ಚಾಲನಾ ಪರವಾನಿಗೆ ರದ್ದು ಯಾ ಅಮಾನತು ಮಾಡಲು ಪೊಲೀಸರಿಗೆ ಅಧಿಕಾರವಿದೆಯೆ..? ಕೊಲ್ಕತ್ತಾ ಹೈಕೋರ್ಟ್ ತೀರ್ಪಿನ ಕುರಿತು ಟಿಪ್ಪಣಿ
ಚಾಲನಾ ಪರವಾನಿಗೆ ರದ್ದು ಯಾ ಅಮಾನತು ಮಾಡಲು ಪೊಲೀಸರಿಗೆ ಅಧಿಕಾರವಿದೆಯೆ..? ಕೊಲ್ಕತ್ತಾ ಹೈಕೋರ್ಟ್ ತೀರ್ಪಿನ ಕುರಿತು ಟಿಪ್ಪಣಿ
1988ರ ಮೋಟಾರು ವಾಹನ ಕಾಯ್ದೆಯ ಅಡಿಯಲ್ಲಿ ಒಬ್ಬ ಪೊಲೀಸ್ ಅಧಿಕಾರಿಗೆ ವ್ಯಕ್ತಿಯ ಚಾಲನಾ ಪರವಾನಿಗೆ ಅನರ್ಹಗೊಳಿಸಲು ಯಾವುದೇ ಹಕ್ಕು ಇರುವುದಿಲ್ಲ ಎಂದು ಕೋಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಪೊಲೀಸ್ ಸಿಬ್ಬಂದಿ ತಪ್ಪಿತಸ್ಥ ವ್ಯಕ್ತಿಯ ಚಾಲನಾ ಪರವಾನಿಗೆಯನ್ನು ವಶಪಡಿಸಿ ಅವರ ಅದನ್ನು ಸಕ್ಷಮ ಪ್ರಾಧಿಕಾರ (RTO)ಕ್ಕೆ ಕಳುಹಿಸಿಕೊಡಬೇಕು. ಆದರೆ, ಅದನ್ನು ಅಮಾನತು ಮಾಡುವ ಅಧಿಕಾರ ಪೊಲೀಸರಿಗೆ ಇರುವುದಿಲ್ಲ ಎಂದು ತೀರ್ಪು ನೀಡಿದೆ.
ಅತಿ ವೇಗ ಹಾಗೂ ಅಜಾಗರೂಕತೆಯಿಂದ ಕಾರು ಚಾಲನೆ ಮಾಡಿದ್ದ ಮಹಿಳೆಯೊಬ್ಬರು ನೋಟಿಸ್ ಪಡೆದುಕೊಂಡ ಎರಡು ವಾರದಲ್ಲಿಯೇ ಮತ್ತೊಮ್ಮೆ ಇಂಥದ್ದೇ ಅಪಘಾತ ನಡೆಸಿದ್ದರು. ಈ ಕಾರಣಕ್ಕೆ ಮಹಿಳೆಯೊಬ್ಬಳ ಡ್ರೈವಿಂಗ್ ಲೈಸೆನ್ಸನ್ನು ಪೊಲೀಸರು ಅಮಾನತು ಮಾಡಿದ್ದರು.
ಇದನ್ನು ಪ್ರಶ್ನಿಸಿ ನೊಂದ ಮಹಿಳೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣದ ಇತ್ಯರ್ಥ ಮಾಡಿದ ನ್ಯಾಯಪೀಠ, ನೊಂದ ಅರ್ಜಿದಾರರಿಗೆ ಚಾಲನಾ ಪರವಾನಿಗೆ ಮರಳಿ ನೀಡುವಂತೆ ಆದೇಶ ನೀಡಿತು. ಜೊತೆಗೆ ಪರವಾನಗಿ ಸಸ್ಪೆಂಡ್ ಮಾಡಿರುವ ಪೊಲೀಸ್ ಅಧಿಕಾರಿಯ ಆದೇಶವನ್ನು ನ್ಯಾಯಾಲಯವು ರದ್ದುಗೊಳಿಸಿದ್ದು, ಸಹಾಯಕ ಪೊಲೀಸ್ ಕಮಿಷನರ್, ಸಂಚಾರ ಇಲಾಖೆಗೆ ಹಾಗೆ ಮಾಡುವ ಅಧಿಕಾರವಿಲ್ಲ ಎಂದು ತೀರ್ಪು ನೀಡಿತು.
'1988 ರ ಮೋಟಾರು ವಾಹನಗಳ ಕಾಯಿದೆಯ ಪ್ರಕಾರ, ಪರವಾನಗಿ ಪ್ರಾಧಿಕಾರವು ಮಾತ್ರ ಡ್ರೈವಿಂಗ್ ಲೈಸೆನ್ಸ್ ಅನ್ನು ಹೊಂದಿರುವ ವ್ಯಕ್ತಿಯ ಪರವಾನಗಿಯನ್ನು ರದ್ದು ಮಾಡುವ ಅಧಿಕಾರ ಹೊಂದಿದೆ' ಎಂದು ತಿಳಿಸಿದೆ.
ಪೊಲೀಸರಿಗೆ ಇರುವ ಅಧಿಕಾರವೇನು..?
ವಿಭಾಗ 2(20) ರ ಪ್ರಕಾರ, ಸಕ್ಷಮ ಪ್ರಾಧಿಕಾರಕ್ಕೆ ಪರವಾನಗಿಗಳನ್ನು ನೀಡುವ ಹಾಗೂ ರದ್ದು ಮಾಡುವ ಅಧಿಕಾರ ಮಾತ್ರ ಇರುತ್ತದೆ. ಅದನ್ನು ಹೊರತುಪಡಿಸಿ ಬೇರೆ ಯಾವುದೇ ಅಧಿಕಾರ ಇರುವುದಿಲ್ಲ.
ವಿಭಾಗ 206 ಸೆಕ್ಷನ್ 19 ಪ್ರಕಾರ, ಸಕ್ಷಮ ಪ್ರಾಧಿಕಾರಕ್ಕೆ ಲೈಸೆನ್ಸ್ ಅನರ್ಹಗೊಳಿಸುವ ಅಥವಾ ವಾಪಸ್ ಪಡೆಯುವ ಅಧಿಕಾರ ನೀಡಲಾಗಿದೆ.
ಹಾಗಾಗಿ, ಪೊಲೀಸರು ಲೈಸೆನ್ಸ್ ಸಹಿತ ಸಂಬಂದಪಟ್ಟ ದಾಖಲೆಗಳನ್ನು ವಶಪಡಿಸಿಕೊಳ್ಳಲು ಮಾತ್ರ ಅಧಿಕಾರ ಹೊಂದಿದೆ. ಲೈಸೆನ್ಸ್ ರದ್ದು ಯಾ ಅನರ್ಹ ಮಾಡುವಂತೆ ಪೊಲೀಸರು ಪ್ರಾಧಿಕಾರಕ್ಕೆ ಮನವಿ ಸಲ್ಲಿಸಬಹುದು ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಿದೆ.