Rtd IAS ಅಧಿಕಾರಿಯ ಭೂಕಬಳಿಕೆ: ಪ್ರಾಸಿಕ್ಯೂಷನ್‌ಗೆ ಪೂರ್ವಾನುಮತಿ ಪಡೆಯಲು ವಿಳಂಬ; ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ದಂಡ
Rtd IAS ಅಧಿಕಾರಿಯ ಭೂಕಬಳಿಕೆ: ಪ್ರಾಸಿಕ್ಯೂಷನ್‌ಗೆ ಪೂರ್ವಾನುಮತಿ ಪಡೆಯಲು ವಿಳಂಬ; ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ದಂಡ
ಸರ್ಕಾರಿ ಅಧಿಕಾರಿ ವಿರುದ್ಧ ಕೇಸು ದಾಖಲಿಸಲು ಪೂರ್ವಾನುಮತಿ ಬೇಕು. ಹಾಗೆಯೇ, ಭೂಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾಧವ್ ವಿರುದ್ಧ ಕೇಸು ದಾಖಲಿಸಲು ಪೂರ್ವಾನುಮತಿ ಕೇಳಲಾಗಿತ್ತು. ಆದರೆ, ಸರ್ಕಾರ ಪೂರ್ವಾನುಮತಿ ವಿಳಂಬವಾಗಿ ನೀಡಿತ್ತು.
ಈ ವಿಳಂಬ ಸರ್ಕಾರಕ್ಕೆ ದುಬಾರಿಯಾಗಿ ಪರಿಣಮಿಸಿದೆ. ರಾಜ್ಯ ಸರ್ಕಾರದ ಧೋರಣೆಯನ್ನು ತೀವ್ರ ತರಾಟೆಗೆ ತೆಗೆದುಕೊಂಡ ಹೈಕೋರ್ಟ್, ರಾಜ್ಯ ಸರ್ಕಾರ ಒಂದು ಲಕ್ಷ ರೂ.ಗಳ ದಂಡ ವಿಧಿಸಿದೆ.
ಅರೋಪಿ ಅರವಿಂದ ಜಾದವ್ ತಮ್ಮ ತಾಯಿ ಹೆಸರಿನಲ್ಲಿ ಸರ್ಕಾರಿ ಜಮೀನು ಕಬಳಿಸಲು ನಕಲಿ ದಾಖಲೆ ಸೃಷ್ಟಿಸಿದ್ದಾರೆ ಎನ್ನಲಾಗಿದೆ.
ಭ್ರಷ್ಟಾಚಾರ ನಿಗ್ರಹ ದಳ (ACB) ದಾಖಲಿಸಿರುವ FIR ರದ್ದಪಡಿಸುವಂತೆ ಕೋರಿ ಆರೋಪಿ ಬೆಂಗಳೂರಿನ ಭೂ ದಾಖಲೆಗಳ ಇಲಾಖೆ ಉಪ ನಿರ್ದೇಶಕರ ಕಚೇರಿಯ ಸರ್ವೇಯರ್ ಆಗಿರುವ ಡಿ ಬಿ ಗಂಗಯ್ಯ ಮನವಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಎಚ್ ಪಿ ಸಂದೇಶ್ ನೇತೃತ್ವದ ಏಕಸದಸ್ಯ ಪೀಠ ಆದೇಶ ನೀಡಿದೆ.
"ಗರಿಷ್ಟ ಕಾಲಾವಕಾಶ ನೀಡಿದ್ದರೂ ಪ್ರಕರಣದ 8ನೇ ಆರೋಪಿಯಾದ ಕೇಂದ್ರ ಸರ್ಕಾರದ ನಿವೃತ್ತ ಅಧಿಕಾರಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆದಿಲ್ಲ" ಎಂದು ಆಕ್ರೋಶಗೊಂಡ ನ್ಯಾಯಪೀಠ, ರಾಜ್ಯ ಸರ್ಕಾರಕ್ಕೆ ದಂಡ ವಿಧಿಸಿದೆ.
ಒಂದು ವಾರದಲ್ಲಿ ದಂಡದ ಮೊತ್ತವನ್ನು ಪಾವತಿಸಬೇಕು, ದಂಡದ ಹಣವನ್ನು ಆರೋಪಿ ವಿರುದ್ಧ ಪೂರ್ವಾನುಮತಿ ಪಡೆಯಲು ದಾಖಲೆಗಳನ್ನು ರವಾನಿಸದ ಅಧಿಕಾರಿಗಳಿಂದ ವಸೂಲಿ ಮಾಡಬೇಕು ಎಂದು ಸೂಚಿಸಿದ ಹೈಕೋರ್ಟ್, ದಂಡದ ಮೊತ್ತವನ್ನು ಪಾವತಿಸದಿದ್ದರೆ, ಆ ಅಧಿಕಾರಿಗಳ ವಿರುದ್ಧ ಗಂಭೀರ ಕ್ರಮ ಜರುಗಿಸಲಾಗುವುದಾಗಿ ಎಚ್ಚರಿಸಿದೆ.
