ಪತಿ ಜೊತೆ ಸೇರಿ ಅಪಾರ ಅಕ್ರಮ ಆಸ್ತಿ ಸಂಪಾದನೆ: ಹಿರಿಯ ಸಿವಿಲ್ ನ್ಯಾಯಾಧೀಶರ ಬಂಧನ!
ಪತಿ ಜೊತೆ ಸೇರಿ ಅಪಾರ ಅಕ್ರಮ ಆಸ್ತಿ ಸಂಪಾದನೆ: ಹಿರಿಯ ಸಿವಿಲ್ ನ್ಯಾಯಾಧೀಶರ ಬಂಧನ!
ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಚನಾ ತಿವಾರಿ ಲಖನ್‌ಪಾಲ್ ಅವರನ್ನು ಆಕೆಯ ಪತಿ ಅಲೋಕ್ ಲಖನ್‌ಪಾಲ್ ಸಮೇತ ಸಿಬಿಐ ಬಂಧಿಸಿದೆ.
ಭ್ರಷ್ಟಾಚಾರ ನಿಗ್ರಹ ಕಾಯಿದೆ ಅಡಿ ಪಬ್ಲಿಕ್ ಸರ್ವೆಂಟ್ ಅಪರಾಧಿಕ ದುಷ್ಕೃತ್ಯ ಎಸಗಿದ ಆರೋಪದಲ್ಲಿ ನವದೆಹಲಿಯ ತೀಸ್ ಹಜಾರಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಚನಾ ಲಖನ್‌ಪಾನ್ ಅವರನ್ನು ಪತಿ ಸಹಿತ ಬಂಧಿಸಲಾಗಿದೆ.
ತನ್ನ ಪತಿ ವಕೀಲರಾಗಿರುವ ಅಲೋಕ್ ಹೆಸರಲ್ಲಿ ಜುಲೈ 2006ರಿಂದ ಸೆಪ್ಟೆಂಬರ್ 2016ರವರೆಗೆ ಆರೋಪಿ ನ್ಯಾಯಾಧೀಶರಾದ ರಚನಾ ಅಪಾರ ಆಸ್ತಿ ಅಕ್ರಮವಾಗಿ ಸಂಗ್ರಹಿಸಿದ್ದಾರೆ. ಈ ಅವಧಿಯಲ್ಲಿ ದಂಪತಿ ರೂ. 2.99 ಕೋಟಿ ಮೊತ್ತದ ಅಕ್ರಮ ಆಸ್ತಿ ಸಂಪಾದಿಸಿದ್ದಾರೆ.
ಎಂದು ಎಫ್‌ಐಆರ್ ತಿಳಿಸಿದೆ.
ಸಿಬಿಐ ತನಿಖೆ ವೇಳೆ ಮನೆಯಲ್ಲಿ ದಾಖಲೆ ರಹಿತ ರೂ. 9,40,990 ದೊರೆತಿದೆ. ಈ ಬಗ್ಗೆ ರಚನಾ ಇಲಾಖೆಗೆ ತಿಳಿಸಿಲ್ಲ. ಅಲ್ಲದೆ, ನೂತನವಾಗಿ ನಿರ್ಮಿಸಿದ ಮನೆಯ ನಿಜವಾದ ಮೌಲ್ಯವನ್ನೂ ಮರೆಮಾಚಿದ್ದಾರೆ. ಜೊತೆಗೆ ತಮ್ಮ ಮತ್ತು ಸಂಬಂಧಿಕರ ಹೆಸರಿನಲ್ಲಿ ಆಸ್ತಿ ಸಂಪಾದನೆಯಲ್ಲಿ ರಚನಾ ಅವರ ಪತಿ ಅಲೋಕ್ ತೊಡಗಿದ್ದರು.
ಈ ಬಗ್ಗೆ FIR ದಾಖಲಿಸಲಾಗಿದ್ದು, ಸೆಕ್ಷನ್ 109ರ ಅಡಿಯಲ್ಲಿ ಅಪರಾಧಕ್ಕೆ ಕುಮ್ಮಕ್ಕು ನೀಡುವುದಕ್ಕೆ ಅವರು ಹೊಣೆಗಾರರಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಕಳೆದ 2016ರಲ್ಲಿ ಲಂಚಕ್ಕೆ ಕೈಚಾಚುತ್ತಿದ್ದಾಗ ನ್ಯಾ. ರಚನಾ ಮತ್ತು ಆಕೆಯ ಪತಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಬಳಿಕ, ನ್ಯಾ. ರಚನಾ ಜಾಮೀನು ಪಡೆದಿದ್ದರು.