ಐಎಂಎ ಪದಾಧಿಕಾರಿಗಳ ವಿರುದ್ಧ ಡಾ. ಕಕ್ಕಿಲ್ಲಾಯ ಮಾನನಷ್ಟ ದಾವೆ: ಮುಂದಿನ ವಿಚಾರಣೆ ವರೆಗೆ ಹೈಕೋರ್ಟ್ ತಡೆಯಾಜ್ಞೆ
ಐಎಂಎ ಪದಾಧಿಕಾರಿಗಳ ವಿರುದ್ಧ ಡಾ. ಕಕ್ಕಿಲ್ಲಾಯ ಮಾನನಷ್ಟ ದಾವೆ: ಮುಂದಿನ ವಿಚಾರಣೆ ವರೆಗೆ ಹೈಕೋರ್ಟ್ ತಡೆಯಾಜ್ಞೆ
ಲಾಕ್‌ಡೌನ್ ಸಂದರ್ಭದಲ್ಲಿ ಭಾರೀ ಸುದ್ದಿ ಮಾಡಿದ್ದ ಭಾರತೀಯ ವೈದ್ಯಕೀಯ ಸಂಘದ ಪದಾಧಿಕಾರಿಗಳ ವಿರುದ್ಧದ ಮಾನನಷ್ಟ ಮೊಕದ್ದಮೆ ವಿಚಾರಣೆಗೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
2021ರ ವರ್ಷದಲ್ಲಿ ಹೇರಲಾದ ಎರಡನೇ ಲಾಕ್‌ಡೌನ್ ಸಂದರ್ಭದಲ್ಲಿ ಮಂಗಳೂರಿನ ಖ್ಯಾತ ವೈದ್ಯರಾದ ಬಿ ಶ್ರೀನಿವಾಸ ಕಕ್ಕಿಲ್ಲಾಯ ಮಾಸ್ಕ್ ಧರಿಸದೆ ಸೂಪರ್ ಮಾರ್ಕೆಟ್‌ವೊಂದಕ್ಕೆ ಪ್ರವೇಶಿಸಿದ್ದರು.
ವೈದ್ಯ ಕಕ್ಕಿಲ್ಲಾಯ ಅವರ ಕ್ರಮ ಸರಿಯಲ್ಲ. ಮಾಸ್ಕ್ ಹಾಕದೆ ಅಂಗಡಿಗೆ ಭೇಟಿ ನೀಡಿರುವುದು ತಪ್ಪು ಎಂದು ಐಎಂಎ ಪದಾಧಿಕಾರಿಗಳು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದರು.
ಈ ಹೇಳಿಕೆಯನ್ನು ಪ್ರಶ್ನಿಸಿ ಕಕ್ಕಿಲ್ಲಾಯರು ನ್ಯಾಯಾಂಗ ಹೋರಾಟ ನಡೆಸಿದ್ದರು. ರಾಜ್ಯ ಐಎಂಎ ವೈದ್ಯರ ಕಿರುಕುಳ ತಡೆ ಸಮಿತಿ ಅಧ್ಯಕ್ಷ ಡಾ ಗಣೇಶ್ ಪ್ರಸಾದ್ ಮುದ್ರಾಜೆ ಹಾಗೂ ಐಎಂಎ ಮಂಗಳೂರು ಘಟಕದ ಪದಾಧಿಕಾರಿಗಳ ವಿರುದ್ಧ ಕಕ್ಕಿಲ್ಲಾಯ ಜಿಲ್ಲಾ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು.
ಇದಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಕೋರಿ ಭಾರತೀಯ ವೈದ್ಯಕೀಯ ಸಂಘದ (IMA) ಮಂಗಳೂರು ಘಟಕ ಹೈಕೋರ್ಟ್ ಮೊರೆ ಹೋಗಿತ್ತು. ಈ ಮನವಿ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾ. ಎಂ ನಾಗಪ್ರಸನ್ನ ನೇತೃತ್ವದ ನ್ಯಾಯಪೀಠ, ತಡೆಯಾಜ್ಞೆ ನೀಡಿದ್ದು, ಪ್ರತಿವಾದಿಯಾಗಿರುವ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಅವರ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಮುಂದೂಡಿದೆ.
ಪ್ರಕರಣದ ಪ್ರತಿವಾದಿಯಾಗಿರುವ ಶ್ರೀ ಕಕ್ಕಿಲ್ಲಾಯ ಅವರಿಗೆ ನೋಟಿಸ್ ಜಾರಿಗೊಳಿಸಲು ಸೂಚಿಸಿರುವ ನ್ಯಾಯಪೀಠ, ಮುಂದಿನ ವಿಚಾರಣೆ ವರೆಗೆ ಮಂಗಳೂರು ನ್ಯಾಯಾಲಯದಲ್ಲಿ ಹೂಡಲಾದ ಮಾನನಷ್ಟ ಪ್ರಕರಣದ (ಸಿ ಸಿ ನಂಬರ್ 461/2022) ವಿಚಾರಣೆಗೆ ತಡೆ ನೀಡಿರುವುದಾಗಿ ಆದೇಶಿಸಿದೆ.