ನ್ಯಾಯಪೀಠದ ಬಗ್ಗೆ ಲಘುವಾಗಿ ಮಾತನಾಡುವ ವಕೀಲರ ವಿರುದ್ಧ ಕ್ರಮ: ವಕೀಲರ ಸಂಘಕ್ಕೆ ಹೈಕೋರ್ಟ್ ಸೂಚನೆ
ನ್ಯಾಯಪೀಠದ ಬಗ್ಗೆ ಲಘುವಾಗಿ ಮಾತನಾಡುವ ವಕೀಲರ ವಿರುದ್ಧ ಕ್ರಮ: ವಕೀಲರ ಸಂಘಕ್ಕೆ ಹೈಕೋರ್ಟ್ ಸೂಚನೆ
ನ್ಯಾಯಪೀಠದ ಬಗ್ಗೆ ವೃಥಾ ನಿಂದನೆ, ಆಧಾರರಹಿತ ಆರೋಪ ಮಾಡುವ ವಕೀಲರ ವಿರುದ್ಧ ಸನದು ವಜಾ ಸೇರಿದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ನ್ಯಾಯಮೂರ್ತಿ ಬಿ. ವೀರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಸಿಜೆ ಋತುರಾಜ ಅವಸ್ತಿ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ನ್ಯಾಯಮೂರ್ತಿಗಳ ವಿರುದ್ಧ ಲಘುವಾಗಿ ಮತ್ತು ಆಧಾರರಹಿತವಾಗಿ ಮಾತನಾಡುವ ವಕೀಲರ ವಿರುದ್ಧ ಕ್ರಮ ಕೈಗೊಳ್ಳುವ ಸಮಯ ಬಂದಿದೆ ಎಂದು ಹೇಳಿದ್ದಾರೆ.
ನ್ಯಾಯಪೀಠದ ಬಗ್ಗೆ, "ಆ ನ್ಯಾಯಮೂರ್ತಿ ಸರಿಯಿಲ್ಲ ಈ ನ್ಯಾಯಮೂರ್ತಿ ಸರಿಯಿಲ್ಲ... ಅವರ ಪ್ರಮೋಷನ್‌ಗೆ ಅಷ್ಟು ಖರ್ಚು ಮಾಡಿದ್ದಾರೆ ಎಂಬ ಕೇವಲವಾದ, ಲಘುವಾದ ಮಾತುಗಳನ್ನು ವಕೀಲರು ಯಾಕೆ ಮಾತಾಡ್ತಾರೆ? ಇನ್ನೊಬ್ಬರ ವೈಯಕ್ತಿಕ ವಿಚಾರದ ಬಗ್ಗೆ ನಾವ್ಯಾಕೆ ಮಾತಾಡ್ಬೇಕು? ನ್ಯಾಯಾಂಗದ ಬಗ್ಗೆ ಅಪಾರ ನಂಬಿಕೆಯಿಂದ ಕೋರ್ಟ್‌ಗೆ ಬರುವ ಕಕ್ಷಿದಾರರಿಗೆ ನ್ಯಾಯ ಕೊಡಿಸುವುದು ನಮ್ಮ ಉದ್ದೇಶವಾಗಿರಬೇಕು" ಎಂದರು.
ಗುರುವಾರ ಕೋರ್ಟ್ ಕಲಾಪದ ವೇಳೆ, ವಕೀಲರೊಬ್ಬರು ದುರ್ವತನನೆ ತೋರಿದ್ದು, ಅದಕ್ಕೆ ಬೆಂ.ವ.ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿಯವರೂ ಸಾಕ್ಷಿಯಾಗಿದ್ದಾರೆ ಎಂದು ನ್ಯಾ. ವೀರಪ್ಪ ಸಭೆಯಲ್ಲಿ ಹೇಳಿದರು.
