ಆದಾಯಕ್ಕಿಂತ ಹೆಚ್ಚು ಆಸ್ತಿ: ಪೊಲೀಸ್ ವರಿಷ್ಠಾಧಿಕಾರಿಗೆ 4 ವರ್ಷ ಜೈಲು, ಕೋಟಿ ರೂ. ದಂಡ!
ಆದಾಯಕ್ಕಿಂತ ಹೆಚ್ಚು ಆಸ್ತಿ: ಪೊಲೀಸ್ ವರಿಷ್ಠಾಧಿಕಾರಿಗೆ 4 ವರ್ಷ ಜೈಲು, ಕೋಟಿ ರೂ. ದಂಡ!
ಆದಾಯಕ್ಕಿಂತ ಹೆಚ್ಚಿನ ಭಾರೀ ಪ್ರಮಾಣದ ಆಸ್ತಿ ಸಂಪಾದನೆ ಮಾಡಿರುವ ಅರೋಪದ ಮೆಲೆ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿಗೆ ತಮ್ಮ ಅಕ್ರಮ ಆಸ್ತಿ ಭಾರೀ ಬೆಲೆ ತೆರುವಂತೆ ಮಾಡಿದೆ.
ಪಿಎಸ್‌ಐ ಆಗಿದ್ದ ರಾಜಾಜಿನಗರದ ನಿವಾಸಿ ಸಿ ಎ ಶ್ರೀನಿವಾಸ ಅಯ್ಯರ್ ಪೊಲೀಸ್ ವರಿಷ್ಠಾಧಿಕಾರಿಯಾಗಿ ನಿವೃತ್ತರಾಗಿದ್ದರು. ಅವರ ಆಸ್ತಿಗೆ ಸೂಕ್ತ ದಾಖಲೆ ನೀಡಲು ವಿಫಲರಾದ ಹಿನ್ನೆಲೆಯಲ್ಲಿ ಅವರನ್ನು ದೋಷಿ ಎಂದು ತೀರ್ಪು ನೀಡಿರುವ 78ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ವಿಶೇಷ ನ್ಯಾಯಾಲಯ, ಆರೋಪಿ ನಿವೃತ್ತ ಪೊಲೀಸ್ ಅಧಿಕಾರಿಗೆ ನಾಲ್ಕು ವರ್ಷ ಜೈಲು ಶಿಕ್ಷೆ ಹಾಗೂ ಬರೋಬ್ಬರಿ ಒಂದು ಕೋಟಿ ರೂ. ದಂಡವನ್ನು ವಿಧಿಸಿ ತೀರ್ಪು ನೀಡಿದೆ.
ಸಮಾಜಕ್ಕೆ ಕಾವಲುಗಾರನಾಗಿ ಇರಬೇಕಾದ ಪೊಲೀಸ್ ಅಧಿಕಾರಿಯನ್ನು ಮತ್ತೊಬ್ಬರು ಕಾವಲು ಕಾಯುವಂತಹ ಪರಿಸ್ಥಿತಿ ಬಂದಿರುವುದು ದುರದೃಷ್ಟಕರ ಎಂದು ನ್ಯಾಯಾಲಯ ವಿಷಾದ ವ್ಯಕ್ತಪಡಿಸಿದೆ.
ಯಲಹಂಕದ ಸಶಸ್ತ್ರ ಪೊಲೀಸ್ ತರಬೇತಿ ಕೇಂದ್ರದಲ್ಲಿ ಎಸ್‌ಪಿಯಾಗಿ ನಿವೃತ್ತರಾದ ಶ್ರೀನಿವಾಸ ಅಯ್ಯರ್ ವಿರುದ್ಧದ ಆರೋಪವು ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಸೆಕ್ಷನ್‌ಗಳಾದ 13(1)(ಇ) ಜೊತೆಗೆ 13(2)ರ ಅಡಿ ಸಾಬೀತಾಗಿದೆ ಎಂದು ತೀರ್ಪು ನೀಡಿರುವ ವಿಶೇಷ ನ್ಯಾಯಾಧೀಶ ಎಸ್ ವಿ ಶ್ರೀಕಾಂತ್, ಎಲ್ಲ ಅಧಿಕಾರಿಗಳಿಗೆ ಪಾಠ ಕಲಿಸುವ ರೀತಿಯಲ್ಲಿ ದುಬಾರಿ ದಂಡ ವಿಧಿಸಿದ್ದಾರೆ.
