ನಾನು ರೈತನ ಮಗ, ಜಡ್ಜ್ ಹುದ್ದೆ ಹೋದರೆ ಕೃಷಿ ಮಾಡುವೆ: ಭ್ರಷ್ಟಾಚಾರದ ವಿರುದ್ಧ ಹೈಕೋರ್ಟ್ ನ್ಯಾಯಮೂರ್ತಿ ಕೆಂಡಾಮಂಡಲ
ನಾನು ರೈತನ ಮಗ, ಜಡ್ಜ್ ಹುದ್ದೆ ಹೋದರೆ ಕೃಷಿ ಮಾಡುವೆ: ಭ್ರಷ್ಟಾಚಾರದ ವಿರುದ್ಧ ಹೈಕೋರ್ಟ್ ನ್ಯಾಯಮೂರ್ತಿ ಕೆಂಡಾಮಂಡಲ
ಭ್ರಷ್ಟಾಚಾರದ ವಿರುದ್ಧ ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ತೊಡೆ ತಟ್ಟಿದ್ದಾರೆ. ಭ್ರಷ್ಟಾಚಾರ ನಿಗ್ರಹ ದಳ(ACB) ವಿರುದ್ಧ ತೀಕ್ಷ್ಣ ಟೀಕಾ ಪ್ರಹಾರ ಮಾಡಿರುವ ಅವರು, ಬೆಕ್ಕಿಗೆ ಗಂಟೆ ಕಟ್ಟಲು ಸಿದ್ದನಿದ್ದೇನೆ. ರೈತನ ಮಗನಾಗಿರುವ ನಾನು ಜಡ್ಜ್ ಹುದ್ದೆ ಹೋದರೆ ಕೃಷಿ ಮಾಡಿ ಬದುಕುತ್ತೇನೆ. ಇಂತಹ ಗೊಡ್ಡು ಬೆದರಿಕೆಗಳಿಗೆ ಜಗ್ಗುವುದಿಲ್ಲ ಎಂದು ಆಕ್ರೋಶಭರಿತರಾಗಿ ಹೇಳಿದ್ದಾರೆ.
ಬೆಂಗಳೂರು ನಗರ ಡಿಸಿ ಕಚೇರಿಯ ಭ್ರಷ್ಟಾಚಾರ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಅವರು ಭ್ರಷ್ಟಾಚಾರ ಪಿಡುಗು ಬಗ್ಗೆ ಪ್ರಸ್ತಾಪಿಸಿದರು.
ಈ ಹಿಂದೆ, ಎಸಿಬಿ ಭ್ರಷ್ಟಾಚಾರದ ಕೇಂದ್ರ ಮತ್ತು ಕಲೆಕ್ಷನ್ ಸೆಂಟರ್ ಎಂದು ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಟೀಕಿಸಿದ್ದರು. ಅದರ ಬೆನ್ನಲ್ಲೇ ಅವರನ್ನು ವರ್ಗಾವಣೆ ಮಾಡುವ ಬೆದರಿಕೆ ಒಡ್ಡಲಾಗಿದೆ. ಇದನ್ನು ಸ್ವತಃ ಸಂದೇಶ್ ಅವರೇ ಪ್ರಕಟಿಸಿದ್ದು, ಇಂತಹ ಬೆದರಿಕೆಗೆ ಜಗ್ಗುವುದಿಲ್ಲ ಎಂದು ಘೋಷಿಸಿದ್ದಾರೆ.
