ಮಳಲಿ ಮಸೀದಿ ಪ್ರಕರಣ: ದಾವೆಯ ಸಿಂಧುತ್ವ ಕುರಿತು ತೀರ್ಪು ನೀಡದಂತೆ ಮಂಗಳೂರು ಕೋರ್ಟ್‌ಗೆ ಹೈಕೋರ್ಟ್ ನಿರ್ದೇಶನ
ಮಳಲಿ ಮಸೀದಿ ಪ್ರಕರಣ: ದಾವೆಯ ಸಿಂಧುತ್ವ ಕುರಿತು ತೀರ್ಪು ನೀಡದಂತೆ ಮಂಗಳೂರು ಕೋರ್ಟ್‌ಗೆ ಹೈಕೋರ್ಟ್ ನಿರ್ದೇಶನ
-ಮಂಗಳೂರಿನ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಮಳಲಿ ಮಸೀದಿಯಲ್ಲಿ ದೇವಸ್ಥಾನ ಮಾದರಿಯ ಅವಶೇಷ ಪತ್ತೆ ಕುರಿತ ವಿಚಾರಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಅಸಲಿ ದಾವೆಯ ಸಿಂಧುತ್ವದ ಕುರಿತು ಯಾವುದೇ ತೀರ್ಪು ಹೊರಡಿಸದಂತೆ ಮಂಗಳೂರಿನ ವಿಚಾರಣಾ ನ್ಯಾಯಾಲಯಕ್ಕೆ ಕರ್ನಾಟಕ ಹೈಕೋರ್ಟ್ ನಿರ್ದೇಶನ ನೀಡಿದೆ.
ತೆಂಕ ಉಳೆಪಾಡಿಯ ಧನಂಜಯ್ ಹಾಗೂ ಬಡಗು ಉಳೆಪಾಡಿಯ ಮನೋಜ್ ಕುಮಾರ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಪ್ರತಿವಾದಿಯಾದ ಮಳಲಿಪೇಟೆ ಜುಮ್ಮಾ ಮಸೀದಿಯ ಅಧ್ಯಕ್ಷರಿಗೆ ನೋಟಿಸ್ ಜಾರಿಗೊಳಿಸಿದ ನ್ಯಾಯಪೀಠ, ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಅಸಲಿ ದಾವೆಯ ಸಿಂಧುತ್ವದ ಕುರಿತು ವಾದ-ಪ್ರತಿವಾದ ಆಲಿಸಿದರೂ, ಯಾವುದೇ ಆದೇಶ ಹೊರಡಿಸಬಾರದು ಎಂದು ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯಕ್ಕೆ ನಿರ್ದೇಶನ ಹೊರಡಿಸಿತು. ಮತ್ತು, ವಿಚಾರಣೆಯನ್ನು ಜೂನ್ 17ಕ್ಕೆ ಮುಂದೂಡಿದೆ.
ಮಳಲಿ ಮಸೀದಿಯಲ್ಲಿ ದೇವಾಲಯ ಅವಶೇಷ ಪತ್ತೆ ಬಗ್ಗೆ ಮೊದಲು ಪರಿಶೀಲನೆ ಆಗಬೇಕು. ಅಲ್ಲಿನ ವಸ್ತುಸ್ಥಿತಿ ಪರಿಶೀಲಿಸಲು ಕೋರ್ಟ್ ಕಮಿಷನರ್ ನೇಮಕ ಮಾಡಬೇಕು. 'ಜ್ಞಾನವಾಪಿ ಮಸೀದಿ' ಮಾದರಿಯಲ್ಲಿ ಕಮಿಷನರ್ ನೇಮಕ ಮಾಡುವ ಕುರಿತು ಮನವಿ ಬಗ್ಗೆ ಸಿವಿಲ್ ನ್ಯಾಯಾಲಯ ಮೊದಲು ವಿಚಾರಣೆ ನಡೆಸಬೇಕು ಎಂದು ಅರ್ಜಿದಾರ ಪರ ವಕೀಲರು ಕೋರಿದರು.
ಸದ್ರಿ ಪ್ರಕರಣ ಸಿವಿಲ್ ಕೋರ್ಟ್‌ನಲ್ಲಿದೆ. ಆದರೆ, 1991ರ ಸಾರ್ವಜನಿಕ ಪೂಜಾ ಸ್ಥಳ ಕಾಯ್ದೆ ಪ್ರಕಾರ, ದಾವೆಯು ವಿಚಾರಣೆ ಸಿಂಧುತ್ವ ಹೊಂದಿಲ್ಲ. ಹಾಗಾಗಿ, ದಾವೆಯನ್ನು ವಜಾಗೊಳಿಸಬೇಕು ಎಂದು ಮಸೀದಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ಕೋರ್ಟ್, ಮೊದಲು ದಾವೆಯ ಸಿಂಧುತ್ವದ ಬಗ್ಗೆ ನಿರ್ಧರಿಸುವುದಾಗಿ ತಿಳಿಸಿತ್ತು.
100 ವರ್ಷಕ್ಕೂ ಹಳೆಯ ಕಟ್ಟಡ ಪ್ರಾಚೀನ ಸ್ಮಾರಕವಾಗುತ್ತದೆ. ಮಳಲಿ ಮಸೀದಿ ಸುಮಾರು 700 ವರ್ಷ ಹಳೆಯದು ಎಂದು ಮಸೀದಿಯವರೇ ಹೇಳುತ್ತಿದ್ದಾರೆ. ಇನ್ನು, ಅದರ ಒಳಗೆ ಪತ್ತೆಯಾಗಿರುವ ರಚನೆ ಅದಕ್ಕಿಂತಲೂ ಹಳೆಯದಾಗಿರುವ ಸಾಧ್ಯತೆ ಇದೆ. ಮಳಲಿ ಮಸೀದಿ ಆಡಳಿತದ ವಾದ ಪರಿಗಣಿಸಿದರೂ, ಅದು ಪ್ರಾಚೀನ ಸ್ಮಾರಕವಾಗುತ್ತದೆ. ಹಾಗಾಗಿ, ಅದಕ್ಕೆ ಸಾರ್ವಜನಿಕ ಪೂಜಾ ಸ್ಥಳ ಕಾಯಿದೆ ಅನ್ವಯವಾಗದು. ಹಾಗಾಗಿ, ಈ ದಾವೆ ವಿಚಾರಣೆಯ ಸಿಂಧುತ್ವ ಹೊಂದಿಲ್ಲ ಎಂಬ ವಾದ ಒಪ್ಪಲು ಅಸಾಧ್ಯ ಎಂದು ಅರ್ಜಿದಾರ ಪರ ವಕೀಲರು ವಾದಿಸಿದ್ದರು.