ಜಡ್ಜ್ ವಿರುದ್ಧವೇ ನ್ಯಾಯಾಂಗ ನಿಂದನೆ; ಅಪರೂಪದ ಪ್ರಕರಣಕ್ಕೆ ಸಾಕ್ಷಿಯಾದ ಮುಂಬೈ ಹೈಕೋರ್ಟ್- ತೀರ್ಪು ಬಗ್ಗೆ ಒಂದು ಟಿಪ್ಪಣಿ
ಜಡ್ಜ್ ವಿರುದ್ಧವೇ ನ್ಯಾಯಾಂಗ ನಿಂದನೆ; ಅಪರೂಪದ ಪ್ರಕರಣಕ್ಕೆ ಸಾಕ್ಷಿಯಾದ ಮುಂಬೈ ಹೈಕೋರ್ಟ್- ತೀರ್ಪು ಬಗ್ಗೆ ಒಂದು ಟಿಪ್ಪಣಿ
ಮುಂಬೈ ಹೈಕೋರ್ಟ್‌ನಲ್ಲಿ ಜಡ್ಜ್ ವಿರುದ್ಧವೇ ನ್ಯಾಯಾಂಗ ನಿಂದನೆ ಪ್ರಕರಣ ಹೂಡಲಾಗಿದ್ದು, ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ನ್ಯಾಯಾಧೀಶರ ವಿರುದ್ಧ ಮಹತ್ವದ ತೀರ್ಪು ಪ್ರಕಟಿಸಿದೆ.
ಚಿಪ್ಲೂಲ್, ರತ್ನಗಿರಿ ಮತ್ತು ಖೇಡ್ ನ್ಯಾಯಾಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ವಕೀಲರಾದ ಯೋಗೇಶ್ ವಾಮನ್ ಅಥವಳೆ ಮುಂಬೈ ಹೈಕೋರ್ಟ್‌ನಲ್ಲಿ ರತ್ನಗಿರಿಯ ಜಿಲ್ಲೆಯ ನ್ಯಾಯಾಧೀಶರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ್ದರು.
ಪ್ರಕರಣ: ಯೋಗೇಶ್ ವಾಮನ್ ಅಥವಳೆ Vs ವಿಕ್ರಮ್ ಆಬಸಾಹೇಬ್ ಜಾಧವ್ ಮತ್ತು ಇತರರು
ಮುಂಬೈ ಹೈಕೋರ್ಟ್, Contempt Petition No. 127/2019 Dated 3-12-2020
ಪ್ರಕರಣದ ವಿವರ:
ವಕೀಲರು ಎದುರುದಾರರ ನ್ಯಾಯಪೀಠದ ಮುಂದೆ ವಾದ ಮಂಡಿಸಿದ ಪ್ರಕರಣದಲ್ಲಿ ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ತೋರಿ ಪ್ರತಿಕೂಲ ತೀರ್ಪನ್ನು ನೀಡಿರುತ್ತಾರೆ. ತಾವು ಪ್ರತಿನಿಧಿಸಿದ ಪ್ರಕರಣದಲ್ಲಿ ತಮ್ಮ ವಾದಕ್ಕೆ ಪೂರಕವಾಗಿ ಈ ಹಿಂದೆ ಉನ್ನತ ನ್ಯಾಯಾಲಯಗಳು ನೀಡಿದ ತೀರ್ಪಿನ ಪ್ರತಿಗಳು, ಸೈಟೇಷನ್‌ಗಳನ್ನು ವಕೀಲರು ನ್ಯಾಯಪೀಠಕ್ಕೆ ಒದಗಿಸಿದ್ದರೂ ಅದನ್ನು ಎದುರುದಾರರು ಕಡೆಗಣಿಸಿದ್ದಾರೆ ಎಂದು ಹೈಕೋರ್ಟ್ ಮುಂದೆ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯಲ್ಲಿ ವಾದಿಯವರು ದೂರಿದ್ದರು.
ಇಂತಹ ನಾಲ್ಕು ಪ್ರಕರಣಗಳ ವಿವರವನ್ನು ಅವರು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದರು. ಈ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾಯಪೀಠ, ನ್ಯಾಯಾಧೀಶರಿಂದ ನ್ಯಾಯದಾನದಲ್ಲಿ ಲೋಪವಾಗಿರುವುದು ನಿಜ. ಆದರೆ, ಅದು ಅವರ ಉದ್ದೇಶಪೂರ್ವಕ ಲೋಪ ಎಂದು ಹೇಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಹೈಕೋರ್ಟ್ ಕಡೆಯಿಂದ ಎದುರುದಾರ ನ್ಯಾಯಾಧೀಶರಿಗೆ ಸೂಕ್ತ ತಿಳುವಳಿಕೆ ನೀಡಿ, ಮುಂದೆ ಈ ರೀತಿಯ ಲೋಪವಾಗದಂತೆ ನೋಡಿಕೊಳ್ಳಬೇಕು ಮತ್ತು ಎದುರುದಾರರ ನ್ಯಾಯದಾನದ ಬಗ್ಗೆ ಜಿಲ್ಲಾ ನ್ಯಾಯಾಧೀಶರು ಕಠಿಣವಾದ ಮೇಲುಸ್ತುವಾರಿ ನಡೆಸಬೇಕು ಎಂಬ ಸೂಚನೆಯೊಂದಿಗೆ ಪ್ರಕರಣವನ್ನು ನ್ಯಾಯಪೀಠ ಇತ್ಯರ್ಥಗೊಳಿಸಿತು.
ತೀರ್ಪಿನ ಪ್ರತಿ
ಯೋಗೇಶ್ ವಾಮನ್ ಅಥವಳೆ Vs ವಿಕ್ರಮ್ ಆಬಸಾಹೇಬ್ ಜಾಧವ್ ಮತ್ತು ಇತರರು