ಭ್ರಷ್ಟಾಚಾರ ನಿಗ್ರಹ ದಳ ACBಯ ADGP ಬಹಳ ಪ್ರಭಾವಿಯಂತೆ. ಅವರ ಸರ್ವಿಸ್ ರೆಕಾರ್ಡ್ ಈವರೆಗೆ ಹಾಜರುಪಡಿಸಿಲ್ಲ. ವ್ಯಕ್ತಿಯೊಬ್ಬರು ನನ್ನ ಸಹ ನ್ಯಾಯಮೂರ್ತಿ ಬಳಿ ವರ್ಗಾವಣೆ ಮಾಡಿಸುವ ಕುರಿತು ಹೇಳಿದ್ದಾರಂತೆ. ಇದನ್ನು ನನ್ನ ಸಹ ನ್ಯಾಯಮೂರ್ತಿ ತಿಳಿಸಿದ್ದಾರೆ. ವರ್ಗಾವಣೆ ಮಾಡಿಸುವ ಬೆದರಿಕೆಯನ್ನೂ ಆದೇಶದಲ್ಲಿ ಬರೆಸುತ್ತೇನೆ. ನನಗೆ ಯಾವ ಹೆದರಿಕೆ ಇಲ್ಲ ಎಂದು ಸವಾಲು ಹಾಕಿದರು.
ನಾನು ಈಗಲೂ ಪರಿಶುದ್ಧನಾಗಿದ್ದೇನೆ. ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡ ನಂತರ ಒಂದಿಂಚೂ ಆಸ್ತಿ ಮಾಡಿಲ್ಲ. ನನಗೆ ಯಾವುದೇ ರಾಜಕೀಯ ಪಕ್ಷದ ಯಾ ಸಿದ್ದಾಂತದ ಹಂಗು ಇಲ್ಲ ಎಂದು ನ್ಯಾಯಮೂರ್ತಿಗಳು ವರ್ಗಾವಣೆ ಬೆದರಿಕೆಗೆ ಪ್ರತಿಕ್ರಿಯಿಸಿದ್ದಾರೆ.
ಭ್ರಷ್ಟಾಚಾರದ ವಿರುದ್ಧ ದಾಳಿಯ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದವರಿಗೂ ACB ಬಿ ರಿಪೋರ್ಟ್ ಹಾಕುತ್ತದೆ. ವಿಟಮಿನ್ ಎಂ ಸಿಕ್ಕಿದರೆ ಸಾಕು ಎಲ್ಲರನ್ನೂ ರಕ್ಷಿಸಲಾಗುತ್ತದೆ ಎಂದು ACB ವಿರುದ್ಧ ಗುಡುಗಿದ ಅವರು, ಭ್ರಷ್ಟಾಚಾರ ಒಂದು ಪಿಡುಗು. ಈಗ ಅದು ಕ್ಯಾನ್ಸರ್ ಆಗಿದೆ. ಇದನ್ನು ನಾಲ್ಕನೇ ಹಂತಕ್ಕೆ ಹೋಗಲು ಬಿಡಬಾರದು. ACB ಅಧಿಕಾರಿಗಳು ಸರ್ಚ್ ವಾರಂಟ್ ತೋರಿಸಿ ಅಧಿಕಾರಿಗಳಿಂದ ಹಾಡಹಗಲೇ ವಸೂಲಿ ಮಾಡುತ್ತಿದ್ದಾರೆ. ಬೇಲಿಯೇ ಎದ್ದು ಹೊಲ ಮೇಯ್ದರೆ ಮಾಡುವುದೇನು ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ACB ಪರ ವಕೀಲರನ್ನೂ ತರಾಟೆಗೆ ತೆಗೆದುಕೊಂಡ ನ್ಯಾ. ಎಚ್.ಪಿ. ಸಂದೇಶ್, ನೀವು ಕಳಂಕಿತರನ್ನು ರಕ್ಷಿಸುತ್ತಿದ್ದೀರಾ ಅಥವಾ ಸಾರ್ವಜನಿಕರನ್ನು ರಕ್ಷಿಸುತ್ತಿದ್ದೀರಾ. ಕರಿ ಕೋಟು ಇರುವುದು ಆರೋಪಿಗಳನ್ನು ರಕ್ಷಿಸಲಿಕ್ಕೆ ಅಲ್ಲ ಎಂದು ಬುದ್ದಿವಾದ ಹೇಳಿದರು.