ಮಗುವಿನ ಉಪನಾಮ ನಿರ್ಧರಿಸಲು ತಾಯಿಗೆ ಹಕ್ಕಿದೆ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಮಗುವಿನ ಉಪನಾಮ ನಿರ್ಧರಿಸಲು ತಾಯಿಗೆ ಹಕ್ಕಿದೆ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ತಂದೆಯ ನಿಧನದ ನಂತರ ತಾಯಿಯೇ ಮಗುವಿನ ಸಹಜ ರಕ್ಷಕಿ. ಮಗುವಿನ ಪಾಲಕರ ಸ್ಥಾನದಲ್ಲಿ ತಾಯಿ ಒಬ್ಬರೇ ಇದ್ದಾಗ, ಆ ಮಗುವಿನ ಕುಲನಾಮ ಯಾ ಉಪನಾಮ ನೀಡುವ ಹಕ್ಕು ತಾಯಿಗೆ ಇದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಆಂಧ್ರ ಪ್ರದೇಶ ಹೈಕೋರ್ಟ್ ನೀಡಿದ್ದ ತೀರ್ಪನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್, ಅಂತಹ ತಾಯಿಗೆ ಮಗುವನ್ನು ದತ್ತು ನೀಡುವ ಅದಿಕಾರವೂ ಇದೆ ಎಂದು ಹೇಳಿದೆ.
ಮೊದಲ ಪತ್ನಿ ಸಾವನ್ನಪ್ಪಿದ ಬಳಿಕ ಮರು ವಿವಾಹವಾಗಿದ್ದ ಮಹಿಳೆಯೊಬ್ಬರು, ಆಂಧ್ರ ಪ್ರದೇಶ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಈ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾ. ದಿನೇಶ್ ಮಾಹೇಶ್ವರಿ ಮತ್ತು ನ್ಯಾ. ಕೃಷ್ಣ ಮುರಾರಿ ಅವರ ನೇತೃತ್ವದ ವಿಭಾಗೀಯ ಪೀಠ ಈ ಮಹತ್ವದ ತೀರ್ಪು ನೀಡಿದೆ.
ಪ್ರಕರಣದಲ್ಲಿ, ಮಹಿಳೆಯೊಬ್ಬರಿಗೆ ತಮ್ಮ 2ನೇ ಪತಿಯ ಹೆಸರು/ಕುಲನಾಮವನ್ನು ಮೊದಲನೇ ಪತಿಯಿಂದ ಪಡೆದ ಮಗುವಿಗೆ ಮಲತಂದೆ ಎಂದು ದಾಖಲೆಗಳಲ್ಲಿ ಉಲ್ಲೇಖಿಸಬೇಕು ಎಂದು ಆಂಧ್ರ ಪ್ರದೇಶ ಹೈಕೋರ್ಟ್ ತೀರ್ಪು ನೀಡಿತ್ತು.
"ಅರ್ಜಿದಾರರಿಗೆ ತಮ್ಮ ಪತಿಯ ಹೆಸರನ್ನು ಮಲ ತಂದೆ ಎಂದು ಮಗುವಿನ ದಾಖಲೆಯಲ್ಲಿ ಉಲ್ಲೇಖಿಸುವಂತೆ ನಿರ್ದೇಶಿಸಿರುವ ಆಂಧ್ರ ಪ್ರದೇಶ ಹೈಕೋರ್ಟ್ ತೀರ್ಪು ಬಹುತೇಕ ತಿಳಿಗೇಡಿತನ ಮತ್ತು ಕ್ರೌರ್ಯದಿಂದ ಕೂಡಿದೆ. ಈ ತೀರ್ಪು ಆ ಮಗುವಿನ ಮಾನಸಿಕ ಆರೋಗ್ಯ ಮತ್ತು ಆತ್ಮಸ್ಥೈರ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಮಗು ಬೆಳೆದು ಭವಿಷ್ಯದಲ್ಲಿ ತನ್ನ ವ್ಯಕ್ತಿತ್ವವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಹೆಸರು ಅತ್ಯಂತ ಮಹತ್ವದ ಪಾತ್ರ ಪಡೆಯುತ್ತದೆ. ತನ್ನದಲ್ಲದ ಕುಟುಂಬದ ಹೆಸರನ್ನು ಮಗುವಿಗೆ ಇಟ್ಟರೆ ಅದು ಆ ಮಗುವಿನ ಸುಪ್ತ ಮನಸ್ಸಿನ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಸಮಾಜವು ಆ ಮಗುವನ್ನು ಅನಗತ್ಯ ಪ್ರಶ್ನೆಗಳಿಗೆ ಒಡ್ಡಿ, ಹೆತ್ತವರ ನಡುವಿನ ಸುಗಮ, ಸಹಜ ಸಂಬಂಧಕ್ಕೆ ಧಕ್ಕೆ ತರಲಿದೆ" ಎಂದು ನ್ಯಾಯಪೀಠ ಹೇಳಿದೆ.
