಆರೋಪಿ ಕೃತ್ಯ ಎಸಗಿದ್ದಾರೆ. ಅವರ ವಿರುದ್ಧ ಆರೋಪಿಸಲಾಗಿರುವ ಕೃತ್ಯ ಮರಣದಂಡನೆ ಇಲ್ಲವೇ ಜೀವಾವಧಿ ಶಿಕ್ಷೆಗೆ ಅರ್ಹ. ಈ ಹಂತದಲ್ಲಿ ಅವರಿಗೆ ಜಾಮೀನು ನೀಡಿದರೆ ಸಾಕ್ಷ್ಯಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ" ಸರ್ಕಾರಿ ವಕೀಲರು ವಾದಿಸಿದ್ದರು.
ಅರ್ಜಿದಾರರು ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಪ್ರಭಾವ ಹೊಂದಿದ್ದು, ಅರ್ಜಿದಾರರಿಗೆ ಜಾಮೀನು ದೊರೆತರೆ ತನ್ನ ವಿರುದ್ಧದ ದೂರನ್ನು ವಾಪಸ್ ಪಡೆಯುವಂತೆ ತಮ್ಮ ಮೇಲೆ ಒತ್ತಡ ಹಾಕುವ ಸಾಧ್ಯತೆ ಇದೆ ಎಂದು ಸಂತ್ರಸ್ತರು ಲಿಖಿತ ವಾದ ಮಂಡಿಸಿದ್ದರು.
ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಪೀಠ, CrPC ಸೆಕ್ಷನ್ 438 ಅಡಿ ಅರ್ಜಿದಾರರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು.