ಸಕ್ಸೆಷನ್ ಸರ್ಟಿಫಿಕೇಟ್ ನೀಡಲು ಸಿವಿಲ್ ಜಡ್ಜ್ (ಕಿರಿಯ ವಿಭಾಗ) ನ್ಯಾಯಾಲಯಕ್ಕೆ ಅಧಿಕಾರ ವ್ಯಾಪ್ತಿ ಇದೆಯೇ?
ಸಕ್ಸೆಷನ್ ಸರ್ಟಿಫಿಕೇಟ್ ನೀಡಲು ಸಿವಿಲ್ ಜಡ್ಜ್ (ಕಿರಿಯ ವಿಭಾಗ) ನ್ಯಾಯಾಲಯಕ್ಕೆ ಅಧಿಕಾರ ವ್ಯಾಪ್ತಿ ಇದೆಯೇ?
ಇತ್ತೀಚಿನ ದಿನಗಳಲ್ಲಿ ಕಿರಿಯ ವಿಭಾಗದ ಸಿವಿಲ್ ನ್ಯಾಯಾಲಯಗಳಿಗೆ ಸಕ್ಸೆಶನ್ ಸರ್ಟಿಫಿಕೇಟ್ ಯಾನೆ ವಾರಿಸು ಪ್ರಮಾಣ ಪತ್ರವನ್ನು ನೀಡುವ ಅಧಿಕಾರ ವ್ಯಾಪ್ತಿ ಇಲ್ಲ ಎಂಬ ಬಗ್ಗೆ ಚರ್ಚೆಗಳಾಗುತ್ತಿವೆ.
ಮಾನ್ಯ ಕರ್ನಾಟಕ ಹೈಕೋರ್ಟ್ GOB 460/78 ದಿನಾಂಕ 12.3.1979 ರ ಪ್ರಕಾರ ಹೊರಡಿಸಿದ ಅಧಿಸೂಚನೆಯಂತೆ ಹಿರಿಯ ಮತ್ತು ಕಿರಿಯ ವಿಭಾಗದ ಸಿವಿಲ್ ನ್ಯಾಯಾಲಯಗಳಿಗೆ ಸಕ್ಸೆಷನ್ ಸರ್ಟಿಫಿಕೇಟ್ ನೀಡುವ ಅಧಿಕಾರ ಪ್ರಾಪ್ತವಾಗಿದೆ.
ಹಾಗಿದ್ದರೆ ಕಿರಿಯ ವಿಭಾಗದ ಸಿವಿಲ್ ನ್ಯಾಯಾಲಯಗಳಿಗೆ ಸಕ್ಸೆಷನ್ ಸರ್ಟಿಫಿಕೇಟ್ ನೀಡುವ ಅಧಿಕಾರ ವ್ಯಾಪ್ತಿ ಇಲ್ಲವೆಂಬ ಗೊಂದಲ ಮೂಡಲು ಕಾರಣವೇನು?
ಗೊಂದಲ ಮೂಡಲು ಮುಖ್ಯ ಕಾರಣ ದಿನಾಂಕ 21.1.2020 ರಂದು ಮಾನ್ಯ ಕರ್ನಾಟಕ ಹೈಕೋರ್ಟ್ ಹೊರಡಿಸಿದ ಸುತ್ತೋಲೆ ಸಂಖ್ಯೆ R(J) 5/2020 ನ್ನು ಹಾಗೂ ಮಾನ್ಯ ಕರ್ನಾಟಕ ಹೈಕೋರ್ಟ್ CRC No.1/2019 ಈ ಪ್ರಕರಣದಲ್ಲಿ ದಿನಾಂಕ 8.3.2022 ರಂದು ನೀಡಿದ ಆದೇಶವನ್ನು ಸಮರ್ಪಕವಾಗಿ ಅರ್ಥೈಸಿ ಕೊಳ್ಳದೆ ಇರುವುದು.
ದಿನಾಂಕ 12.3.1979 ರ ಅಧಿಸೂಚನೆ ಹೊರಡಿಸಲು ಕಾರಣವಾದ ಅಂಶಗಳು ಯಾವುವು ಎಂಬ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕ ವಾಗಿದೆ.
*ಅನಂತಮತಿ ವಿರುದ್ಧ ರತ್ನಾವತಿ ಮತ್ತಿತ್ತರು* ಈ ಪ್ರಕರಣದಲ್ಲಿ ಮಾನ್ಯ ಕರ್ನಾಟಕ ಹೈಕೋರ್ಟ್ ದಿನಾಂಕ 19.4.1977 ರಂದು ನೀಡಿದ ತೀರ್ಪನ್ನು ಅನುಷ್ಠಾನಗೊಳಿಸುವ ಸಲುವಾಗಿ ಮೇಲ್ಕಾಣಿಸಿದ ದಿನಾಂಕ 12.3.1979 ರ ಸುತ್ತೋಲೆಯನ್ನು ಹೊರಡಿಸಲಾಯಿತು.
ಸದರಿ ಪ್ರಕರಣದ ಸಾರಾಂಶವೆಂದರೆ ಸಕ್ಸೆಷನ್ ಸರ್ಟಿಫಿಕೇಟ್ ನೀಡುವಂತೆ ಕೋರಿ ಪುತ್ತೂರು ಮುನ್ಸೀಫ್ ನ್ಯಾಯಾಲಯದಲ್ಲಿ (ಈಗಿನ ಹೆಸರು ಕಿರಿಯ ಸಿವಿಲ್ ನ್ಯಾಯಾಲಯ) ದಾಖಲಿಸಲಾದ ಪ್ರಕರಣವನ್ನು ಪುರಸ್ಕರಿಸಿದ ಮುನ್ಸಿಫರ ಆದೇಶವನ್ನು ಮಾನ್ಯ ಕರ್ನಾಟಕ ಹೈಕೋರ್ಟಿನಲ್ಲಿ ಪ್ರಶ್ನಿಸಲಾಗಿ ಗೌರವಾನ್ವಿತ ನ್ಯಾಯಮೂರ್ತಿ ಕೆ. ಜಗನ್ನಾಥ್ ಶೆಟ್ಟಿ ಅವರ ನ್ಯಾಯಪೀಠವು ಎಲ್ಲಾ ಅಂಶಗಳನ್ನು ವಿವರವಾಗಿ ಚರ್ಚಿಸಿ ಮುನ್ಸೀಫ್ ನ್ಯಾಯಾಲಯಕ್ಕೆ ಸಕ್ಸೆಷನ್ ಸರ್ಟಿಫಿಕೇಟ್ ನೀಡುವ ಅಧಿಕಾರ ವ್ಯಾಪ್ತಿ ಇದೆ ಎಂಬ ಮಹತ್ವದ ತೀರ್ಪನ್ನು ನೀಡಿತು.
ಕರ್ನಾಟಕ ಹೈಕೋರ್ಟ್ ನ ಸುತ್ತೋಲೆಯಂತೆ ಹಿರಿಯ ಸಿವಿಲ್ ನ್ಯಾಯಾಲಯಗಳು ಹಾಗೂ ಕಿರಿಯ ವಿಭಾಗದ ಸಿವಿಲ್ ನ್ಯಾಯಾಲಯಗಳು ತಮ್ಮ ತಮ್ಮ ನ್ಯಾಯಾಲಯದ ಭೌಗೋಳಿಕ ಹಾಗೂ ಹಣಕಾಸಿನ ಅಧಿಕಾರ ವ್ಯಾಪ್ತಿಗಳ ಅನ್ವಯ ವಾರೀಸು ಪ್ರಮಾಣ ಪತ್ರ (Succession Certificate) ಕೋರಿ ದಾಖಲಿಸಲಾದ ಪ್ರಕರಣಗಳನ್ನು ಇತ್ಯರ್ಥ ಪಡಿಸುತ್ತಿದ್ದವು.
ದಿನಾಂಕ 12.3.1979 ರ ಅಧಿಸೂಚನೆ ಅನ್ವಯ ಹಿರಿಯ ಮತ್ತು ಕಿರಿಯ ಸಿವಿಲ್ ನ್ಯಾಯಾಲಯಗಳಿಗೆ ಸಕ್ಸೆಷನ್ ಸರ್ಟಿಫಿಕೇಟ್ ನೀಡುವ ಅಧಿಕಾರ ಮಾತ್ರ ಪ್ರಾಪ್ತವಾಗಿತ್ತು ಆದರೆ ಪ್ರೊಬೇಟ್ ಅಥವಾ ಲೆಟರ್ ಆಫ್ ಅಡ್ಮಿನಿಸ್ಟ್ರೇಷನ್ ನೀಡುವ ಅಧಿಕಾರ ವ್ಯಾಪ್ತಿ ಕೇವಲ ಜಿಲ್ಲಾ ನ್ಯಾಯಾಲಯಕ್ಕೆ ಮಾತ್ರ ಇತ್ತು. ಪ್ರೊಬೇಟ್ ಅಥವಾ ಲೆಟರ್ ಆಫ್ ಅಡ್ಮಿನಿಸ್ಟ್ರೇಷನ್ ನೀಡುವ ಅಧಿಕಾರ ವ್ಯಾಪ್ತಿ ಹಿರಿಯ ಅಥವಾ ಕಿರಿಯ ಸಿವಿಲ್ ನ್ಯಾಯಾಲಯಗಳಿಗೆ ಇರಲಿಲ್ಲ.
ಈತನ್ಮಧ್ಯೆ ಮಡಿಕೇರಿಯ ಹಿರಿಯ ಸಿವಿಲ್ ನ್ಯಾಯಾಲಯವು ಪ್ರೊಬೇಟ್ ಗೆ ಸಂಬಂಧಪಟ್ಟ ಪ್ರಕರಣವನ್ನು ಇತ್ಯರ್ಥಪಡಿಸಿ ತೀರ್ಪು ನೀಡಿತು. ಸದರಿ ತೀರ್ಪಿನ ವಿರುದ್ಧ ಕೊಡಗು - ಮಡಿಕೇರಿ ಜಿಲ್ಲಾ ನ್ಯಾಯಾಲಯದಲ್ಲಿ ಮೇಲ್ಮನವಿ ದಾಖಲಾಯಿತು. ಅಧಿಕಾರ ವ್ಯಾಪ್ತಿಯ ಕುರಿತು ಸಂದೇಹ ವಿರುವುದರಿಂದ ಕೊಡಗು - ಮಡಿಕೇರಿಯ ಜಿಲ್ಲಾ ನ್ಯಾಯಾಧೀಶರು ಮಾನ್ಯ ಕರ್ನಾಟಕ ಹೈಕೋರ್ಟಿಗೆ ಪ್ರಕರಣವನ್ನು ಒಪ್ಪಿಸಿದರು. ಹೈಕೋರ್ಟ್ ನಲ್ಲಿ ಪ್ರಕರಣವು CRC 1/2019 ನಂಬರ್ ನಲ್ಲಿ ನೋಂದಾಯಿಸಲ್ಪಟ್ಟು ಗೌರವಾನ್ವಿತ ನ್ಯಾಯಮೂರ್ತಿಗಳಾದ ಪಿ. ಎಸ್. ದಿನೇಶ್ ಕುಮಾರ್ ಮತ್ತು ಉಮಾ ಎಂ.ಜಿ. ಅವರನ್ನು ಒಳಗೊಂಡ ವಿಭಾಗೀಯ ಪೀಠದಲ್ಲಿ ವಿಚಾರಣೆ ನಡೆಯಿತು. ಪಕ್ಷಕಾರರ
ವಾದವನ್ನು ಆಲಿಸಿದ ನ್ಯಾಯ ಪೀಠವು ಹಿರಿಯ ಸಿವಿಲ್ ನ್ಯಾಯಾಲಯಕ್ಕೆ ಪ್ರೊಬೇಟ್ ಸರ್ಟಿಫಿಕೇಟ್ ನೀಡುವ ಅಧಿಕಾರ ವ್ಯಾಪ್ತಿ ಇಲ್ಲ. ಕೇವಲ ಸಕ್ಸೆಶನ್ ಸರ್ಟಿಫಿಕೇಟ್ ನೀಡುವ ಅಧಿಕಾರ ವ್ಯಾಪ್ತಿ ಮಾತ್ರ ಇದೆ ಎಂಬ ಆದೇಶವನ್ನು ನೀಡಿ ಹಿರಿಯ ಸಿವಿಲ್ ನ್ಯಾಯಾಲಯವು ಮಾಡಿದ ಆದೇಶವನ್ನು ವಜಾ ಗೊಳಿಸಿತು. ಪ್ರೊಬೇಟ್ ಗೆ ಸಂಬಂಧಪಟ್ಟ ಪ್ರಕರಣವಾಗಿರುವುದರಿಂದ ಕೊಡಗು ಮಡಿಕೇರಿಯ ಜಿಲ್ಲಾ ನ್ಯಾಯಾಲಯವೇ ಪ್ರಕರಣವನ್ನು ಇತ್ಯರ್ಥ ಗೊಳಿಸತಕ್ಕದ್ದು ಎಂಬ ತೀರ್ಪನ್ನು ನೀಡಿತು.
ಸದರಿ ಪ್ರಕರಣದಲ್ಲಿ ಹೈಕೋರ್ಟ್ ನೀಡಿದ ಆದೇಶದಲ್ಲಿನ ಒಂದು ವಾಕ್ಯವನ್ನು ಅರ್ಥೈಸಿಕೊಳ್ಳುವುದರಲ್ಲಿ ಆಗಿರುವ ಪ್ರಮಾದವೇ ಕಿರಿಯ ಸಿವಿಲ್ ನ್ಯಾಯಾಲಯಗಳಿಗೆ ಸಕ್ಸೆಷನ್ ಸರ್ಟಿಫಿಕೇಟ್ ನೀಡುವ ಅಧಿಕಾರ ಇದೆಯೇ ಇಲ್ಲವೇ ಎಂಬ ಬಗ್ಗೆ ಸಂದೇಹವನ್ನು ಉಂಟು ಮಾಡಿದೆ. ಆ ವಾಕ್ಯ ಈ ಕೆಳಗಿನಂತಿದೆ.
*It has been ordered that the Notification number GOB 460 / 78 dated 12.3.1979 has limited scope and invests the power in Senior Civil Judges only for issuance of Succession Certificate under part X of the Indian Succession Act and not Probate*
ಭಾರತೀಯ ಉತ್ತರಾಧಿಕಾರ ಕಾಯ್ದೆ 1925 ರ ಪ್ರಕಾರ ಹಿರಿಯ ಸಿವಿಲ್ ನ್ಯಾಯಾಧೀಶರು ಮಾತ್ರ ಸಕ್ಸೆಶನ್ ಸರ್ಟಿಫಿಕೇಟ್ ಅನ್ನು ನೀಡಬಹುದು ಆದರೆ ಪ್ರೊಬೇಟ್ ಸರ್ಟಿಫಿಕೇಟ್ ನೀಡುವಂತಿಲ್ಲ ಎಂಬ ವಾಕ್ಯವು ಹೈಕೋರ್ಟ್ ಆದೇಶದಲ್ಲಿರುವುದರಿಂದ ಕೇವಲ ಹಿರಿಯ ಸಿವಿಲ್ ನ್ಯಾಯಾಧೀಶರು ಮಾತ್ರ ಸಕ್ಸೆಷನ್ ಸರ್ಟಿಫಿಕೇಟ್ ಅನ್ನು ನೀಡಬಹುದು ಎಂಬ ತಪ್ಪು ಕಲ್ಪನೆಯಿಂದಾಗಿ ಗೊಂದಲ ಮೂಡಿದೆ. ಸದರಿ ಹೈಕೋರ್ಟ್ ಆದೇಶದಲ್ಲಿ ಕಿರಿಯ ಸಿವಿಲ್ ನ್ಯಾಯಾಲಯಗಳಿಗೆ ಸಕ್ಸೆಷನ್ ಸರ್ಟಿಫಿಕೇಟ್ ನೀಡುವ ಅಧಿಕಾರ ವ್ಯಾಪ್ತಿ ಇಲ್ಲ ಎಂಬುದಾಗಿ ಎಲ್ಲಿಯೂ ಉಲ್ಲೇಖ ಇಲ್ಲ. ಆ ರೀತಿಯ ಆದೇಶ ಹೊರಡಿಸಲು ಸಾಧ್ಯವಿಲ್ಲ. ಏಕೆಂದರೆ ಈಗಾಗಲೇ ನ್ಯಾಯಮೂರ್ತಿ ಕೆ. ಜಗನ್ನಾಥ ಶೆಟ್ಟಿ ಅವರ ನ್ಯಾಯಪೀಠವು ಅನಂತಮತಿ ವಿರುದ್ಧ ರತ್ನಾವತಿ ಪ್ರಕರಣದಲ್ಲಿ ನೀಡಿದ ತೀರ್ಪಿನ ಪ್ರಕಾರ ಕಿರಿಯ ಸಿವಿಲ್ ನ್ಯಾಯಾಧೀಶ ನ್ಯಾಯಾಲಯಕ್ಕೆ ಸಕ್ಸೆಷನ್ ಸರ್ಟಿಫಿಕೇಟ್ ನೀಡುವ ಅಧಿಕಾರ ವ್ಯಾಪ್ತಿ ಪ್ರಾಪ್ತವಾಗಿದೆ.
