ಸರ್ಕಾರಿ ನೌಕರರೇ, ಸರಿಯಾದ ಸಮಯಕ್ಕೆ ಹಾಜರಾಗಿ, ಇಲ್ಲದಿದ್ದರೆ ಸೂಕ್ತ ಕ್ರಮ: ರಾಜ್ಯ ಸರ್ಕಾರ ಸುತ್ತೋಲೆ
ಸರ್ಕಾರಿ ನೌಕರರೇ, ಸರಿಯಾದ ಸಮಯಕ್ಕೆ ಹಾಜರಾಗಿ, ಇಲ್ಲದಿದ್ದರೆ ಸೂಕ್ತ ಕ್ರಮ: ರಾಜ್ಯ ಸರ್ಕಾರ ಸುತ್ತೋಲೆ
ರಾಜ್ಯ ಸರ್ಕಾರದ ಕಚೇರಿಗಳಲ್ಲಿ ನಿಗದಿತ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗಲು ಮತ್ತು ಕರ್ತವ್ಯದ ಅವಧಿಯಲ್ಲಿ ಕಾರ್ಯನಿಷ್ಠೆ ತೋರಲು ಕಟ್ಟುನಿಟ್ಟಿನ ನಿಯಮ ರೂಪಿಸಲಾಗಿದೆ.
ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಈ ಬಗ್ಗೆ ಸುತ್ತೋಲೆಯನ್ನು ಹೊರಡಿಸಿದ್ದು, ಎಲ್ಲ ರಾಜ್ಯ ಸರ್ಕಾರಿ ನೌಕರರಿಗೆ ಇದು ಅನ್ವಯವಾಗಲಿದೆ.
ಸುತ್ತೋಲೆ ವಿವರ: ಸಂಖ್ಯೆ:ಮುಕಾ/4464335/2022 ದಿ. 25-07-2022
ಇತ್ತೀಚಿನ ದಿನಗಳಲಲ್ಇ ಸರ್ಕಾರಿ ನೌಕರರು ಮತ್ತು ಅಧಿಕಾರಿಗಳಲ್ಲಿ ಸಮಯ ಪ್ರಜ್ಞೆ ಹಾಗೂ ಕಾರ್ಯನಿಷ್ಠೆ ಇಲ್ಲ ಎಂಬುದು ಸರ್ಕಾರದ ಗಮನಕ್ಕೆ ಬಂದಿದೆ. ಸರ್ಕಾರದ ಆಡಳಿತ ವ್ಯವಸ್ಥೆಯಲ್ಲಿ ಚುರುಕು ಮುಟ್ಟಿಸಲು ಮತ್ತು ನಾಗರಿಕರಿಗೆ ಉತ್ತಮ ಸೇವೆ ಸಲ್ಲಿಸಲು ಈ ಸುತ್ತೋಲೆ ಹೊರಡಿಸಲಾಗಿದೆ.
ದೂರದ ಸ್ಥಳಗಳಿಂದ ಸರ್ಕಾರಿ ಕಚೇರಿಗೆ ಆಗಮಿಸುವ ನಾಗರಿಕರು, ಅಧಿಕಾರಶಾಹಿಯ ನಿರ್ಲಕ್ಷ್ಯ ಮತ್ತು ಉಡಾಫೆಯ ವರ್ತನೆ ಹಾಗೂ ಸಮಯ ಪ್ರಜ್ಞೆ, ಕಾರ್ಯನಿಷ್ಠೆಯ ಕೊರತೆಯಿಂದ ಬವಣೆ ಪಡುವಂತಾಗಿದೆ.
ಈ ಹಿನ್ನೆಲೆಯಲ್ಲಿ ಬೆಳಿಗ್ಗೆ 10-00 ಗಂಟೆಗೆ ಕಡ್ಡಾಯವಾಗಿ ಎಲ್ಲ ಸರ್ಕಾರಿ ನೌಕರರು, ಸಿಬ್ಬಂದಿ ಕಚೇರಿಗೆ ಹಾಜರಾಗಬೇಕು ಮತ್ತು ತಮ್ಮ ಕರ್ತವ್ಯದ ಅವಧಿ ಪೂರ್ಣವಾಗುವವರೆಗೆ ನಿಗದಿಪಡಿಸಿದ ಸ್ಥಳದಲ್ಲಿ ಇದ್ದು ಕರ್ತವ್ಯ ನಿರ್ವಹಿಸಬೇಕು ಎಂದು ಸುತ್ತೋಲೆಯಲ್ಲಿ ಆದೇಶ ಹೊರಡಿಸಲಾಗಿದೆ.
ಅನ್ಯ ಕಾರ್ಯ ಯಾ ಕರ್ತವ್ಯ ನಿಮಿತ್ತ ತೆರಳಬೇಕಿದ್ದಲ್ಲಿ ಚಲನ-ವಲನ ವಹಿಯಲ್ಲಿ ಸಕಾರಣ ನಮೂದಿಸಿ ಮೇಲಾಧಿಕಾರಿಗಳ ಪೂರ್ವಾನುಮತಿ ಪಡೆಯುವುದು ಕಡ್ಡಾಯ ಎಂದು ಸುತ್ತೋಲೆ ತಿಳಿಸಿದೆ.
ನಿಗದಿತ ಕಾಲಾವಧಿಗಿಂತ ವಿಳಂಬವಾಗಿ ಹಾಜರಾಗುವ ಹಾಗೂ ಕಚೇರಿ ಅವಧಿಯಲ್ಲಿ ತಮ್ಮ ಸ್ಥಾನದಲ್ಲಿ ಇಲ್ಲದಿದ್ದ ಸಿಬ್ಬಂದಿ ಮತ್ತು ಅಧಿಕಾರಿ ವಿರುದ್ಧ ಸಕ್ಷಮ ಪ್ರಾಧಿಕಾರ ಸೂಕ್ತ ಕ್ರಮ ಜರುಗಿಸಲಿದೆ ಎಂದು ಸುತ್ತೋಲೆಯಲ್ಲಿ ಎಚ್ಚರಿಸಲಾಗಿದೆ.
ಈ ಸುತ್ತೋಲೆಯನ್ನು ಎಲ್ಲ ಜಿಲ್ಲಾಧಿಕಾರಿಗಳು, ಕ್ಷೇತ್ರಗಳ ಇಲಾಖಾ ಮುಖ್ಯಸ್ಥರಿಗೆ ಕಳುಹಿಸಿಕೊಡಲಾಗಿದೆ.