ನ್ಯಾಯಾಂಗ ಇಲಾಖೆಯ ಕಾನೂನು ಪದವೀಧರ ನೌಕರರಿಗೆ ಸಿವಿಲ್ ಜಡ್ಜ್ ಆಗುವ ಅವಕಾಶ!
ನ್ಯಾಯಾಂಗ ಇಲಾಖೆಯ ಕಾನೂನು ಪದವೀಧರ ನೌಕರರಿಗೆ ಸಿವಿಲ್ ಜಡ್ಜ್ ಆಗುವ ಅವಕಾಶ!
ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು ಕಾನೂನು ಪದವಿ ಪಡೆದಿರುವ ನೌಕರರಿಗೆ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗುವ ಅವಕಾಶ ಕಳೆದ ಕೆಲವು ವರ್ಷಗಳಿಂದ ಲಭಿಸಿದೆ.
ನ್ಯಾಯಾಧೀಶರಾಗಿ ಆಯ್ಕೆಯಾಗಿರುವ ಬೆಂಗಳೂರು ನಗರ ಸಿವಿಲ್ ನ್ಯಾಯಾಲಯದಲ್ಲಿ ಶಿರಸ್ತೆದಾರ್ ಆಗಿ ಸೇವೆ ಸಲ್ಲಿಸುತ್ತಿರುವ ಜಿ. ಮಹಾಲಕ್ಷ್ಮಿ ಅವರನ್ನು ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖೆ ನೌಕರರ ಸಂಘದ ವತಿಯಿಂದ ಬೆಂಗಳೂರು ಸಿಟಿ ಸಿವಿಲ್ ಕೋರ್ಟಿನ ಪ್ರಧಾನ ಸಿಟಿ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಸನ್ಮಾನ್ಯ ಶ್ರೀ ಸಿ.ಎಂ. ಜೋಶಿ ಸಾಹೇಬರು ಸನ್ಮಾನಿಸಿರುವ ವಿಷಯ ತಿಳಿದು ಸಂತೋಷವಾಯಿತು.
ಮೂರುವರೆ ದಶಕಗಳ ಹಿಂದೆ ನ್ಯಾಯಾಂಗ ಇಲಾಖೆಯಲ್ಲಿ ಡಿ ದರ್ಜೆ ನೌಕರಿಗೆ ಸೇರಿದ ವ್ಯಕ್ತಿ ತನ್ನ ವಿದ್ಯಾರ್ಹತೆಯ ಆಧಾರದ ಮೇಲೆ ಒಂದೊಂದೇ ಬಡ್ತಿ ಹುದ್ದೆಯನ್ನು ಅಲಂಕರಿಸಿ ಜಿಲ್ಲಾ ನ್ಯಾಯಾಧೀಶರಾಗಿ ನಿವೃತ್ತಿ ಹೊಂದಿದ್ದರು ಎಂಬ ವಿಷಯವನ್ನು ಕೇಳಿದ್ದಲ್ಲಿ ತಮಗೆ ಬಹಳಷ್ಟು ಆಶ್ಚರ್ಯವಾಗಬಹುದು.
ಕಾನೂನು ಪದವಿ ಪಡೆದ ನ್ಯಾಯಾಂಗ ಇಲಾಖೆ ನೌಕರರಿಗೆ ಸಿವಿಲ್ ನ್ಯಾಯಾಧೀಶರ ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆ ಹಾಜರಾಗುವ ಅವಕಾಶ ಹಿಂದಿನಿಂದಲೂ ಇತ್ತು.
90 ರ ದಶಕದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಆಗಿದ್ದ ದಿವಂಗತ ರಾಮಕೃಷ್ಣ ಹೆಗಡೆ ಸರಕಾರದಲ್ಲಿ ಕಾನೂನು ಸಚಿವರಾಗಿದ್ದ ಪ್ರೊಫೆಸರ್ ಲಕ್ಷ್ಮಿ ಸಾಗರ್ ಅವರ ಅವಧಿಯಲ್ಲಿ ನ್ಯಾಯಾಂಗ ಇಲಾಖೆಯ ನೌಕರರು ನ್ಯಾಯಾಧೀಶರಾದಲ್ಲಿ ದಕ್ಷತೆಯಿಂದ ಮತ್ತು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಲು ಕಷ್ಟ ಸಾಧ್ಯವಾಗುವುದು ಎಂಬ ಅಸಂಬದ್ಧ ವಾದವನ್ನು ಸಂಪುಟ ಸಭೆಯಲ್ಲಿ ಮಂಡಿಸಿ ಸಿವಿಲ್ ನ್ಯಾಯಾಧೀಶರ ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತಂದು ಕಾನೂನು ಪದವಿ ಪಡೆದ ನ್ಯಾಯಾಂಗ ಇಲಾಖೆಯ ನೌಕರರು ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗದಂತೆ ನಿರ್ಬಂಧಿಸಿದರು.
