-->
Victim's Cross Examination in Pocso Case- ಪೋಕ್ಸೊ ಪ್ರಕರಣ: 18 ತುಂಬಿದ ಮೇಲೆ ಸಂತ್ರಸ್ತೆಯ ಪಾಟೀ ಸವಾಲು- ಹೈಕೋರ್ಟ್ ಗ್ರೀನ್ ಸಿಗ್ನಲ್

Victim's Cross Examination in Pocso Case- ಪೋಕ್ಸೊ ಪ್ರಕರಣ: 18 ತುಂಬಿದ ಮೇಲೆ ಸಂತ್ರಸ್ತೆಯ ಪಾಟೀ ಸವಾಲು- ಹೈಕೋರ್ಟ್ ಗ್ರೀನ್ ಸಿಗ್ನಲ್

ಪೋಕ್ಸೊ ಪ್ರಕರಣ: 18 ತುಂಬಿದ ಮೇಲೆ ಸಂತ್ರಸ್ತೆಯ ಪಾಟೀ ಸವಾಲು- ಹೈಕೋರ್ಟ್ ಗ್ರೀನ್ ಸಿಗ್ನಲ್





ಪೋಕ್ಸೊ ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲಿ ಸಂತ್ರಸ್ತೆಯ ಪಾಟೀ ಸವಾಲಿಗೆ (ಅಡ್ಡ ವಿಚಾರಣೆ) ಅವಕಾಶ ಇಲ್ಲ ಎಂಬ ನಿಯಮವಿದೆ. ಆದರೆ, ಸಂತ್ರಸ್ತೆಗೆ 18 ವರ್ಷ ತುಂಬಿದ ಮೇಲೆ ಅವರನ್ನು ಮತ್ತೆ ಪಾಟೀ ಸವಾಲಿಗೆ ಒಳಪಡಿಸಲು ಯಾವುದೇ ಅಡ್ಡಿಯಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.



ಪೋಕ್ಸೋ ಪ್ರಕರಣವೊಂದರ ಸಂತ್ರಸ್ತೆಯನ್ನು CrPC ಸೆಕ್ಷನ್ 311ರ ಪ್ರಕಾರ ಮರು ವಿಚಾರಣೆಗೆ ಕರೆಸಿಕೊಳ್ಳಬೇಕು ಎಂದು ಆರೋಪಿ ಮಹಮ್ಮದ್ ಅಲಿ ಅಕ್ಬರ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ವಜಾ ಗೊಳಿಸಿತ್ತು.



ಇದನ್ನು ಪ್ರಶ್ನಿಸಿ ಅರ್ಜಿದಾರ ಸಲ್ಲಿಸಿದ ಮನವಿಯ ವಿಚಾರಣೆ ನಡೆಸಿದ ನ್ಯಾ. ಎಂ.ನಾಗಪ್ರಸನ್ನ ನ್ಯಾಯಪೀಠ, ಸಂತ್ರಸ್ತೆಯನ್ನು ಪಾಟೀ ಸವಾಲಿಗೆ ಒಳಪಡಿಸಲು ನಿರಾಕರಿಸಿ 2022ರ ಏ.7ರಂದು ವಿಚಾರಣಾ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿತು.



ಸೆಷನ್ಸ್ ಕೋರ್ಟ್ ನಿಗದಿಪಡಿಸುವ ದಿ ಸಂತ್ರಸ್ತೆಯನ್ನು ಹೆಚ್ಚುವರಿ ಪಾಟೀ ಸವಾಲಿಗೆ ಆರೋಪಿ ಒಳಪಡಿಸಬಹುದು ಮತ್ತು ಇದೇ ಕೊನೆಯ ಅವಕಾಶವಾಗಿದ್ದು, ಸೆಷನ್ ಕೋರ್ಟ್ ನೀಡಿದ ದಿನದಂದೇ ಪಾಟೀ ಸವಾಲು ಸಂಪೂರ್ಣವಾಗಿ ಮುಗಿಸಬೇಕು. ಮತ್ತೆ ಮತ್ತೆ ಅವಕಾಶ ಕೋರುವಂತಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.