"ಬಹಳ ಬೇಸರದಿಂದ ಹೇಳುತ್ತಿದ್ದೇನೆ. ನನ್ನದು ತಪ್ಪಿದ್ದರೆ ಹೇಳಿ, ಹೈಕೋರ್ಟ್ ಮತ್ತು ವಿಧಾನಸೌಧದ ಮಧ್ಯೆ ನಿಂತು ಎಲ್ಲ ವಕೀಲರ ಸಮ್ಮುಖದಲ್ಲಿ ನನ್ನ ತಲೆ ಕಡಿದು ವಕೀಲರ ಕೈಗೆ ಇಡಲು ನಾನು ಸಿದ್ಧ" ಎಂದು ಬೇಸರದಿಂದ ನುಡಿದರು.
"ಇಂತಹ ದುರ್ವತನೆ ತೋರುವ ವಕೀಲರ ಸನದು ರದ್ದು ಮಾಡಬೇಕು, ವಕೀಲರ ಸಂಘದಿಂದ ವಜಾ ಮಾಡಬೇಕು. ಇದನ್ನು ನಾನು ರಾಜ್ಯ ವಕೀಲರ ಪರಿಷತ್‌ಗೂ ತಿಳಿಸಿದ್ದೇನೆ. ನಮ್ಮ ತಪ್ಪನ್ನು ಸರಿಪಡಿಸಿಕೊಳ್ಳಲು ಇದು ಸರಿಯಾದ ಸಮಯ. ವಕೀಲರಾಗಲಿ, ನ್ಯಾಯಮೂರ್ತಿಗಳಾಲಿ ಒಬ್ಬರನ್ನು ಆಧಾರರಹಿತವಾಗಿ ನಿಂದಿಸಬಾರದು. ಅಂಥವರು ಪವಿತ್ರ ಸಂಸ್ಥೆಯನ್ನು ನಾಶ ಮಾಡುತ್ತಾರೆ” ಎಂದು ಕಿವಿಮಾತು ಹೇಳಿದರು.
"ವಕೀಲರ ಸಂಘದ ಜೊತೆಗೆ (ನಿಮ್ಮೊಂದಿಗೆ) ನಾವಿದ್ದೇನೆ. ಆದರೆ, ನಮ್ಮನ್ನು ಕಾಪಾಡಲು ಯಾರಿದ್ದಾರೆ...? ನಾವು ಗಾಜಿನ ಮನೆಯಲ್ಲಿದ್ದೇವೆ. ನಮ್ಮ ರಕ್ಷಣೆ ಹೇಗೆ ಮಾಡಿಕೊಳ್ಳಬೇಕು ಎಂಬುದು ನಮಗೆ ಗೊತ್ತಿದೆ. ಮಹಾಭಾರತದಲ್ಲಿ ಶ್ರೀಕೃಷ್ಣ 'ಸುದರ್ಶನ ಚಕ್ರ' ಪ್ರಯೋಗಿಸಿದಂತೆ ನಾವು ಜಡ್ಜ್‌ಗಳು ನಮ್ಮ ಅಸ್ತ್ರ ಬಳಸುತ್ತೇವೆ. ಯಾವುದೋ ಒಬ್ಬ ನ್ಯಾಯಮೂರ್ತಿ ಅಥವಾ ಒಬ್ಬ ವಕೀಲರಿಂದ ಪವಿತ್ರವಾದ ನ್ಯಾಯ ವ್ಯವಸ್ಥೆ ಹಾಳಾಗಬಾರದು. ದುರ್ವರ್ತನೆ ತೋರಿದ ಸಂಬಂಧಪಟ್ಟ ವಕೀಲರ ವಿರುದ್ಧ 'ನ್ಯಾಯಾಂಗ ನಿಂದನೆ' ಪ್ರಕ್ರಿಯೆ ಶುರುವಾಗಿದೆ. ಅವರನ್ನು ಕರೆದು ಸಮಸ್ಯೆ ಪರಿಹರಿಸಿ, ಇಲ್ಲವೇ ನಾವು ಸರಿಪಡಿಸಬೇಕಾಗುತ್ತದೆ” ಎಂದು ನ್ಯಾ. ವೀರಪ್ಪ ಎಚ್ಚರಿಸಿದರು.