IT Dept on High value Transaction- ದೊಡ್ಡ ಮೊತ್ತದ ವಹಿವಾಟು: ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಬೇಕೇ..?
ದೊಡ್ಡ ಮೊತ್ತದ ವಹಿವಾಟು: ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಬೇಕೇ..?
ಆರ್ಥಿಕ ವರ್ಷದಲ್ಲಿ ಭಾರೀ ಮೊತ್ತದ ಹಣಕಾಸು ವಹಿವಾಟು ಮಾಡಿದ್ದರೆ, ಅದನ್ನು ITRನಲ್ಲಿ ಸೇರಿಸದಿದ್ದರೆ, ನಿಮಗೆ IT ಇಲಾಖೆಯಿಂದ ನೋಟೀಸ್ ಬರಬಹುದು. ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೀವು ತಿಳಿದುಕೊಳ್ಳುವುದು ಸೂಕ್ತ.
ನಿರ್ದಿಷ್ಟ ಮಿತಿಯನ್ನು ಮೀರಿ ದೊಡ್ಡ ಪ್ರಮಾಣದಲ್ಲಿ ಭಾರೀ ಮೌಲ್ಯದ ನಗದು ವಹಿವಾಟು ನಡೆದರೆ, ಆಗ ಆ ವಹಿವಾಟು ನಡೆಸಿದ ವ್ಯಕ್ತಿ ಯಾ ಸಂಸ್ಥೆ ಬಗ್ಗೆ ಆದಾಯ ತೆರಿಗೆ ಇಲಾಖೆ ನಿಗಾ ಇಡುತ್ತದೆ. ಮತ್ತು ಇದನ್ನು ನಿಮ್ಮ ಆದಾಯ ತೆರಿಗೆ ರಿಟರ್ನ್ಸ್ (ITR)ನಲ್ಲಿ ಇಂತಹ ವಹಿವಾಟುಗಳನ್ನು ನಮೂದಿಸಲು ವಿಫಲವಾದರೆ, ಆಗ ನಿಮಗೆ ಇಲಾಖೆಯಿಂದ ನೋಟಿಸ್ ಜಾರಿಯಾಗಬಹುದು.
I-T ಇಲಾಖೆಯು ಬ್ಯಾಂಕ್ ಠೇವಣಿ, ಮ್ಯೂಚುವಲ್ ಫಂಡ್ ಹೂಡಿಕೆಗಳು, ಆಸ್ತಿ-ಸಂಬಂಧಿತ ವಹಿವಾಟುಗಳು ಮತ್ತು ಷೇರು ವಹಿವಾಟು ಸೇರಿದಂತೆ ಹೆಚ್ಚಿನ ಮೌಲ್ಯದ ನಗದು ವಹಿವಾಟುಗಳ ಮೇಲೆ ನಿಗಾ ಇರಿಸುತ್ತದೆ. ವಹಿವಾಟುಗಳು ನಿಗದಿತ ಮಿತಿಯನ್ನು ಮೀರಿದರೆ, ನೋಟಿಸ್ ಪಡೆಯುವುದನ್ನು ತಪ್ಪಿಸಲು ನೀವು I-T ಇಲಾಖೆಗೆ ಸೂಕ್ತ ಮಾಹಿತಿ ಒದಗಿಸಬೇಕು.
ದೊಡ್ಡ ಮೊತ್ತದ ಯಾ ಭಾರೀ ಮೌಲ್ಯದ ವಹಿವಾಟು ನಡೆಸಿದ ವ್ಯಕ್ತಿ ಯಾ ಸಂಸ್ಥೆಯ ದಾಖಲೆಗಳ ಮಾಹಿತಿ ಪಡೆದು ಪರಿಶೀಲಿಸಲು I-T ಇಲಾಖೆ ವಿವಿಧ ಸರ್ಕಾರಿ ಸಂಸ್ಥೆಗಳು ಹಾಗೂ ಹಣಕಾಸು ಸಂಸ್ಥೆಗಳ ಜೊತೆಗೆ ಒಡಂಬಡಿಕೆ ಮಾಡಿಕೊಂಡಿದೆ.
