ನಿರಾಧಾರ ನಪುಂಸಕತ್ವ ಆರೋಪ ಮಾಡುವುದು ಮಾನಸಿಕ ಕ್ರೌರ್ಯ: ಪತಿಗೆ ವಿಚ್ಚೇದನ ಮಂಜೂರು ಮಾಡಿದ ಕರ್ನಾಟಕ ಹೈಕೋರ್ಟ್
ನಿರಾಧಾರ ನಪುಂಸಕತ್ವ ಆರೋಪ ಮಾಡುವುದು ಮಾನಸಿಕ ಕ್ರೌರ್ಯ: ಪತಿಗೆ ವಿಚ್ಚೇದನ ಮಂಜೂರು ಮಾಡಿದ ಕರ್ನಾಟಕ ಹೈಕೋರ್ಟ್
ಗಂಡನ ವಿರುದ್ಧ ಆಧಾರರಹಿತವಾಗಿ ನಪುಂಸಕತ್ವ ಆರೋಪ ಹೊರಿಸುವುದು ಮಾನಸಿಕ ಕ್ರೌರ್ಯವಾಗಿದೆ. ಇದನ್ನು ಆಧರಿಸಿ ಪತಿ ವಿಚ್ಚೇದನ ಕೋರಬಹುದು ಎಂದು ಕರ್ನಾಟಕ ಹೈಕೋರ್ಟ್‌ನ ಮಹತ್ವದ ತೀರ್ಪು ನೀಡಿದೆ.
ಯಾವುದೇ ದಾಖಲೆ ಇಲ್ಲದೆ, ಪತಿ ನಪುಂಸಕ ಎಂದು ಆರೋಪ ಮಾಡಿ ತನ್ನ ಘನತೆಗೆ ಧಕ್ಕೆ ತಂದರೂ ವಿಚ್ಛೇದನ ನೀಡಿಲ್ಲ ಎಂದು ಧಾರವಾಡದ ಪ್ರಧಾನ ಕೌಟುಂಬಿಕ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಅರ್ಜಿದಾರರು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು.
ಅರ್ಜಿಯ ವಿಚಾರಣೆ ನಡೆಸಿದ, ನ್ಯಾ. ಸುನಿಲ್ ದತ್ ಯಾದವ್ ಮತ್ತು ಹೇಮಲೇಖಾ ನೇತೃತ್ವದ ವಿಭಾಗೀಯ ಪೀಠ, ಪತಿಯ ವಿರುದ್ಧ ಆಧಾರರಹಿತ ನಪುಂಸಕತ್ವದ ಆರೋಪ ಮಾಡಿದ ಪತ್ನಿಯ ನಡೆಗೆ ಆಕ್ಷೇಪಿಸಿ, ವಿಚ್ಚೇದನ ಮಂಜೂರು ಮಾಡಿದೆ. ಪತ್ನಿ ಮರು ಮದುವೆ ಆಗುವವರೆಗೆ ಮಾಸಿಕ 8000/- ಜೀವನಾಂಶ ನೀಡಬೇಕು ಎಂದು ಪತಿಗೆ ಆದೇಶಿಸಿದೆ.
ಗಂಡ ತನ್ನ ಜೊತೆಗೆ ಲೈಂಗಿಕ ಕ್ರಿಯೆ ನಡೆಸಲು ಅಸಮರ್ಥರಿದ್ದಾರೆ ಎಂದು ನ್ಯಾಯಾಲಯದಲ್ಲಿ ಪತ್ನಿ ಆರೋಪ ಮಾಡಿದ್ದರು. ಆದರೆ, ಈ ಆರೋಪ ಸಾಬೀತು ಮಾಡಲು ಯಾವುದೇ ದಾಖಲೆ ಯಾ ಸಾಕ್ಷ್ಯಾಧಾರ ಒದಗಿಸಿರಲಿಲ್ಲ. ಯಾವುದೇ ಆಧಾರ ಇಲ್ಲದೆ, ಸಾರ್ವಜನಿಕವಾಗಿ ಇಂತಹ ಆರೋಪ ಮಾಡುವುದು ಪತಿಯ ಘನತೆಗೆ ಧಕ್ಕೆ ತಂದಂತೆ. ಒಬ್ಬ ಪ್ರಜ್ಞಾವಂತ ಮಹಿಳೆ ಇತರರ ಮುಂದೆ ಪತಿಯ ನಪುಂಸಕತ್ವದ ಬಗ್ಗೆ ಸುಳ್ಳು ಆರೋಪ ಮಾಡುವುದಿಲ್ಲ. ಸಾಕ್ಷ್ಯಾಧಾರ ಇಲ್ಲದೆ ಪತಿ ಮಕ್ಕಳನ್ನು ಹೊಂದಲು ಅಸಮರ್ಥ ಎಂದು ಆರೋಪಿಸುವುದು ಮಾನಸಿಕ ಕ್ರೌರ್ಯ ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿದೆ
ವೈದ್ಯಕೀಯ ತಪಾಸಣೆಗೆ ತಾನು ಸಿದ್ಧ ಎಂದು ಪತಿ ತಿಳಿಸಿದ್ದರು. ಇನ್ನೊಂದೆಡೆ, ಗಂಡನ ನಪುಂಸಕತ್ವ ಕುರಿತು ವೈದ್ಯಕೀಯ ದಾಖಲೆ ಸಹಿತ ಸಾಬೀತು ಮಾಡಲು ಪತ್ನಿ ವಿಫಲರಾದರು. ಸಂಭೋಗ ಕ್ರಿಯೆಗೆ ಪತಿ ಅಸಮರ್ಥರು ಎಂದು ಆರೋಪ ಮಾಡುವುದರಿಂದ ದಾಂಪತ್ಯದಲ್ಲಿ ಮತ್ತೆ ಒಂದಾಗಿ ಜೀವನ ನಡೆಸಲು ಸಾಧ್ಯವಾಗದಂಥ ಪರಿಸ್ಥಿತಿ ಸೃಷ್ಟಿಯಾಗುತ್ತದೆ.