ನಾಲ್ಕು ವರ್ಷ ಜೈಲು, ಒಂದು ಕೋಟಿ ರೂ. ದಂಡ. ದಂಡದ ಹಣ ಪಾವತಿಸಲು ವಿಫಲವಾದರೆ ಹೆಚ್ಚುವರಿ ಎರಡು ವರ್ಷದ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.
ಒಬ್ಬ ವ್ಯಕ್ತಿಯನ್ನು ಸಬ್ ಇನ್ಸ್‌ಪೆಕ್ಟರ್ ಆಗಿ ನೇಮಿಸಿದಾಗ, ಕಾನೂನು ಪ್ರಕಾರ ಅವರ ಮೇಲೆ ಅಪಾರ ಜವಾಬ್ದಾರಿ ಇರುತ್ತದೆ. ಆದರೆ, ಆತ ಮಾಡಿದ್ದೇ ಇನ್ನೊಂದು ಎಂದು ಅಯ್ಯರ್ ಬಗ್ಗೆ ನ್ಯಾಯಾಲಯ ವಿಷಾದ ವ್ಯಕ್ತಪಡಿಸಿದೆ.
ಆರೋಪಿ ಅಧಿಕಾರಿಯು ವೈಯಕ್ತಿಕವಾಗಿ ಕಟ್ಟಡ ನಿರ್ಮಾಣ ಕಾಮಗಾರಿ, ಕೃಷಿ ಚಟುವಟಿಕೆ, ಇತರೆ ಗೃಹ ಕೃತ್ಯಗಳನ್ನು ತಾವೇ ಮೇಲ್ವಿಚಾರಣೆ ಮಾಡುತ್ತಿದ್ದರು. ಆದರೂ ಅವರಿಗೆ ತಮ್ಮ ಅಧಿಕೃತ ಕೆಲಸ ಮಾಡಲು ಎಲ್ಲಿ ಸಮಯ ಇತ್ತು ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ ಎಂದು ನ್ಯಾಯಾಲಯ ಚಕಿತಗೊಂಡಿದೆ. ಇದು ಅಶಿಸ್ತು ಮತ್ತು ದುರ್ನಡತೆಯ ಎಲ್ಲೆ ಮೀರಿದ ಪ್ರಕರಣ ಎಂದು ನ್ಯಾಯಾಲಯ ವಿಶ್ಲೇಷಿಸಿದೆ.
ಪ್ರಕರಣ ಏನು..?
1987ರ ಜನವರಿಯಿಂದ 2007ರ ನವೆಂಬರ್ 3ರ ವರೆಗೆ ಪೊಲೀಸ್ ಅಧಿಕಾರಿಯಾಗಿದ್ದ ಅಯ್ಯರ್, ಆ ದಿನ ಎಸಿಬಿ ದಾಳಿ ನಡೆದಾಗ ಸಶಸ್ತ್ರ ಪೊಲೀಸ್ ತರಬೇತಿ ಶಾಲೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಆಗಿದ್ದರು.
ಅವರ ಒಟ್ಟು ಆದಾಯ ಯಾ ಆಸ್ತಿ ರೂ. 81,02,997 ಆಗಿದ್ದು, ಕುಟುಂಬದ ಖರ್ಚು ರೂ. 34,44,798 ಆಗಿತ್ತು. 2007ರ ದಾಳಿ ವೇಳೆ, ಅವರ ಹೆಚ್ಚುವರಿ ಆಸ್ತಿ 40,60,324 ಆಗಿದ್ದು, ಶೇ. 53.58ರಷ್ಟು ಹೆಚ್ಚುವರಿ ಆಸ್ತಿಗೆ ಅಯ್ಯರ್ ಸೂಕ್ತ ದಾಖಲೆ ನೀಡಲು ವಿಫಲವಾಗಿದ್ದರು.