ತೆರಿಗೆದಾರರ ನೋಟೀಸ್, ಐಟಿ ನಿಗಾ ತಪ್ಪಿಸಲು ಹಾಗೂ ಸ್ವಯಂ ಪ್ರೇರಿತ ಸ್ವಯಂಪ್ರೇರಿತ ನಿಯಮ ಪಾಲನೆಯನ್ನು ಉತ್ತೇಜಿಸಲು, ತೆರಿಗೆ ಇಲಾಖೆಯು ಪಾನ್ ನಂಬರ್ ಲಿಂಕ್ ಆಗಿರುವ ಇ-ಮೇಲ್ ಮತ್ತು ಮೊಬೈಲ್‌ಗೆ ಸಂದೇಶ ಕಳುಹಿಸಿ ಹೆಚ್ಚಿನ ಮೌಲ್ಯದ ವಹಿವಾಟಿನ ಮಾಹಿತಿ ನೀಡುವಂತೆ ಕೋರಿಕೊಳ್ಳುತ್ತದೆ.
ITR ನಲ್ಲಿ ವರದಿ ಮಾಡದಿದ್ದಲ್ಲಿ I-T ಇಲಾಖೆಯಿಂದ ಗಮನ ಸೆಳೆಯಬಹುದಾದ ಕೆಲವು ವಹಿವಾಟುಗಳ ಕೆಲ ಉದಾಹರಣೆಗಳು ಇಲ್ಲಿವೆ.
ಉಳಿತಾಯ ಬ್ಯಾಂಕ್ ಖಾತೆ ಮತ್ತು ಚಾಲ್ತಿ ಖಾತೆ ಠೇವಣಿ
ಒಂದು ಹಣಕಾಸು ವರ್ಷದಲ್ಲಿ ಉಳಿತಾಯ ಬ್ಯಾಂಕ್ ಖಾತೆಯಲ್ಲಿ ₹ 10 ಲಕ್ಷಕ್ಕಿಂತ ಹೆಚ್ಚಿನ ಯಾವುದೇ ವ್ಯವಹಾರವನ್ನು ಐ-ಟಿ ಇಲಾಖೆಗೆ ಬಹಿರಂಗಪಡಿಸಬೇಕು. ಅದೇ ರೀತಿ, ಚಾಲ್ತಿ ಖಾತೆ(ಕರೆಂಟ್ ಅಕೌಂಟ್)ಗಳಿಗೆ ಥ್ರೆಶೋಲ್ಡ್ ಮಿತಿ ₹ 50 ಲಕ್ಷ.
ಬ್ಯಾಂಕುಗಳಲ್ಲಿ ಸ್ಥಿರ ಠೇವಣಿ
₹ 10 ಲಕ್ಷಕ್ಕಿಂತ ಹೆಚ್ಚಿನ ಬ್ಯಾಂಕ್ FD ಖಾತೆಯಲ್ಲಿನ ನಗದು ಠೇವಣಿಗಳನ್ನು IT ಇಲಾಖೆಗೆ ತಿಳಿಸಬೇಕು. ಒಂದು ಅಥವಾ ಹಲವು FDಗಳಲ್ಲಿ ಮಾಡಿದ ಒಟ್ಟು ಠೇವಣಿ ಮೊತ್ತವು IT ಇಲಾಖೆ ನೀಡಿದ ನಿಗದಿತ ಮಿತಿಗಳನ್ನು ಮೀರಿದರೆ, ಆಗ ಫಾರ್ಮ್ 61Aಯಲ್ಲಿ ಆದಾಯ ತೆರಿಗೆ ಇಲಾಖೆಗೆ ಗ್ರಾಹಕರ ನಿರ್ದಿಷ್ಟ ಹಣಕಾಸು ವಹಿವಾಟುಗಳ ಮಾಹಿತಿ ಬಹಿರಂಗಪಡಿಸಬೇಕಾಗುತ್ತದೆ.
