No Value for Marriage Certificate issued by Arya Samaj- ಆರ್ಯ ಸಮಾಜದ ವಿವಾಹ ಪ್ರಮಾಣ ಪತ್ರಕ್ಕೆ ಮಾನ್ಯತೆ ಇಲ್ಲ: ಸುಪ್ರೀಂ ಕೋರ್ಟ್
ಆರ್ಯ ಸಮಾಜದ ವಿವಾಹ ಪ್ರಮಾಣ ಪತ್ರಕ್ಕೆ ಮಾನ್ಯತೆ ಇಲ್ಲ: ಸುಪ್ರೀಂ ಕೋರ್ಟ್
ಆರ್ಯ ಸಮಾಜ ನೀಡುವ ಮ್ಯಾರೇಜ್ ಸರ್ಟಿಫಿಕೇಟಿಗೆ ಕಾನೂನು ಮಾನ್ಯತೆ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಪ್ರಕಟಿಸಿದೆ.
ಮದುವೆ ನೋಂದಣಿ ಮಾಡಿಸುವುದು ಆರ್ಯ ಸಮಾಜದ ಕೆಲಸ ಅಲ್ಲ. ಆರ್ಯ ಸಮಾಜ ಅನ್ನುವುದು ಹಿಂದು ಸುಧಾರಣಾವಾದಿ ಸಂಘಟನೆಯಾಗಿದ್ದು, 1875ರಲ್ಲಿ ದಯಾನಂದ ಸರಸ್ವತಿ ಸ್ಥಾಪಿಸಿದ್ದರು ಎಂದು ನ್ಯಾಯಪೀಠ ತೀರ್ಪಿನಲ್ಲಿ ಹೇಳಿದೆ.
ಆರ್ಯ ಸಮಾಜದಲ್ಲಿ ಅಂತರ್ಜಾತಿ ಮದುವೆಗಳನ್ನು ಮಾಡುತ್ತಿದ್ದುದರಿಂದ ಪ್ರೀತಿಸಿ ಓಡಿ ಹೋದವರೆಲ್ಲ ಆರ್ಯ ಸಮಾಜದ ಸಭಾಂಗಣದಲ್ಲಿ ಮದುವೆಯಾಗುತ್ತಿದ್ದರು. ಅಲ್ಲಿಂದಲೇ ಮದುವೆ ನೋಂದಣಿಯನ್ನೂ ಮಾಡುತ್ತಿದ್ದರು.
ಇಂತಹ ಲವ್ ಮ್ಯಾರೇಜ್ ಪ್ರಕರಣವೊಂದಲ್ಲಿ ಅಜಯ್ ರಸ್ತೋಗಿ ಮತ್ತು ಬಿವಿ ನಾಗರತ್ನ ಅವರಿದ್ದ ನ್ಯಾಯಪೀಠವು, ಮದುವೆ ನೋಂದಣಿ ಮಾಡಿಸುವುದು ಆರ್ಯ ಸಮಾಜದ ಕೆಲಸ ಅಲ್ಲ ಎಂದು ಹೇಳಿದೆ. ಅಲ್ಲದೆ, ಅದಕ್ಕೆಂದೇ ಮದುವೆ ನೋಂದಣಿ ಮಾಡುವ ಸರ್ಕಾರದ್ದೇ ನೋಂದಾಯಿತ ಸಂಸ್ಥೆ ಇದೆ. ಆ ಕಚೇರಿಯಿಂದಲೇ ಮೂಲ ದಾಖಲೆಯಾಗಿ ಸರ್ಟಿಫಿಕೇಟ್ ಪಡೆದು ಸಲ್ಲಿಸಿ ಎಂದು ಅರ್ಜಿದಾರರಿಗೆ ಆದೇಶಿಸಿದೆ.
ಮಧ್ಯ ಪ್ರದೇಶ ರಾಜ್ಯದಲ್ಲಿ ತಮ್ಮ ಅಪ್ರಾಪ್ತ ಮಗಳನ್ನು ಯುವಕನೊಬ್ಬ ಅಪಹರಿಸಿ, ಅತ್ಯಾಚಾರ ನಡೆಸಿದ್ದಾನೆಂದು ಕುಟುಂಬವೊಂದು ಪೊಲೀಸರಿಗೆ ದೂರು ಸಲ್ಲಿಸಿತ್ತು. ಈ ಬಗ್ಗೆ ಸುಪ್ರೀಂ ಕೋರ್ಟಿನಲ್ಲಿ ರಿಟ್ ಸಲ್ಲಿಸಿದ್ದ ಯುವಕ, ಯುವತಿ ಅಪ್ರಾಪ್ತಳು ಅಲ್ಲ. ಪ್ರಾಯ ಪ್ರಬುದ್ಧಳಾಗಿದ್ದು ತನ್ನ ಸ್ವಇಚ್ಚೆಯಿಂದಲೇ ತನ್ನ ಜೊತೆಗೆ ಬಂದಿದ್ದಾಳೆ. ಆಕೆಯನ್ನು ಆರ್ಯ ಸಮಾಜದಲ್ಲಿ ಮದುವೆಯಾಗಿದ್ದೇನೆ ಎಂದು ಭಾರತೀಯ ಆರ್ಯ ಪ್ರತಿನಿಧಿ ಸಭಾ ಕೊಟ್ಟಿದ್ದ ಮದುವೆ ನೋಂದಣಿ ಪತ್ರವನ್ನು ಕೋರ್ಟ್ ಮುಂದಿಟ್ಟಿದ್ದಾನೆ. ಆದರೆ ಕೋರ್ಟ್, ಆರ್ಯ ಸಮಾಜ ಕೊಟ್ಟಿದ್ದ ಮದುವೆ ನೋಂದಣಿ ಪತ್ರವನ್ನು ಪರಿಗಣಿಸಲು ನಿರಾಕರಿಸಿದೆ.