'ನಡೆಯದ ಕಲಾಪ' ಸೃಷ್ಟಿ- ಸಿವಿಲ್ ನ್ಯಾಯಾಧೀಶರಿಗೆ ಕಡ್ಡಾಯ ನಿವೃತ್ತಿ: ಸರ್ಕಾರದ ಆದೇಶ ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್
'ನಡೆಯದ ಕಲಾಪ' ಸೃಷ್ಟಿ- ಸಿವಿಲ್ ನ್ಯಾಯಾಧೀಶರಿಗೆ ಕಡ್ಡಾಯ ನಿವೃತ್ತಿ: ಸರ್ಕಾರದ ಆದೇಶ ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್
ವಾಸ್ತವವಾಗಿ ನಡೆಯದೇ ಇರುವ ಕೋರ್ಟ್ ಕಲಾಪವನ್ನು ಸೃಷ್ಟಿಸಿ ಆದೇಶಕ್ಕೆ ಸಹಿ ಹಾಕಿದ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಸಿವಿಲ್ ನ್ಯಾಯಾಧೀಶರನ್ನು ಕಡ್ಡಾಯ ನಿವೃತ್ತಿಗೆ ಆದೇಶಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿದಿದೆ.
ಪ್ರಕರಣ: ಶಿವಾನಂದ ಲಕ್ಷ್ಮಣ ಅಂಚಿ Vs ಕರ್ನಾಟಕ ಸರ್ಕಾರ
ಕರ್ನಾಟಕ ಹೈಕೋರ್ಟ್: WP 16983/2021 Dated 3-06-2022
ತಮ್ಮನ್ನು ಕಡ್ಡಾಯ ನಿವೃತ್ತಿಗೆ ಕಳುಹಿಸಿದ ರಾಜ್ಯ ಸರ್ಕಾರದ 22-03-2021ರ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರಾಗಿರುವ ನ್ಯಾಯಾಧೀಶರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.
ಕೋರ್ಟ್ ಕಲಾಪಗಳು ಅತ್ಯಂತ ಪವಿತ್ರ ಕಾರ್ಯ ಮತ್ತು ನಡವಳಿ ಎಂಬುದನ್ನು ಗಮನಿಸುವುದು ಪ್ರಸ್ತುತವಾಗಿದೆ. ಹಿಂದಿನ ದಿನದ ಆದೇಶ ಹಾಳೆ (ಆರ್ಡರ್ ಶೀಟ್)ಗಳನ್ನು ಸಿದ್ಧಪಡಿಸುವಂತೆ ಬೆಂಚ್ ಕ್ಲರ್ಕ್‌ಗೆ ಸೂಚಿಸುವ ಮೂಲಕ ಮತ್ತು ಮರುದಿನ ಅಂತಹ ಅವಾಸ್ತವಿಕ ಕೋರ್ಟ್ ಆದೇಶಕ್ಕೆ ಸಹಿ ಮಾಡುವ ಮೂಲಕ ಅರ್ಜಿದಾರರು ತಮ್ಮ ಕರ್ತವ್ಯದ ಗಂಭೀರ ಲೋಪ ಎಸಗಿದ್ದಾರೆ ಎಂದು ಹೈಕೋರ್ಟ್ ಗಮನಿಸಿತು.
"ವಾಸ್ತವವಾಗಿ ನಡೆಯದಿರುವ ಕಲಾಪವನ್ನು ಆರ್ಡರ್ ಶೀಟ್‌ನಲ್ಲಿ ದಾಖಲಿಸುವುದು ನ್ಯಾಯಾಲಯದ ಪವಿತ್ರ ಪ್ರಕ್ರಿಯೆಯನ್ನುಅಸಹ್ಯಗೊಳಿಸಿದೆ. ನ್ಯಾಯಾಂಗ ಅಧಿಕಾರಿ ಯಾ ನ್ಯಾಯಾಧೀಶರೊಬ್ಬರ ಇಂತಹ ನಡವಳಿಕೆಯನ್ನು ಸರ್ವಥಾ ಒಪ್ಪಲು ಸಾಧ್ಯವಿಲ್ಲ. ಇದೊಂದು ಗಂಭೀರ ಪ್ರಕರಣವಾಗಿದೆ. ಇದನ್ನು ಅನುಮತಿಸಿದರೆ, ನ್ಯಾಯಾಲಯದ ಕಲಾಪಗಳಿಗೆ ಯಾವುದೇ ಪಾವಿತ್ರ್ಯತೆ ಇರುವುದಿಲ್ಲ. ಆದ್ದರಿಂದ, ಇಂತಹ ಪ್ರಕರಣದಲ್ಲಿ ಅತ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ" ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.
ಪ್ರಕರಣದ ವಿವರ:
ಅರ್ಜಿದಾರರು ಏಪ್ರಿಲ್ 2014 ರಲ್ಲಿ ಕಿರಿಯ ವಿಭಾಗದ ದಿವಾಣಿ ನ್ಯಾಯಾಧೀಶರಾಗಿ ನೇಮಕವಾದರು. 2019 ರಲ್ಲಿ ಹೊರಡಿಸಲಾದ ಅಧಿಸೂಚನೆ ಪ್ರಕಾರ, ಅವರನ್ನು ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ, ವಿರಾಜಪೇಟೆ ನ್ಯಾಯಾಲಯಕ್ಕೆ ನ್ಯಾಯಾಧೀಶರಾಗಿ ನೇಮಿಸಲಾಯಿತು. ಅಧಿಸೂಚನೆಯ ನಿರ್ದೇಶನದ ಪ್ರಕಾರ ಅವರು ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ, ಪೊನ್ನಂಪೇಟೆ ನ್ಯಾಯಾಲಯದಲ್ಲಿ ವಾರದ ಪ್ರತಿ ಸೋಮವಾರ, ಮಂಗಳವಾರ ಮತ್ತು ಬುಧವಾರದಂದು ಕಲಾಪ ನಡೆಸುವಂತೆ ಸೂಚಿಸಲಾಗಿತ್ತು.