"ಮಹಿಳೆಯ 2ನೇ ಪತಿಯ ಹೆಸರನ್ನು ಮಗುವಿನ ದಾಖಲೆಯಲ್ಲಿ ಸೇರಿಸುವಂತೆ ಹೈಕೋರ್ಟ್ ನೀಡಿರುವ ನಿರ್ದೇಶನವು ಅತ್ಯಂತ ಕ್ರೂರ ಮತ್ತು ಅರ್ಥಹೀನವಾಗಿದೆ. ಇದು ಮಗುವಿನ ಮಾನಸಿಕ ಆರೋಗ್ಯ ಮತ್ತು ಆತ್ಮಗೌರವದ ಮೇಲೆ ಪರಿಣಾಮ ಬೀರುತ್ತದೆ" ಎಂದು ನ್ಯಾಯಪೀಠ ಹೇಳಿದೆ.
ಪ್ರಕರಣದ ವಿವರ
ಪುತ್ರನ ಮರಣಾನಂತರ ಸೊಸೆ ಮತ್ತೊಂದು ವಿವಾಹವಾದ ಪರಿಣಾಮ ಪೋಷಕ ಕಾಯಿದೆ (ಗಾರ್ಡಿಯನ್ಸ್ ಮತ್ತು ವಾರ್ಡ್ಸ್ ಕಾಯಿದೆ) ಪ್ರಕಾರ ಅಜ್ಜ-ಅಜ್ಜಿ 2008ರಲ್ಲಿ ಮೊಮ್ಮೊಗನನ್ನು ತಮ್ಮ ಸುಪರ್ದಿಗೆ ನೀಡಬೇಕು ಎಂದು ನ್ಯಾಯಾಲಯದ ಮೊರೆ ಹೋಗಿದ್ದರು.
ಈ ಮನವಿಯನ್ನು ತಿರಸ್ಕರಿಸಿದ ವಿಚಾರಣಾಧೀನ ನ್ಯಾಯಾಲಯ, ಮಗುವನ್ನು ಅಮ್ಮನಿಂದ ಪ್ರತ್ಯೇಕಿಸುವುದು ವಿವೇಚನಾರಹಿತ ನಿರ್ಧಾರ ಎಂದು ತೀರ್ಪು ನೀಡಿತ್ತು. ಆದರೂ, ಅಜ್ಜ-ಅಜ್ಜಿಗೆ ಮಗುವನ್ನು ನಿಯಮಿತವಾಗಿ ಭೇಟಿ ಮಾಡುವ ಅವಕಾಶವನ್ನು ಕಲ್ಪಿಸಿತ್ತು. ಈ ಆದೇಶವನ್ನು ಆಂಧ್ರ ಪ್ರದೇಶ ಹೈಕೋರ್ಟ್ ಎತ್ತಿ ಹಿಡಿದಿತ್ತು. ಜೊತೆಗೆ ಕೆಲ 'ಆಕ್ಷೇಪಾರ್ಹ' ನಿರ್ದೇಶನಗಳನ್ನೂ ನೀಡಿತ್ತು.
3 ತಿಂಗಳ ಒಳಗೆ ತಾಯಿ ತನ್ನ ಮಗುವಿನ ಹೆಸರಿನ ಜೊತೆಗೆ ಮಲ ತಂದೆಯ ಉಪನಾಮದ ಬದಲಿಗೆ ಜೈವಿಕ ತಂದೆಯ ಉಪನಾಮ ಸೇರಿಸುವ ಪ್ರಕ್ರಿಯೆ ಪೂರ್ಣಗೊಳಿಸಬೇಕು.
ಮಗುವಿನ ಎಲ್ಲ ದಾಖಲೆಗಳಲ್ಲಿ ಅಸಲಿ ತಂದೆಯ ಹೆಸರು ಸೇರಿಸಲು ಅವಕಾಶವಿದೆಯೋ ಅಲ್ಲೆಲ್ಲಾ ಅವರ ಹೆಸರು ಸೇರ್ಪಡೆ ಮಾಡಬೇಕು. ಎಲ್ಲಿ ಹೆಸರು ಬದಲಿಸಲು ಆಗುವುದಿಲ್ಲವೋ ಅಲ್ಲಿ ಮಲ ತಂದೆ ಎಂದು ಮಾಡಬೇಕು ಎಂದು ಹೇಳಿತ್ತು.
ಆದರೆ, ಮಗುವಿನ ಅಜ್ಜ-ಅಜ್ಜಿ ಯಾವುದೇ ಹೆಚ್ಚುವರಿ ಷರತ್ತುಗಳನ್ನು ಸೇರಿಸಲು ಹೈಕೋರ್ಟನ್ನು ಪ್ರಾರ್ಥಿಸಿರಲಿಲ್ಲ. ಆದರೂ, ಹೈಕೋರ್ಟ್ ತನ್ನ ಆದೇಶದಲ್ಲಿ ಶರತ್ತುಗಳನ್ನು ಹೆಚ್ಚುವರಿಯಾಗಿ ಸೇರಿಸಿದೆ ಎಂದು ತಾಯಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.