ಘಟನೆ ಹಿನ್ನೆಲೆ
ಆನೇಕಲ್ ತಾಲೂಕು ರಾಮನಾಯಕನ ಹಳ್ಳಿ ಗ್ರಾಮದ ಸರ್ಕಾರಿ ಜಮೀನನ್ನು ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾಧವ್ ತಾಯಿ ಒತ್ತುವರಿ ಮಾಡಿದ್ದರು. ಅರವಿಂದ ಜಾಧವ್ ಕೆಲ ಸರ್ಕಾರಿ ಅಧಿಕಾರಿಗಳ ಜೊತೆ ಶಾಮೀಲಾಗಿ ಅಧಿಕಾರ ದುರ್ಬಳಕೆ ಮಾಡಿಕೊಂಡು, ಸರ್ಕಾರಿ ಜಮೀನಿಗೆ ಸೇರಿದ ಕಂದಾಯ ದಾಖಲೆಗಳಲ್ಲಿ ತಮ್ಮ ತಾಯಿ ಹೆಸರು ಸೇರ್ಪಡೆ ಮಾಡಿದ್ದಾರೆ. ಈ ಬಗ್ಗೆ 2016ರ ಆಗಸ್ಟ್ 23ರಂದು ಎಸ್ ಭಾಸ್ಕರನ್ ಎಂಬವರು ACBಗೆ ದೂರು ನೀಡಿದ್ದರು.
ತನಿಖೆಯಲ್ಲಿ ಅರ್ಜಿದಾರ ಡಿ ಬಿ ಗಂಗಯ್ಯ ಪಾತ್ರ ಕಂಡು ಬಂದ ಹಿನ್ನೆಲೆಯಲ್ಲಿ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆದ ACB 2018ರ ಸೆಪ್ಟೆಂಬರ್ 15ರಂದು FIR ದಾಖಲಿಸಿತ್ತು. ಇದನ್ನು ರದ್ದುಪಡಿಸುವಂತೆ ಕೋರಿ ಗಂಗಯ್ಯ ಅವರು ಹೈಕೋರ್ಟ್‌ಗೆ 2020ರಲ್ಲಿ ಅರ್ಜಿ ಸಲ್ಲಿಸಿದ್ದರು.
ಸುಮಾರು 2 ವರ್ಷಗಳಿಂದ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್ ಕಾಲ ಕಾಲಕ್ಕೆ ACBಯಿಂದ ತನಿಖಾ ವರದಿ ತರಿಸಿ ಪರಿಶೀಲನೆ ನಡೆಸಿತ್ತು ಹಾಗೂ ಆರೋಪಿ ಸರ್ಕಾರಿ ಅಧಿಕಾರಿಗಳ ವಿರುದ್ಧ 'ಪ್ರಾಸಿಕ್ಯೂಷನ್‌ಗೆ ಪೂರ್ವಾನುಮತಿ' ವಿಷಯದಲ್ಲೂ ಗಮನವಿಟ್ಟಿತ್ತು.
ಪ್ರಕರಣದ ಎಂಟನೇ ಆರೋಪಿಯು ಕೇಂದ್ರ ಸರ್ಕಾರದ ನಿವೃತ್ತ ಅಧಿಕಾರಿಯಾಗಿದ್ದಾರೆ. ಅವರ ವಿರುದ್ಧ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯಬೇಕಿತ್ತು. ಆದರೆ, ರಾಜ್ಯದ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಸೂಕ್ತ ದಾಖಲೆಗಳನ್ನು ರವಾನಿಸಿರಲಿಲ್ಲ.
6 ವಾರದಲ್ಲಿ 8ನೇ ಆರೋಪಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಪೂರ್ವಾನುಮತಿ ಪಡೆಯಲಾಗುವುದು ಎಂದು 2022ರ ಏಪ್ರಿಲ್ 20ರಂದು ಸರ್ಕಾರ ಹೈಕೋರ್ಟ್‌ಗೆ ಭರವಸೆ ನೀಡಿತ್ತು.