90ರ ದಶಕದಲ್ಲಿ ಮಾಡಿದ ಈ ನಿರ್ಬಂಧ 2008 ರ ವರೆಗೆ ಮುಂದುವರೆಯಿತು. ಈ ಅವಧಿಯಲ್ಲಿ ಕಾನೂನು ಪದವಿ ವ್ಯಾಸಂಗವನ್ನು ಪೂರೈಸಿದ ಹಲವಾರು ನ್ಯಾಯಾಂಗ ನೌಕರರು ಸಿವಿಲ್ ನ್ಯಾಯಾಧೀಶರಾಗುವ ಅವಕಾಶದಿಂದ ವಂಚಿತರಾದರು. ಆದರೆ ಈ ನಿರ್ಬಂಧ ನೆರೆಯ ಕೇರಳ ರಾಜ್ಯದಲ್ಲಿ ಇರಲಿಲ್ಲ.
ನ್ಯಾಯಮೂರ್ತಿ ಜಗನ್ನಾಥ ಶೆಟ್ಟಿ ನೇತೃತ್ವದ ಪ್ರಥಮ ರಾಷ್ಟ್ರೀಯ ವೇತನ ಆಯೋಗದ ಶಿಫಾರಸಿನ ಅನ್ವಯ ಕಾನೂನು ಪದವಿ ಪೂರೈಸಿದ ನ್ಯಾಯಾಂಗ ನೌಕರರಿಗೆ ಸಿವಿಲ್ ನ್ಯಾಯಾಧೀಶರಾಗುವ ಅವಕಾಶವನ್ನು ಪುನಃ ಕಲ್ಪಿಸಲಾಯಿತು. ಆದರೆ ಸರಕಾರದ ಇತರ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕಾನೂನು ಪದವಿ ಪಡೆದಿರುವ ನೌಕರರಿಗೆ ನ್ಯಾಯಾಧೀಶರ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಲು ಅವಕಾಶವಿಲ್ಲ. ಕಾನೂನು ಪದವಿ ಪಡೆದಿರುವ ನ್ಯಾಯಾಂಗ ಇಲಾಖೆಯ ನೌಕರರಿಗೆ ಮಾತ್ರ ಅವಕಾಶವಿದೆ.
ಕಳೆದ ಎರಡುವರೆ ದಶಕಗಳ ಹಿಂದೆ ಸೇವೆಯಲ್ಲಿರುವ ನೌಕರರು ಕಾನೂನು ವಿದ್ಯಾಭ್ಯಾಸವನ್ನು ಕೈಗೊಳ್ಳುವಂತಹ ಅವಕಾಶವಿತ್ತು. ಪ್ರತಿಯೊಂದು ಜಿಲ್ಲಾ ಕೇಂದ್ರ ಗಳಲ್ಲಿ ಹಾಗೂ ಕೆಲವು ತಾಲ್ಲೂಕು ಕೇಂದ್ರಗಳಲ್ಲಿ ಇದ್ದ ಕಾನೂನು ಕಾಲೇಜುಗಳಲ್ಲಿ ಬೆಳಗಿನ ಹೊತ್ತು ಹಾಗೂ ಸಂಜೆಯ ಹೊತ್ತು ಅರೆಕಾಲಿಕ ತರಗತಿಗಳಿಗೆ ಹಾಜರಾಗುವ ಮೂಲಕ ಕಾನೂನು ಪದವಿಯನ್ನು ಪಡೆಯುವ ಅವಕಾಶವಿತ್ತು. ಆದರೆ ಜಸ್ಟೀಸ್ ಅಹ್ಮದಿ ಕಮಿಟಿ ವರದಿ ಪ್ರಕಾರ 1998 ರಿಂದ ಈ ಒಂದು ಅವಕಾಶವನ್ನು ನಿಲ್ಲಿಸಲಾಯಿತು. ಈಗ ಕಾನೂನು ಪದವಿ ಪಡೆಯಬೇಕಾದರೆ ವ್ಯಾಸಂಗದ ರಜೆಯನ್ನು ಪಡೆಯಬೇಕಾಗಿದೆ.
ನ್ಯಾಯಾಂಗ ನೌಕರ ಕಾನೂನು ಪದವಿ ಹೊಂದಿದ್ದಲ್ಲಿ ಆತನಿಗೆ ನ್ಯಾಯಾಧೀಶನಾಗುವ ಅವಕಾಶವಿದೆ. ಉಚ್ಚ ನ್ಯಾಯಾಲಯದಲ್ಲಿ ಅಸಿಸ್ಟೆಂಟ್ ಕೋರ್ಟ್ ಆಫೀಸರ್ ಹುದ್ದೆಗೆ ಕಾನೂನು ಪದವಿ ಪಡೆದ ಅಧೀನ ನ್ಯಾಯಾಲಯಗಳ ನೌಕರರಿಂದ ಅರ್ಜಿಗಳನ್ನು ಆಹ್ವಾನಿಸುತ್ತಾರೆ. ಈಗ ಮಾನ್ಯ ಉಚ್ಚನ್ಯಾಯಾಲಯದಲ್ಲಿ ಕೇಂದ್ರ ಸರಕಾರದ ವೇತನ ಶ್ರೇಣಿ ಇರುವುದರಿಂದ ಉತ್ತಮ ವೇತನವನ್ನು ಪಡೆಯಬಹುದಾಗಿದೆ.
ಬರಹ: ಪ್ರಕಾಶ್ ನಾಯಕ್, ಶಿರಸ್ತೇದಾರರು, ಮಂಗಳೂರು ನ್ಯಾಯಾಂಗ ಇಲಾಖೆ