ಕ್ರೆಡಿಟ್ ಕಾರ್ಡ್ ಬಿಲ್ಲುಗಳು
1 ಲಕ್ಷ ರೂ.ಗಿಂತ ಹೆಚ್ಚಿನ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಗಳನ್ನು ಐ-ಟಿ ಇಲಾಖೆಗೆ ವರದಿ ಮಾಡಬೇಕು. ಆದಾಯ ತೆರಿಗೆ ಇಲಾಖೆಯು ಎಲ್ಲಾ ಕ್ರೆಡಿಟ್ ಕಾರ್ಡ್ ವಹಿವಾಟುಗಳ ಪರಿಶೀಲನೆ ಮಾಡುತ್ತದೆ ಮತ್ತು ಕ್ರೆಡಿಟ್ ಕಾರ್ಡ್‌ಗಳಿಗೆ ಲಿಂಕ್ ಮಾಡಲಾದ ಯಾವುದೇ ಹೆಚ್ಚಿನ ಮೌಲ್ಯದ ವಹಿವಾಟನ್ನು ಗೌಪ್ಯವಾಗಿಡುವುದು ಸರಿಯಲ್ಲ. ಕ್ರೆಡಿಟ್ ಕಾರ್ಡ್ ಬಿಲ್‌ಗಳಿಗೆ ಹಣಕಾಸು ವರ್ಷದಲ್ಲಿ ₹ 10 ಲಕ್ಷಕ್ಕಿಂತ ಹೆಚ್ಚಿನ ಸೆಟಲ್‌ಮೆಂಟ್‌ಗಳನ್ನು ITRನಲ್ಲಿ ಬಹಿರಂಗಪಡಿಸಬೇಕು.
ಸ್ಥಿರ ಆಸ್ತಿಯ ಮಾರಾಟ ಅಥವಾ ಖರೀದಿ
₹ 30 ಲಕ್ಷಕ್ಕಿಂತ ಹೆಚ್ಚಿನ ಯಾವುದೇ ಸ್ಥಿರಾಸ್ತಿಯ ಮಾರಾಟ ಅಥವಾ ಖರೀದಿಯ ಬಗ್ಗೆ ತೆರಿಗೆ ಅಧಿಕಾರಿಗಳಿಗೆ ತಿಳಿಸಲು ದೇಶಾದ್ಯಂತ ಎಲ್ಲಾ ಆಸ್ತಿ ನೋಂದಣಿದಾರರು ಮತ್ತು ಉಪ-ನೋಂದಣಿದಾರರು ಕಡ್ಡಾಯಗೊಳಿಸಲಾಗಿದೆ.
ಷೇರುಗಳು, ಮ್ಯೂಚುವಲ್ ಫಂಡ್‌ಗಳು, ಡಿಬೆಂಚರ್‌ಗಳು ಮತ್ತು ಬಾಂಡ್‌ಗಳು
ಮ್ಯೂಚುವಲ್ ಫಂಡ್‌ಗಳು, ಸ್ಟಾಕ್‌ಗಳು, ಬಾಂಡ್‌ಗಳು ಅಥವಾ ಡಿಬೆಂಚರ್‌ಗಳಲ್ಲಿನ ಹೂಡಿಕೆಗಳಿಗೆ ಸಂಬಂಧಿಸಿದ ನಗದು ವಹಿವಾಟಿನ ಮಿತಿಯು ಹಣಕಾಸು ವರ್ಷದಲ್ಲಿ ₹ 10 ಲಕ್ಷವನ್ನು ಮೀರಬಾರದು.
ವಾರ್ಷಿಕ ಮಾಹಿತಿ ರಿಟರ್ನ್ (AIR) ಹೇಳಿಕೆಯು ಹಣಕಾಸಿನ ವಹಿವಾಟುಗಳ ವಿವರಗಳನ್ನು ಒಳಗೊಂಡಿರುತ್ತದೆ ಮತ್ತು ತೆರಿಗೆ ಅಧಿಕಾರಿಗಳು ಈ ಮೂಲಕ ಹೆಚ್ಚಿನ ಮೌಲ್ಯದ ವಹಿವಾಟುಗಳನ್ನು ಪತ್ತೆಹಚ್ಚುತ್ತಾರೆ. ITRನಲ್ಲಿ ಸಲ್ಲಿಸುವ Form No. 26AS ನ ಭಾಗ E ಹಣಕಾಸು ವ್ಯವಹಾರದ ವಿವರಗಳನ್ನು ಒಳಗೊಂಡಿದೆ.
ವಿದೇಶಿ ಕರೆನ್ಸಿಯ ಮಾರಾಟ
ವಿದೇಶಿ ಕರೆನ್ಸಿಯ ಮಾರಾಟದಿಂದ ಒಂದು ಹಣಕಾಸು ವರ್ಷದಲ್ಲಿ ₹ 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಆದಾಯ ತೆರಿಗೆ ಇಲಾಖೆಗೆ ವರದಿ ಮಾಡಬೇಕು.