ಪರಸ್ಪರ ಒಪ್ಪಿಗೆ ಹೊರತಾಗಿ, ಪ್ರಾಪ್ತ ವಯಸ್ಕರ ಮದುವೆಗೆ ಕುಟುಂಬ, ಜಾತಿ, ಸಮುದಾಯದ ಸಮ್ಮತಿ ಅನಗತ್ಯ: ಕಾಶ್ಮೀರ ಹೈಕೋರ್ಟ್
ಪರಸ್ಪರ ಒಪ್ಪಿಗೆ ಹೊರತಾಗಿ, ಪ್ರಾಪ್ತ ವಯಸ್ಕರ ಮದುವೆಗೆ ಕುಟುಂಬ, ಜಾತಿ, ಸಮುದಾಯದ ಸಮ್ಮತಿ ಅನಗತ್ಯ: ಕಾಶ್ಮೀರ ಹೈಕೋರ್ಟ್
ಜೀವನ ಸಂಗಾತಿಯಾಗಿ ಬಾಳಲು ಇಚ್ಚಿಸುವ ಪ್ರಾಪ್ತ ವಯಸ್ಸಿನ ಯುವ ಜೋಡಿಗಳು ಪರಸ್ಪರ ಸಮ್ಮತಿ ಇದ್ದರೆ ಸಾಕು. ಅದರ ಹೊರತಾಗಿ ತಮ್ಮ ಕುಟುಂಬ ಜಾತಿ, ಸಮುದಾಯದ ಒಪ್ಪಿಗೆ ಅಗತ್ಯವಿಲ್ಲ ಎಂದು ಜಮ್ಮು ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್ ತೀರ್ಪು ನೀಡಿದೆ.
ಪ್ರಾಪ್ತ ವಯಸ್ಕರಿಬ್ಬರು ಒಮ್ಮತದಿಂದ ಪರಸ್ಪರ ಜೀವನ ಸಂಗಾತಿಯನ್ನಾಗಿ ಆರಿಸಿಕೊಂಡರೆ ಸಾಕು. ಅವರ ಕುಟುಂಬದ ಸದಸ್ಯರ ಒಪ್ಪಿಗೆ ಅಗತ್ಯವಿಲ್ಲ ಎಂದು ಹೈಕೋರ್ಟ್ ತೀರ್ಪಿನಲ್ಲಿ ಹೇಳಿದೆ.
ಪ್ರಕರಣ: ಕುಲ್ಸುಮ್ ಬಾನೋ Vs ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ
ಜಮ್ಮು ಹೈಕೋರ್ಟ್
ಪ್ರಾಪ್ತ ವಯಸ್ಕರು ಒಬ್ಬರನ್ನೊಬ್ಬರು ಮದುವೆಯಾಗಲು ನಿರ್ಧರಿಸಿದ್ದಾಗ ಅವರಿಬ್ಬರ ಒಪ್ಪಿಗೆಯನ್ನು ಮಾತ್ರ ಪ್ರಾಥಮಿಕವಾಗಿ ಪರಿಗಣಿಸಬೇಕಾಗುತ್ತದೆ ಎಂದು ನ್ಯಾ. ಎಂ ಎ ಚೌಧರಿ ನೇತೃತ್ವದ ಏಕ ಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.
'ಪರಸ್ಪರ ಒಮ್ಮತದಿಂದ ಬಾಳ ಸಂಗಾತಿಗಳಾಗಲು ಒಬ್ಬರನ್ನೊಬ್ಬರು ಆರಿಸಿಕೊಂಡಾಗ, ಅದು ಅವರ ಆಯ್ಕೆಯ ಬದುಕು ಆಗಿರುತ್ತದೆ. ಇದು ಭಾರತ ಸಂವಿಧಾನದ 19 ಮತ್ತು 21 ನೇ ವಿಧಿಯ ಅಡಿಯಲ್ಲಿ ಮಾನ್ಯತೆ ಪಡೆದಿದೆ. ಇಂತಹ ಹಕ್ಕು ಸಾಂವಿಧಾನಿಕ ಸಮ್ಮತಿ ಪಡೆದಿದೆ. ಮತ್ತು ಆ ಹಕ್ಕನ್ನು ರಕ್ಷಿಸುವ ಅಗತ್ಯವಿದೆ. ಮತ್ತು ಅದು ಜಾತಿ, ಗೌರವ ಅಥವಾ ಸಮೂಹ ಚಿಂತನೆಯ ಪರಿಕಲ್ಪನೆಗೆ ತುತ್ತಾಗುವಂತಿಲ್ಲ. ಪ್ರಾಪ್ತ ವಯಸ್ಕರಿಬ್ಬರು ಮದುವೆಯಾಗಲು ಒಪ್ಪಿಕೊಂಡ ನಂತರ ಕುಟುಂಬ ಅಥವಾ ಸಮುದಾಯ ಇಲ್ಲವೇ ಜಾತಿಯ ಒಪ್ಪಿಗೆ ಅಗತ್ಯವಿಲ್ಲ ಈ ಸಮ್ಮತಿಗೆ ಧರ್ಮನಿಷ್ಠೆಯಿಂದ ಪ್ರಾಧಾನ್ಯತೆ ನೀಡಬೇಕು” ಎಂದು ನ್ಯಾಯಾಧೀಶರು ಹೇಳಿದರು.
ಇಬ್ಬರು ಪ್ರಾಪ್ತ ವಯಸ್ಕರು ಪರಸ್ಪರ ಮೆಚ್ಚಿಕೊಂಡು ಮುಸ್ಲಿಮ್ ಸಂಪ್ರದಾಯದಂತೆ ಆದರೆ ಕುಟುಂಬದವರ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದರು. ಅವರು ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ಹೈಕೋರ್ಟ್ ನಡೆಸಿತು. ನೆಂಟರಿಷ್ಟರು, ಕುಟುಂಬಸ್ಥರು ತಮ್ಮ ಮೇಲೆ ಹಲ್ಲೆ ನಡೆಸಬಹುದು, ಇಲ್ಲವೇ ಹಾನಿ ಮಾಡಬಹುದು ಎಂದು ಆತಂಕಗೊಂಡು ಯುವ ಜೋಡಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.