ದಿನಾಂಕ 21.1.2020 ರಂದು ಮಾನ್ಯ ಕರ್ನಾಟಕ ಹೈಕೋರ್ಟ್ ಹೊರಡಿಸಿದ ಸುತ್ತೋಲೆ ಸಂಖ್ಯೆ R(J)5/2020 ಪ್ರಕಾರ ಹಿರಿಯ ಸಿವಿಲ್ ನ್ಯಾಯಾಧೀಶರಿಗೆ ಭಾರತೀಯ ಉತ್ತರಾಧಿಕಾರ ಕಾಯ್ದೆ 1925 ರ ಕಲಂ 388 ರನ್ವಯ ಪ್ರದತ್ತ ಅಧಿಕಾರದಡಿ ಸಕ್ಸಷನ್ ಸರ್ಟಿಫಿಕೇಟ್ ನೀಡುವ ಅಧಿಕಾರ ವ್ಯಾಪ್ತಿ ಮಾತ್ರ ಪ್ರಾಪ್ತವಾಗಿದೆ. ಪ್ರೊಬೇಟ್ ನೀಡುವ ಅಧಿಕಾರ ವ್ಯಾಪ್ತಿ ಇಲ್ಲವೆಂದು ತಿಳಿಸಲಾಗಿದೆ. ಈ ಒಂದು ವಾಕ್ಯವನ್ನು ಕೂಡ ಅರ್ಥೈಸುವುದರಲ್ಲಿ ಆಗಿರುವ ಪ್ರಮಾದದಿಂದಾಗಿ ಕಿರಿಯ ಸಿವಿಲ್ ನ್ಯಾಯಾಲಯಗಳಿಗೆ ಸಕ್ಸೆಷನ್ ಸರ್ಟಿಫಿಕೇಟ್ ನೀಡುವ ಅಧಿಕಾರ ಇಲ್ಲ ಎಂಬ ಅಭಿಪ್ರಾಯ ಮೂಡಲು ಕಾರಣವಾಗಿದೆ.
ಒಟ್ಟಿನಲ್ಲಿ ಕಿರಿಯ ವಿಭಾಗದ ಸಿವಿಲ್ ನ್ಯಾಯಾಲಯಗಳಿಗೆ ಐದು ಲಕ್ಷದೊಳಗಿನ ಮೌಲ್ಯದ P&SC ಪ್ರಕರಣಗಳಲ್ಲಿ ಸಕ್ಸೆಷನ್ ಸರ್ಟಿಫಿಕೇಟ್ ನೀಡುವ ಅಧಿಕಾರ ವ್ಯಾಪ್ತಿ ಇದೆ. ಆದರೆ ಪ್ರೊಬೇಟ್ ಅಥವಾ ಲೆಟರ್ ಆಫ್ ಅಡ್ಮಿನಿಸ್ಟ್ರೇಷನ್ ನೀಡುವ ಅಧಿಕಾರ ಜಿಲ್ಲಾ ನ್ಯಾಯಾಲಯಕ್ಕೆ ಮಾತ್ರ ಇದೆ.
✍️ ಪ್ರಕಾಶ್ ನಾಯಕ್, ಶಿರಸ್ತೆದಾರರು, ನ್ಯಾಯಾಂಗ ಇಲಾಖೆ, ಮಂಗಳೂರು