ಜೂನ್ 27, 2019 ರಂದು, ಕೊಡಗು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು (PDJ) ಸದ್ರಿ ನ್ಯಾಯಾಲಯಕ್ಕೆ ದಿಢೀರ್ ಭೇಟಿ ನೀಡಿದರು. ಆಗ ಅರ್ಜಿದಾರರಾದ ನ್ಯಾಯಾಧೀಶರು ಜೂನ್ 27ರಂದು ಹಿಂದಿನ ದಿನದ ಆದೇಶ ಪತ್ರಗಳಿಗೆ ಸಹಿ ಮಾಡಿ ಜೂನ್ 26 ಎಂದು ದಿನಾಂಕವನ್ನು ಹಾಕುತ್ತಿರುವುದು ಗಮನಕ್ಕೆ ಬಂದಿತು.
ಹಾಜರಿ ಪುಸ್ತಕದಲ್ಲೂ ಸಹಿ ಹಾಕಿರಲಿಲ್ಲ. ಅದಕ್ಕೆ ಪ್ರಶ್ನಾರ್ಥಕ ಚಿಹ್ನೆ ಹಾಕಿ, ನಡೆಯದ ಕಲಾಪ ಸೃಷ್ಟಿ ಮಾಡಲಾದ ಆದೇಶ ಹಾಳೆಗಳನ್ನು PDJಯವರು ವಶಕ್ಕೆ ತೆಗೆದುಕೊಂಡರು. ಅವರು ನೀಡಿದ ವರದಿಯ ಆಧಾರದಲ್ಲಿ ಆರೋಪಪಟ್ಟಿ ಮಾಡಲಾಯಿತು. ಆಂತರಿಕ ವಿಚಾರಣೆಯಲ್ಲಿ ಆರೋಪ ಸಾಬೀತಾಗಿದ್ದು, ಎರಡನೇ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿತ್ತು. ಅದಕ್ಕೆ ಅರ್ಜಿದಾರರು ಲಿಖಿತ ಉತ್ತರ ಸಲ್ಲಿಸಿದ್ದರು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅರ್ಜಿದಾರರನ್ನು ಮಾರ್ಚ್ 22ರಂದು ಕಡ್ಡಾಯ ನಿವೃತ್ತಿ ಘೋಷಿಸಲಾಯಿತು.
ಪ್ರಕರಣದಲ್ಲಿ ಬೆಂಚ್ ಕ್ಲರ್ಕ್‌ನ ಸಾಕ್ಷಿ ಪ್ರಮುಖವಾಗಿತ್ತು. ವಿಪರೀತ ಮಳೆ ಇದ್ದ ಕಾರಣ ಮತ್ತು ತಂದೆಯ ಅಸೌಖ್ಯದಿಂದ ಪೊನ್ನಂಪೇಟೆಗೆ ಹೋಗಿದ್ದರೂ ನ್ಯಾಯಾಂಗ ಕಲಾಪವನ್ನು ನಡೆಸಲಾಗಲಿಲ್ಲ ಮತ್ತು ಅರ್ಧ ದಿನ ರಜೆಯಲ್ಲಿ ಇರಬೇಕಾಯಿತು ಎಂಬುದನ್ನು ಸ್ವತಃ ಅರ್ಜಿದಾರರು ಒಪ್ಪಿಕೊಂಡಿದ್ದರು.
ಮರು ದಿನ ಜಿಲ್ಲಾ ಪ್ರಧಾನ ನ್ಯಾಯಾಧೀಶರು ಅರ್ಜಿದಾರರ ನ್ಯಾಯಾಲಯಕ್ಕೆ ದಿಡೀರ್ ಭೇಟಿ ನೀಡಿದಾಗ, ಅರ್ಜಿದಾರರು ಹಿಂದಿನ ದಿನದ ಆದೇಶ ಹಾಳೆಗಳಿಗೆ ಸಹಿ ಹಾಕುತ್ತಿದ್ದರು. ಸಹಿ ಹಾಕದ ಆದೇಶ ಹಾಳೆಗಳನ್ನು ತಮ್ಮ ಸುಪರ್ದಿಗೆ ಪಡೆದ ಜಿಲ್ಲಾ ನ್ಯಾಯಾಧೀಶರು ಸಹಿ ಹಾಕದ ಆದೇಶ ಹಾಳೆಗಳನ್ನು ನಕಲಿಸಿದ ನಂತರ ಬೆಂಚ್ ಕ್ಲರ್ಕ್‌ಗೆ ಹಿಂತಿರುಗಿಸಿದರು.
ಪ್ರಕರಣದಲ್ಲಿ, ಇಲಾಖಾ ವಿಚಾರಣೆಯಲ್ಲಿ ಬೆಂಚ್ ಕ್ಲರ್ಕ್ ಸಾಕ್ಷಿ ನುಡಿದರು. ಪೊನ್ನಂಪೇಟೆ ಮತ್ತು ವಿರಾಜಪೇಟೆ ನ್ಯಾಯಾಲಯದ ಶಿರಸ್ತೆದಾರರೂ ಸಾಕ್ಷಿ ಹೇಳಿದರು. ಅರ್ಜಿದಾರರು ಪಾಟಿ ಸವಾಲು ಮಾಡಲಿಲ್ಲ ಮತ್ತು ತಮ್ಮ ಪರ ಯಾವುದೇ ಸಾಕ್ಷ್ಯವನ್ನು ಹಾಜರುಪಡಿಸಲಿಲ್ಲ.