ಹಿಂದೂ ವಿವಾಹ ಕಾಯಿದೆ-1955ರ ಸೆಕ್ಷನ್ 13ರ ಅಡಿಯಲ್ಲಿ ನಪುಂಸಕತ್ವ ವಿಚ್ಛೇದನ ಪಡೆಯಲು ಕಾರಣವಲ್ಲ ಎಂದು ಹೇಳುತ್ತದೆ. ಅದೇ ಕಾಯಿದೆಯ ಸೆಕ್ಷನ್ 13(1)(ಐಎ) ಅಡಿಯಲ್ಲಿ ನಪುಸಂಕತ್ವ ಕುರಿತು ಮಿಥ್ಯಾರೋಪ ಮಾಡಿದರೆ ಅದು ಮಾನಸಿಕ ಕ್ರೌರ್ಯವಾಗುತ್ತದೆ. ಈ ಅಂಶದ ಮೇಲೆ ಪತಿಯು ವಿಚ್ಛೇದನ ಕೋರಬರಹುದು ಎಂದು ನ್ಯಾಯಪೀಠ ಹೇಳಿದೆ.
ಪ್ರಕರಣದ ವಿವರ
ಹುಬ್ಬಳ್ಳಿ-ಧಾರವಾಡ ಮೂಲದ ಗಂಡ ಮತ್ತು ಹಾವೇರಿ ಮೂಲದ ಹೆಂಡತಿ 2013ರ ಮೇ 13ರಂದು ಮದುವೆಯಾಗಿದ್ದರು. ಕೆಲ ತಿಂಗಳ ನಂತರ ಧಾರವಾಡ ಪ್ರಧಾನ ಕೌಟುಂಬಿಕ ನ್ಯಾಯಾಲಯಕ್ಕೆ ಗಂಡ ತನ್ನ ಹೆಂಡತಿಯ ವಿರುದ್ಧ ವಿಚ್ಚೇದನ ಕೋರಿ ಅರ್ಜಿ ಸಲ್ಲಿಸಿದ್ದರು.
ವಿವಾಹವಾದ ಆರಂಭದಲ್ಲಿ ಪತ್ನಿ ವೈವಾಹಿಕ ಜೀವನಕ್ಕೆ ಅಗತ್ಯ ಸಹಕಾರ ನೀಡುತ್ತಿದ್ದರು. ಬಳಿಕ, ಆಕೆಯ ವರ್ತನೆಯಲ್ಲಿ ಬದಲಾವಣೆಯಾಗಿದ್ದು, ಮನೆ ಕೆಲಸ ನಿರ್ವಹಿಸಲು ನಿರಾಕರಿಸುತ್ತಿದ್ದರು. ತಾನು ಲೈಂಗಿಕ ಕ್ರಿಯೆ ನಡೆಸಲು ಅಸಮರ್ಥನಾಗಿದ್ದೇನೆ ಎಂದು ಪದೇ ಪದೇ ಸಂಬಂಧಿಕರ ಮುಂದೆ ಹೇಳುತ್ತಿದ್ದು, ಇದರಿಂದ ತನಗೆ ತುಂಬಾ ಮುಜುಗರ ಮತ್ತು ಮಾನಸಿಕ ಹಿಂಸೆ ಉಂಟಾಗಿದೆ ಎಂದು ಆರೋಪ ಮಾಡಿದ್ದರು.
ಗಂಡನ ವಾದವನ್ನು ಆಕ್ಷೇಪಿಸಿದ್ದ ಹೆಂಡತಿ, ಗಂಡನೇ ತನ್ನಿಂದ ಅಂತರ ಕಾಯ್ದುಕೊಳ್ಳುತ್ತಿದ್ದರು. ಇದರಿಂದ ವೈವಾಹಿಕ ಜೀವನದಲ್ಲಿ ಸುಖ ಮತ್ತು ನೆಮ್ಮದಿ ಇಲ್ಲದಂತಾಯಿತು. ಪತಿಗೆ ಲೈಂಗಿಕ ಕ್ರಿಯೆ ನಡೆಸಲು ಆಸಕ್ತಿ ಇರಲಿಲ್ಲ. ಒಂದಲ್ಲಾ ಒಂದು ಕಾರಣದಿಂದ ಸದಾ ಒಂಟಿಯಾಗಿಯೇ ಇರುತ್ತಿದ್ದರು. ವೈವಾಹಿಕ ಜೀವನ ನಡೆಸಲು ತಾನು ಸದಾ ಸಿದ್ಧಳಿದ್ದೇನೆ. ಆದರೆ, ಗಂಡನೇ ತನ್ನ ಲೋಪ ಮರೆಮಾಚಲು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ಪ್ರತ್ಯಾರೋಪ ಮಾಡಿದ್ದರು.
ವಾದ-ವಿವಾದ ಕೇಳಿದ ಧಾರವಾಡ ಪ್ರಧಾನ ಕೌಟುಂಬಿಕ ನ್ಯಾಯಾಲಯ ಪತಿಯ ಈ ಮನವಿಯನ್ನು ತಿರಸ್ಕರಿಸಿತ್ತು. ಈ ಆದೇಶ ಪ್ರಶ್ನಿಸಿ ಪತಿ ಹೈಕೋರ್ಟ್ ಮೆಟ್ಟಿಲೇರಿದ್ದರು.