
MVC ಪ್ರಕರಣ: ಮೆಡಿಕಲ್ ಬಿಲ್ ಪರಿಶೀಲನೆ ಟ್ರಿಬ್ಯೂನಲ್ ಕರ್ತವ್ಯ, ದಾರಿತಪ್ಪಿಸಿದ ವಕೀಲರ ವಿರುದ್ಧ ಕರ್ನಾಟಕ ಹೈಕೋರ್ಟ್ ಆಕ್ರೋಶ
MVC ಪ್ರಕರಣ: ಮೆಡಿಕಲ್ ಬಿಲ್ ಪರಿಶೀಲನೆ ಟ್ರಿಬ್ಯೂನಲ್ ಕರ್ತವ್ಯ, ದಾರಿತಪ್ಪಿಸಿದ ವಕೀಲರ ವಿರುದ್ಧ ಕರ್ನಾಟಕ ಹೈಕೋರ್ಟ್ ಆಕ್ರೋಶ
ರಸ್ತೆ ಅಪಘಾತ ಕುರಿತ MVC ಪ್ರಕರಣಗಳ ಇತ್ಯರ್ಥದ ಸಂದರ್ಭದಲ್ಲಿ, ಕ್ಲೇಮು ಅರ್ಜಿ ಜೊತೆಗೆ ಅರ್ಜಿದಾರರು ನೀಡುವ ಮೆಡಿಕಲ್ ಬಿಲ್ ಪರಿಶೀಲಿಸುವುದು "ಮೋಟಾರು ಅಪಘಾತ ಪರಿಹಾರ ನ್ಯಾಯ ಮಂಡಳಿ"(MACT) ಯ ಕರ್ತವ್ಯ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
2016ರಲ್ಲಿ ಕಲ್ಬುರ್ಗಿಯಲ್ಲಿ ನಡೆದ ಅಪಘಾತ ಪ್ರಕರಣವೊಂದರಲ್ಲಿ ಅರ್ಜಿದಾರರಿಗೆ 5.98 ಲಕ್ಷ ರೂ. ಪರಿಹಾರ ಘೋಷಿಸಿದ್ದ ನ್ಯಾಯಮಂಡಳಿ ಆದೇಶ ಪ್ರಶ್ನಿಸಿ ಓರಿಯೆಂಟಲ್ ವಿಮಾ ಕಂಪೆನಿ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಮೇಲ್ಮನವಿ ವಿಚಾರಣೆ ನಡೆಸಿದ ಕಲ್ಬುರ್ಗಿ ವಿಭಾಗೀಯ ಪೀಠ ರಾಜ್ಯದ ಎಲ್ಲ ನ್ಯಾಯಮಂಡಳಿಗಳಿಗೆ ಈ ಸೂಚನೆ ನೀಡಿದೆ.
ಕ್ಲೇಮು ಅರ್ಜಿ ಸಲ್ಲಿಸಿರುವ ಸಂತ್ರಸ್ತರು ತಮ್ಮ ಚಿಕಿತ್ಸೆ ಕುರಿತು ಸಲ್ಲಿಸಿದ ಬಿಲ್‌ಗಳಲ್ಲಿ ಒಂದಷ್ಟು ಕಲರ್ ನಕಲು ಪ್ರತಿ ಇವೆ. ಮೂಲ ಬಿಲ್ ಒದಗಿಸದಿರುವುದಕ್ಕೆ ಯಾವುದೇ ಕಾರಣ ನೀಡಿಲ್ಲ. ಆದರೂ, ನಕಲು ಬಿಲ್‌ಗಳನ್ನೇ ನ್ಯಾಯಮಂಡಳಿ ಪರಿಗಣಿಸಿ ಕ್ಲೇಮು ಮೊತ್ತ ನಿರ್ಧರಿಸಿದೆ. ಇದು ಸರಿಯಲ್ಲ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.
ಇದೇ ವೇಳೆ, ನ್ಯಾಯಮಂಡಳಿಗಳ ಕ್ಲೇಮು ಇತ್ಯರ್ಥ ಪ್ರಕ್ರಿಯೆಯಲ್ಲಿ ವಕೀಲರ ಪಾತ್ರವೂ ಮಹತ್ವದ್ದಾಗಿದೆ ಎಂದು ಹೈಕೋರ್ಟ್ ಹೇಳಿದೆ. ವಾದಿ ಮತ್ತು ಪ್ರತಿವಾದಿಗಳನ್ನು ಪ್ರತಿನಿಧಿಸುವ ವಕೀಲರು ಕೋರ್ಟ್‌ಗಳಿಗೆ ಸಹಕಾರಿಯಾಗಿ ವರ್ತಿಸಬೇಕು. ಇಂತಹ ಫೋಟೋ ಕಾಪಿಗಳನ್ನು ಹಾಜರುಪಡಿಸಿ ನ್ಯಾಯಮಂಡಳಿಯನ್ನು ದಾರಿತಪ್ಪಿಸಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತು.
ದೊಡ್ಡ ಮೊತ್ತದ ಕ್ಲೇಮು ಪರಿಹಾರ ದೋಚುವ ಕೆಟ್ಟ ಉದ್ದೇಶದಿಂದ ಇಂತಹ ಕೃತ್ರಿಮ ನಡೆಸಲಾಗಿದೆ. ಇದನ್ನು ಕ್ಲೇಮುದಾರರು ಮತ್ತು ಅವರ ವಕೀಲರು ಉದ್ದೇಶಪೂರ್ವಕವಾಗಿ ಮಾಡಿರುವಂತೆ ತೋರುತ್ತದೆ. ಕೆಲವು ಪ್ರತಿಗಳನ್ನು ಒಂದಕ್ಕಿಂತ ಹೆಚ್ಚು ಬಾರಿ ನೀಡಲಾಗಿದೆ. ಕ್ಲೇಮುದಾರರು ನೀಡಿರುವ 154 ಬಿಲ್‌ಗಳ ಪೈಕಿ 79 ಬಿಲ್‌ಗಳು ಮಾತ್ರ ಅಸಲಿ. ಉಳಿದವು ಜೆರಾಕ್ಸ್ ಕಾಪಿ ಎಂಬುದನ್ನು ನ್ಯಾಯಪೀಠ ಗಮನಿಸಿತು.
ಅಲ್ಲದೆ, ಟ್ರಿಬ್ಯೂನಲ್ ದಾರಿ ತಪ್ಪಿಸುವ ಉದ್ದೇಶದಿಂದ ಕ್ರಮಬದ್ಧವಾಗಿ ಬಿಲ್‌ಗಳನ್ನು ಜೋಡಿಸಿಲ್ಲ. ಪ್ರಕರಣದಲ್ಲಿ ಬಿಲ್‌ಗಳ ನೈಜತೆ ಪರಿಶೀಲಿಸಲು ನ್ಯಾಯ ಮಂಡಳಿ ಎಡವಿದೆ. ಎಲ್ಲ ಮೆಡಿಕಲ್ ಬಿಲ್ ಸತ್ಯಾಸತ್ಯತೆ ಪರಿಶೀಲಿಸುವುದು ಟ್ರಿಬ್ಯೂನಲ್ ಕರ್ತವ್ಯ ಕೂಡ ಆಗಿರುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಹಾಗೂ, ನಕಲಿ ಬಿಲ್‌ಗಳ ಮೊತ್ತವನ್ನು ಕಡಿತಗೊಳಿಸಿ ಕ್ಲೇಮು ಪರಿಹಾರವನ್ನು ಕಡಿಮೆ ಮೊತ್ತಕ್ಕೆ ಮರು ನಿರ್ಧರಿಸಿದೆ.