"ಪ್ರಕರಣದ ವಿಚಾರಣೆಯಲ್ಲಿ, ಅದರಲ್ಲೂ ಮುಖ್ಯವಾಗಿ 10ಕ್ಕೂ ಅಧಿಕ ವರ್ಷ ಶಿಕ್ಷೆ ವಿಧಿಸಬಹುದಾದ ಪ್ರಕರಣಗಳಲ್ಲಿ ಪಾಟೀ ಸವಾಲು ನಡೆಸುವ ಹಕ್ಕಿನಿಂದ ಆರೋಪಿಗಳು ವಂಚಿತರಾಗಬಾರದು. ಸೂಕ್ತ ಸಾಕ್ಷ್ಯಾಧಾರಗಳು ಲಭ್ಯವಿದ್ದಾಗ ಸಾಕ್ಷಿಗಳನ್ನು ಪಾಟೀ ಸವಾಲಿಗೆ ಮತ್ತೆ ಕರೆಸಿಕೊಳ್ಳಬಹುದಾಗಿದೆ" ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.


ಘಟನೆಯ ವಿವರ

2018ರ ಪ್ರಿಲ್​ನಲ್ಲಿ ತನ್ನ ಅಪ್ರಾಪ್ತ ಮಗಳ ಮೇಲೆ ಮಹಮ್ಮದ್ ಅಲಿ ಎಂಬಾತ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ಆರೋಪಿಸಿ ಸಂತ್ರಸ್ತೆಯ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ಆರೋಪಿಯ ಸೋದರತ್ತೆಯೇ ದೂರುದಾರರಾಗಿದ್ದು, ಪೊಲೀಸರು ತನಿಖೆ ನಡೆಸಿ ವಿಚಾರಣಾ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಈಗ ಪ್ರಕರಣ ಸೆಷನ್ಸ್ ಕೋರ್ಟ್​ನಲ್ಲಿ ವಿಚಾರಣಾ ಹಂತದಲ್ಲಿದೆ.


ವರ್ಷ 18ಕ್ಕಿಂತ ಕೆಳಗಿದ್ದರಷ್ಟೇ ‘ಮಗು’

ಪ್ರಕರಣ ದಾಖಲಾದ ವೇಳೆ, ಸಂತ್ರಸ್ತೆಗೆ ಕೇವಲ 15 ವರ್ಷ ಗಿತ್ತು. ಇದೀಗ, 2022ರ ಮಾ.28ರಂದು ಸಂತ್ರಸ್ತೆಯ ಪಾಟೀ ಸವಾಲಿಗೆ ಅವಕಾಶ ಕೋರಿ ಆರೋಪಿ ಅರ್ಜಿ ಸಲ್ಲಿಸಿದ್ದು, ಆ ದಿನಾಂಕದಂದು ಸಂತ್ರಸ್ತೆಯ ವಯಸ್ಸು 18 ವರ್ಷ ದಾಟಿದೆ. 



ಪೋಕ್ಸೋ ಕಾಯ್ದೆಯ ಸೆಕ್ಷನ್ 2(1)(ಡಿ)ಯಲ್ಲಿ ವ್ಯಾಖ್ಯಾನಿಸಿರುವಂತೆ 18 ವರ್ಷಕ್ಕೂ ಕಡಿಮೆ ವಯಸ್ಸಿನವರನ್ನು ‘ಮಗು’ ಎಂದು ಪರಿಗಣಿಸಲಾಗುತ್ತದೆ. ಸಂತ್ರಸ್ತೆಯ ಪ್ರಾಯ 18 ವರ್ಷ ದಾಟಿದರೆ ಕಾಯ್ದೆಯ ಸೆಕ್ಷನ್ 33(5) ಕಠಿಣತೆ ದುರ್ಬಲಗೊಳ್ಳುತ್ತದೆ. ಆಗ ಸಂತ್ರಸ್ತೆಯನ್ನು ಹೆಚ್ಚಿನ ಪಾಟೀ ಸವಾಲಿಗೆ ಒಳಪಡಿಸಲು ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ. 

Ads on article

Advertise in articles 1

advertising articles 2

Advertise under the article