ಕರ್ನಾಟಕ ಸರ್ಕಾರದ ಅಧಿಸೂಚನೆ ವಿರುದ್ಧ ಧ್ವನಿ ಎತ್ತಿದ ವಕೀಲರು- ರಾಜ್ಯವ್ಯಾಪಿ ಪ್ರತಿಭಟನೆಗೆ ಸಿದ್ಧತೆ
ಕರ್ನಾಟಕ ಸರ್ಕಾರದ ಅಧಿಸೂಚನೆ ವಿರುದ್ಧ ಧ್ವನಿ ಎತ್ತಿದ ವಕೀಲರು- ರಾಜ್ಯವ್ಯಾಪಿ ಪ್ರತಿಭಟನೆಗೆ ಸಿದ್ಧತೆ
ಜನನ ಮರಣ ನೋಂದಣಿ ನ್ಯಾಯವ್ಯಾಪ್ತಿ ಕುರಿತು ಕರ್ನಾಟಕ ಸರ್ಕಾರ ದಿ. 18-07-2022ರಂದು ಹೊರಡಿಸಿರುವ ಅಧಿಸೂಚನೆಗೆ ವಕೀಲ ಸಮುದಾಯ ಆಕ್ರೋಶ ವ್ಯಕ್ತಪಡಿಸಿದೆ. ಈ ಅಧಿಸೂಚನೆ ವಿರುದ್ಧ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲು ವಕೀಲರು ಸಿದ್ಧತೆ ನಡೆಸಿದ್ದಾರೆ.
ಬೆಂಗಳೂರು ವಕೀಲರ ಸಂಘ ಅಧಿಸೂಚನೆಯನ್ನು ವಿರೋಧಿಸಿದ್ದು, ಈ ಬಗ್ಗೆ ಸಂಬಂಧಪಟ್ಟ ಸಚಿವರನ್ನು ಭೇಟಿ ಮಾಡಿ ಅಧಿಸೂಚನೆ ಹಿಂಪಡೆಯುವಂತೆ ಒತ್ತಾಯಿಸುವುದಾಗಿ ಬೆಂ.ವ.ಸಂ.ದ ಅಧ್ಯಕ್ಷ ವಿವೇಕ್ ಸುಬ್ಬಾ ರೆಡ್ಡಿ ತಿಳಿಸಿದ್ದಾರೆ.
ಜನನ, ಮರಣ ನೋಂದಣಿ ಪ್ರಕರಣಗಳನ್ನು ಉಪವಿಭಾಗಾಧಿಕಾರಿ ನ್ಯಾಯಾಲಯಕ್ಕೆ ವರ್ಗಾಯಿಸಿರುವುದು ಗಂಭೀರ ವಿಚಾರ. ಇದರಿಂದ ನ್ಯಾಯ ವ್ಯವಸ್ಥೆಗೆ, ಬಡ ನಾಗರಿಕರಿಗೆ ಮತ್ತು ವಕೀಲರಿಗೂ ಅನ್ಯಾಯವಾಗುತ್ತದೆ. ಇದರ ವಿರುದ್ಧ ಪ್ರಬಲ ಹೋರಾಟಕ್ಕೆ ನಾವು ಸಿದ್ಧರಿದ್ದೇವೆ ಎಂದು ವಿವೇಕ್ ಸುಬ್ಬಾ ರೆಡ್ಡಿ ಹೇಳಿದ್ದಾರೆ.
ಸಾಮಾಜಿಕ ಭದ್ರತೆ ಹಾಗೂ ಹಿತದೃಷ್ಟಿಯಿಂದ ಈ ಪ್ರಕರಣಗಳನ್ನು ನ್ಯಾಯಾಧೀಶರೇ ತೀರ್ಮಾನಿಸಬೇಕು. ಇದನ್ನು ಕಂದಾಯ ಅಧಿಕಾರಿಗಳಿಗೆ ನೀಡಬಾರದು ಎಂದು ಅವರು ಹೇಳಿದ್ದಾರೆ.
ಹುಬ್ಬಳ್ಳಿ, ಮೈಸೂರು, ಕೋಲಾರ, ಹಾಸನ, ಬಾಗಲಕೋಟೆ ಸೇರಿದಂತೆ ರಾಜ್ಯದ ವಿವಿಧೆಡೆ ವಕೀಲರ ಸಂಘದ ಸದಸ್ಯರು ಸಭೆ ಸೇರಿ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಲು ನಿರ್ಧರಿಸಿದ್ದಾರೆ.
ಇದನ್ನೂ ಓದಿ:-
ಜನನ ಮರಣ ನೋಂದಣಿ ತಿದ್ದುಪಡಿ: ಜೆಎಂಎಫ್‌ಸಿ ನ್ಯಾಯಾಲಯದ ಬದಲು ಎಸಿ ಕೋರ್ಟ್ ವ್ಯಾಪ್ತಿಗೆ